7ನೇ ತರಗತಿಗೆ ಪಬ್ಲಿಕ್ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ
ಮಂಡ್ಯ

7ನೇ ತರಗತಿಗೆ ಪಬ್ಲಿಕ್ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ

January 8, 2020

ಮಂಡ್ಯ, ಜ.7(ನಾಗಯ್ಯ)- ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲಿಗೆ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶವೃದ್ಧಿ ಹಾಗೂ ಪರೀಕ್ಷೆ ಎದುರಿ ಸುವುದು ಹೇಗೆ ಎಂಬ ವಿಷಯದ ಬಗ್ಗೆ ನಡೆದ ವಿದ್ಯಾರ್ಥಿ ಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಬಿಂಬಿಸಿರುವುದರಿಂದ ವಿದ್ಯಾರ್ಥಿ ಗಳಲ್ಲಿ ಆತಂಕ ಎದುರಾಗಿದೆ. ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸುತ್ತಿಲ್ಲ. ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಯನ್ನಷ್ಟೇ ನಡೆಸಲಾಗುತ್ತಿದೆ. ಇದಕ್ಕೆ ಯಾರೂ ಆತಂಕ ಪಡಬೇಕಿಲ್ಲ ಎನ್ನುವುದರೊಂದಿಗೆ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ವಿವಾದಕ್ಕೆ ಕೊನೆಗೂ ತೆರೆ ಎಳೆದರು.

ಈ ಸಾಮಾನ್ಯ ಮೌಲ್ಯ ಮಾಪನ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರಾಜ್ಯಮಟ್ಟದಲ್ಲಿಯೇ ತಯಾರಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಇತರ ಶಾಲೆಗಳ ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ. ಆದರೆ, ಇಲ್ಲಿ ಯಾರನ್ನೂ ಅನುತ್ತೀರ್ಣ ಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಪರೀಕ್ಷೆಗಳನ್ನು ಎದುರಿಸುವ ಮಕ್ಕಳ ಕಲಿಕಾಮಟ್ಟದ ಬಗ್ಗೆ ಪ್ರಮಾಣಪತ್ರ ನೀಡಲಾಗುತ್ತದೆ. ಇದು ಕೇವಲ ಮಕ್ಕಳ ಕಲಿಕಾ ಸಾಮರ್ಥ್ಯ ಅರಿಯುವ ಉದ್ದೇಶದಿಂದ ನಡೆಸುತ್ತಿರುವ ಪರೀಕ್ಷೆಯಷ್ಟೆ. ಅರ್ಧ ವರ್ಷದ ಬಳಿಕದ ಪಠ್ಯಕ್ರಮದ ಪ್ರಶ್ನೆಗಳನ್ನು ಮಾತ್ರ ಕಲಿಸಲಾಗುತ್ತದೆ. ಇದು ಮಕ್ಕಳ ಮುಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದ ಗುಣಮಟ್ಟ ಹೆಚ್ಚಿಸುವುದಕ್ಕೆ ಸಹಕಾರಿಯಾಗಲಿದೆ. ಈ ಸಾಮಾನ್ಯ ಪರೀಕ್ಷೆಯನ್ನೇ ಜನರು ಪಬ್ಲಿಕ್ ಪರೀಕ್ಷೆ ಎಂದು ಗಾಬರಿಪಡುವ ಅಗತ್ಯವಿಲ್ಲ ಎಂದರು.

ಅವಕಾಶ ಸಿಕ್ಕಾಗ ಸ್ನೇಹಿತರಿಗೆ ಸಹಾಯ ಮಾಡಬೇಕು, ಕಲಿಕೆಯಲ್ಲಿ ತಪ್ಪು ಮಾಡುವವರಿಗೆ ತಪ್ಪು ತಿದ್ದಿಕೊಳ್ಳಲು ನೆರವಾಗಬೇಕು ಎಂದು ಅನೇಕಲ್ ಬಳಿಯ ಚಿಕ್ಕನಹಳ್ಳಿಯ ಸಾಮಾನ್ಯ ವಿದ್ಯಾರ್ಥಿಯ ಯಶಸ್ಸಿನ ಸಾಧನೆ ತಿಳಿಸುವ ಮೂಲಕ ಶಾಲಾ ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಮತ್ತು ಕಲಿಕೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಪರೀಕ್ಷೆಗೆ ಇನ್ನೂ 80 ದಿನಗಳು ಬಾಕಿ ಇದೆ. ಇದಕ್ಕಾಗಿ ಈಗಿನಿಂದಲೇ ಆತಂಕ ಪಡಬೇಕಿಲ್ಲ. ಪರೀಕ್ಷೆಯ ಬಗ್ಗೆ ಧ್ಯಾನ ಮಾಡಿ, ಮನೆಗಳಲ್ಲಿ ಆಚರಿಸುವ ಹಬ್ಬದ ರೀತಿ ಪರೀಕ್ಷೆ ಯನ್ನು ಸಹ ಖುಷಿ ಖುಷಿಯಾಗಿಯೇ ಸ್ವೀಕರಿಸಿ, ಪರೀಕ್ಷೆ ಯೆಂಬ ಆತಂಕ ತೆಗೆದು ಹಾಕಿಬಿಡಿ. ಪೋಷಕರು ಸಹ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಮನೆಯಲ್ಲಿ ಟಿವಿ, ಸಿನಿಮಾ, ಧಾರಾವಾಹಿ ನೋಡುವುದನ್ನು ಕಡಿಮೆ ಮಾಡಿಸಿ, ಆರೋಗ್ಯದ ಕಡೆಗೆ ಗಮನ ಕೊಡಿ, ಹೀಗೆ ಮಾಡಿದ್ದೇ ಆದಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರುವುದರಲ್ಲಿ ಅನುಮಾನವಿಲ್ಲ ಎಂದರು.

ಈ ಬಾರಿ ನನಗೆ ವಿಶ್ವಾಸವಿದೆ. ಮಂಡ್ಯ ಜಿಲ್ಲೆ ಕಳೆದ ಬಾರಿ 10ನೇ ಸ್ಥಾನದಲ್ಲಿತ್ತು. ಈ ಬಾರಿ ಮೊದಲ ಸ್ಥಾನಕ್ಕೆ ಬಂದೇ ಬರಲಿದೆ. ಮಂಡ್ಯದ ಜನ ಕಬ್ಬಿನ ಸಹಿಯುಣ್ಣುವಂತೆಯೇ ಈ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿಯೂ ಸಿಹಿ ನೀಡಲಿ ದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಜಿಪಂನಿಂದ ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಅಂಕ ಗಳಿಸುವ ಮಕ್ಕಳಿಗೆ 80 ಸಾವಿರ ನಗದು ಬಹುಮಾನ ನೀಡುವುದಾಗಿ ನಿರ್ಧರಿಸಿದೆ ಎಂದು ಸಚಿವರು ಇದೇ ವೇಳೆ ಪ್ರಕಟಿಸಿದರು. ವೇದಿಕೆಯಲ್ಲಿ ಜಿಪಂ ಸಿಇಓ ಯಾಲಕ್ಕಿಗೌಡ, ಸುಧಾಕರ್, ಲೊಕೇಶ್, ಪತ್ರಕರ್ತ ನವೀನ್ ಮತ್ತಿತರರಿದ್ದರು.

Translate »