ಸಕ್ರಿಯ ರಾಜಕಾರಣದಿಂದ ಮಾಜಿ ಸ್ಪೀಕರ್ ಕೃಷ್ಣ ನಿವೃತ್ತಿ
ಮಂಡ್ಯ

ಸಕ್ರಿಯ ರಾಜಕಾರಣದಿಂದ ಮಾಜಿ ಸ್ಪೀಕರ್ ಕೃಷ್ಣ ನಿವೃತ್ತಿ

April 19, 2018

ಕೆ.ಆರ್.ಪೇಟೆ: ಕಳೆದ 40 ವರ್ಷಗಳಿಂದ ಶುದ್ಧ ಮತ್ತು ಪ್ರಾಮಾಣಿಕ ರಾಜಕಾರಣ ಮಾಡಿದ ನನಗೆ ಇತ್ತೀಚೆಗೆ ಹಣ ಹಂಚಿಕೆ ಮಾಡಿ ಚುನಾವಣೆಯ ಎದುರಿಸಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿರುವ ಶ್ರೀಮಂತ ರಾಜಕಾರಣಿಗಳ ನಡೆ ಬೇಸರವ ನ್ನುಂಟು ಮಾಡಿದೆ. ಹಾಗಾಗಿ ಇಂತಹ ಕಲುಷಿತ ರಾಜಕಾರಣ ದಲ್ಲಿ ಮುಂದುವರೆಯಲು ನನಗೆ ಮನಸ್ಸಿಲ್ಲ. ಹಾಗಾಗಿ ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಹೇಳಿದರು.

ಪಟ್ಟಣದ ರಾಮದಾಸ್ಸುಲೋಚನಮ್ಮ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರಲ್ಲಿ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಜಯಗಳಿ ಸುವ ಮೂಲಕ ರಾಜಕೀಯ ವೃತ್ತಿ ಬದುಕು ಆರಂಭಿಸಿದ ನಾನು 1985ರಲ್ಲಿ ಪ್ರಥಮ ಭಾರಿಗೆ ಜನತಾ ಪಕ್ಷದ ಮೂಲಕ ರಾಜ್ಯ ವಿಧಾನಸಭೆ ಚುನಾವಣೆಯನ್ನು ಕೇವಲ 32 ಸಾವಿರ ಖರ್ಚು ಮಾಡಿ ಪ್ರವೇಶ ಮಾಡಿದ್ದೆ. ಶಾಸಕನಾದ ಮೊದಲ ಅವಧಿ ಯಲ್ಲಿಯೇ ಸಚಿವನಾಗಿ ಕೆಲಸ ಮಾಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆನಂತರ ಎರಡು ಬಾರಿ ಮತ್ತೆ ವಿಧಾನಸಭೆಗೆ, ಒಮ್ಮೆ ಲೋಕಸಭೆಗೆ ಆಯ್ಕೆಯಾಗಿ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸುವ ಅವಕಾಶ ನನಗೆ ದೊರಕಿದ್ದು ನನ್ನ ಪುಣ್ಯ. ಒಟ್ಟು ಏಳು ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿ ಮೂರು ಬಾರಿ ಗೆದ್ದಿದ್ದೇನೆ. ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಒಮ್ಮೆ ಸಂಸದ ನಾಗಿ ಕೆಲಸ ಮಾಡಿದ್ದೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದ ಸಮಯದಲ್ಲಿ ಮತದಾರರೇ ನಮಗೆ ಪ್ರಚಾರ ಸಂದರ್ಭದಲ್ಲಿ ಚುನಾವಣೆಯ ಖರ್ಚಿಗೆ ಕೈಲಾದಷ್ಟು ಹಣ ನೀಡಿ ಹರಸುತ್ತಿದ್ದರು. ಆದರೆ ಇತ್ತೀಚೆಗೆ ಮತದಾರರಿಗೆ ರಾಜ ಕಾರಣಿಗಳೇ ಹಣ ನೀಡುವ ಕೆಟ್ಟ ನಡವಳಿಕೆ  ಆರಂಭವಾಗಿದ್ದು ಇದನ್ನು ಕಂಡು ನನಗೆ ಬೇಸರವಾಗುತ್ತಿದೆ. ಪವಿತ್ರ ಮತದಾನವು ಮಾರಾಟದ ವಸ್ತುವಾಗಿರುವುದು ನಮ್ಮಂತಹ ಸರಳ ರಾಜಕಾರಣಿಗಳಿಗೆ ಒಗ್ಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 4 ವರ್ಷದ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷದ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದೆ. ಆದರೆ ನನ್ನ ಆರೋಗ್ಯದ ಸಮಸ್ಯೆಯಿಂದ ಕಳೆದ 1 ವರ್ಷದಿಂದಲೂ ಕಾಂಗ್ರೆಸ್ ಸಭೆ ಸಮಾರಂಭದಲ್ಲಿ ಭಾಗವಹಿಸದೇ ಸುಮ್ಮನಿದ್ದೇನೆ. ಹಾಗಾಗಿ ಈಗ ವಿಧಾನಸಭೆಯ ಚುನಾವಣೆ ಸನ್ನಿಹಿತವಾಗಿದೆ. ತಾಲೂಕಿನ ಜನತೆ ನನಗೆ 40 ವರ್ಷಗಳ ಕಾಲ ವರ್ಷಗಳ ನನ್ನ ಮೇಲೆ ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಲೋಕಸಭಾ ಸದಸ್ಯ ನಾದ ನಂತರ ಮಂಡ್ಯದ ಗಾಂಧಿ ಎಂದು ಕರೆಯುತ್ತಾ ತೋರಿದ ಜಿಲ್ಲೆಯ ಜನರ ಪ್ರೀತಿ ವಿಶ್ವಾಸಗಳಿಗೆ ಹೃದಯ ತುಂಬಿದ ಕೃತಜ್ಞತೆ ಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ತಾಲೂಕು ಪ್ರೆಸ್ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಆರ್.ಸಜ್ಜನ್ ಇತರರು ಇದ್ದರು.

 

Translate »