ಮೈಸೂರು: ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸ್ವಾಗತಿಸುತ್ತಿದ್ದು, ಇದಕ್ಕೆ ಕಾರಣರಾದ ಕೇಂದ್ರ ಸಚಿವ ಗೆಹ್ಲೋಟ್ ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಅಭಿನಂದಿಸಲು ಫೆ.2ರಂದು ಕೃತಜ್ಞತಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಖಿಲ
ಕರ್ನಾಟಕ ಬ್ರಾಹ್ಮಣ ಮಹಾ ಸಭಾ ವಲಯ ಉಪಾಧ್ಯಕ್ಷ ಡಾ.ಬಿ.ಆರ್.ನಟರಾಜಜೋಯಿಸ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರಿಗೂ ಮೀಸಲಾತಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಬ್ರಾಹ್ಮಣ ಮಹಾಸಭಾ ಹೋರಾಟ ಮಾಡಿ ಕೊಂಡು ಬಂದಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ, ಕೇಂದ್ರ ಸಚಿವ ದಿ.ಅನಂತ್‍ಕುಮಾರ್ ಸೇರಿದಂತೆ ಅನೇಕರಿಗೆ ಮನವಿ ಸಲ್ಲಿಸಲಾಗಿತ್ತು. ವಿವಿಧ ಸಮಾವೇಶ ಆಯೋ ಜಿಸಿದ ಹಕ್ಕೋತ್ತಾಯ ಮಾಡಲಾಗಿತ್ತು. ಇದರಿಂದ ಇದೀಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು ಈ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಬ್ರಾಹ್ಮಣ ಸಮುದಾಯ ದಲ್ಲಿಯೂ ಬಡವರು, ವಿದ್ಯಾವಂತ ರಾಗಿದ್ದರೂ ನಿರುದ್ಯೋಗಿಗಳಿರುವುದನ್ನು ಸರ್ಕಾರ ಗುರುತಿಸಿ ರುವುದಕ್ಕೆ ಸಭಾ ವತಿಯಿಂದ ಅಭಿನಂದಿಸಲಾಗುತ್ತಿದೆ. ಫೆ.2ರಂದು ಕಾರ್ಯ ಕ್ರಮ ನಡೆಸಲು ಉದ್ದೇಶಿಸಲಾಗಿದು, ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಕೆ. ರಘು ರಾಮ್ ಮಾತನಾಡಿ, ಸಂವಿಧಾನ ಬಂದ ನಂತರ ದಮನಿ ತರಿಗೆ ಮೀಸಲಾತಿ ದೊರೆತಿದ್ದು, ಅದಕ್ಕೆ ಯಾರ ವಿರೋ ಧವೂ ಇಲ್ಲ. ಆದರೆ, ಮೇಲ್ಜಾತಿಯ ಈ ರೀತಿಯವರಿಗೂ ಅನುಕೂಲ ಕಲ್ಪಿಸಬೇಕಾಗಿತ್ತು. ಈಗ ಅದು ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದರಲ್ಲದೆ, ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯೂ ಶೀಘ್ರ ರಚನೆ ಆಗಿ ಕಾರ್ಯಾರಂಭ ಮಾಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿ.ಆರ್. ವಿದ್ಯಾರಣ್ಯ, ವಿಜಯಲಕ್ಷ್ಮಿ ಇದ್ದರು.