ವಿವಿಧ ಖಾಸಗಿ ಕಂಪನಿಗಳಲ್ಲಿ 107 ಮಂದಿಗೆ ಉದ್ಯೋಗ ಭಾಗ್ಯ
ಮೈಸೂರು

ವಿವಿಧ ಖಾಸಗಿ ಕಂಪನಿಗಳಲ್ಲಿ 107 ಮಂದಿಗೆ ಉದ್ಯೋಗ ಭಾಗ್ಯ

July 16, 2019

ಮೈಸೂರು, ಜು.15(ಪಿಎಂ)- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೋಮ ವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ಒಟ್ಟು 600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಸಲಾಯಿತು.

ಮೈಸೂರಿನ ಎನ್‍ಆರ್ ಮೊಹ ಲ್ಲಾದ ಸರ್ಕಾರಿ ಕೈಗಾರಿಕಾ ತರ ಬೇತಿ ಸಂಸ್ಥೆ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ದಲ್ಲಿ ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಮೈಸೂರು ಮತ್ತು ಬೆಂಗಳೂರಿನ 15ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ತಮ್ಮಲ್ಲಿ ಖಾಲಿ ಇರುವ ವಿವಿಧ ದರ್ಜೆಯ ಹುದ್ದೆಗಳ ಭರ್ತಿಗೆ ಆಯ್ಕೆ ಪ್ರಕ್ರಿಯೆ ನಡೆಸಿದರು. ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಹಾಗೂ ಪಿಯುಸಿ, ಪದವಿ, ಐಟಿಐ, ಡಿಪ್ಲೊಮ, ಎಂಬಿಎ ಸೇರಿದಂತೆ ಇನ್ನಿತರೆ ಸ್ನಾತಕೋತ್ತರ ಪದವಿ ಪೂರೈಸಿದ 18ರಿಂದ 35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ಸ್ವವಿವರವುಳ್ಳ 10 ಬಯೋಡೇಟಾ ಪ್ರತಿ ಗಳೊಂದಿಗೆ ಮೈಸೂರು ಜಿಲ್ಲೆಯ ವಿವಿಧ ಭಾಗಗಳ ಉದ್ಯೋಗಾಕಾಂಕ್ಷಿಗಳು ಸಂದರ್ಶನ ಎದುರಿಸಿದರು.

ಉದ್ಘಾಟನೆ: ಉದ್ಯೋಗ ಮೇಳ ಉದ್ಘಾಟಿಸಿದ ಕೈಗಾ ರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉಪ ನಿರ್ದೇಶಕ ರವಿಶಂಕರ್ ಉದ್ಯೋಗಾಕಾಂಕ್ಷಿಗಳನ್ನು ಉದ್ದೇ ಶಿಸಿ ಮಾತನಾಡಿ, ಖಾಸಗಿ ಕಂಪನಿಗಳಲ್ಲಿ ಉದ್ಯೋ ಗಾವಕಾಶಗಳು ಸಾಕಷ್ಟು ಇವೆ. ಆದರೆ ಅವರಿಗೆ ಅಗತ್ಯ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ನಿರೀಕ್ಷಿತ ಮಟ್ಟದಲ್ಲಿ ದೊರೆಯದಿರುವುದನ್ನು ಕಾಣಬಹುದು. ಉದ್ಯೋಗಾಕಾಂಕ್ಷಿಗಳು ಹುದ್ದೆಗೆ ತಕ್ಕ ಕೌಶಲ್ಯ ವೃದ್ಧಿಸಿ ಕೊಂಡು ನಿರಂತರ ಪ್ರಯತ್ನ ಮಾಡಿದರೆ ಉದ್ಯೋಗ ಪಡೆಯಬಹುದು ಎಂದರು.

ಒಂದು ವೇಳೆ ಇಂದು ಉದ್ಯೋಗ ಸಿಕ್ಕಿಲ್ಲವೆಂದರೆ ಯಾವುದೇ ಕಾರ ಣಕ್ಕೂ ನಿರಾಶರಾಗಬೇಡಿ. ಪ್ರಾಮಾ ಣಿಕ ಪ್ರಯತ್ನ ಒಂದಲ್ಲಾ ಒಂದು ದಿನ ಫಲ ನೀಡಲಿದೆ. ಇನ್ಫೋ ಸಿಸ್‍ನ ಸುಧಾಮೂರ್ತಿಯವರು ವಿಪ್ರೋ ಕಂಪನಿಯಲ್ಲಿ ಸಂದರ್ಶನ ಎದುರಿಸಿ ಆಯ್ಕೆ ಯಾಗಲಿಲ್ಲ. ಮುಂದೆ ಅವರೇ ತಮ್ಮದೇ ಇನ್ಫೋಸಿಸ್ ಕಂಪನಿ ಆರಂಭಿಸಿ, ಉದ್ಯೋಗದಾತರಾದರು. ವಿಪ್ರೋಗೆ ಆಯ್ಕೆಯಾಗಿದ್ದರೆ ಇನ್ಫೋಸಿಸ್ ಆರಂಭಿಸಲು ಸಾಧ್ಯ ವಾಗುತ್ತಿರಲಿಲ್ಲ ಎಂದು ಟಿವಿ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಇಂದಿನ ಸೋಲು ಮುಂದೆ ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಡುವ ಸಾಧ್ಯತೆ ಇರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಮೋಸ ಹೋಗಬೇಡಿ: ಸರ್ಕಾರಿ ಕೆಲಸ ಗಿಟ್ಟಿಸಲು ಹಣ ನೀಡಬೇಕು ಎಂಬ ತಪ್ಪು ಕಲ್ಪನೆ ಬಹುತೇಕ ಮಂದಿ ಯಲ್ಲಿದೆ. ಕೆಲವರು ಹಣ ಪಡೆದು ಕೆಲಸ ಕೊಡಿಸುವು ದಾಗಿ ವಂಚಿಸುತ್ತಾರೆ. ಕೆಲಸ ದೊರೆಯುವುದರಲ್ಲಿ ಹಣ ಪಡೆದವರ ಪಾತ್ರ ಏನೂ ಇರುವುದಿಲ್ಲ. ಅವರು ತಾವೇ ಕೆಲಸ ಕೊಡಿಸಿದಂತೆ ವರ್ತಿಸುತ್ತಾರಷ್ಟೇ. ಮೆರಿಟ್ ಆಧಾರದಲ್ಲಿ ಕೆಲಸ ಸಿಕ್ಕಿದ್ದರೂ ಹಣ ಕೊಟ್ಟ ಹಿನ್ನೆಲೆ ಯಲ್ಲಿ ಸಿಕ್ಕಿತು ಎಂದುಕೊಳ್ಳುವವರೇ ಹೆಚ್ಚು. ಹೀಗಾಗಿ ವಂಚಕರಿಂದ ದೂರವಿದ್ದು, ಪ್ರಾಮಾಣಿಕ ಪ್ರಯತ್ನದ ಮೂಲಕ ಹುದ್ದೆ ಹುಡುಕಿಕೊಳ್ಳಿ ಎಂದು ತಿಳಿ ಹೇಳಿದರು.

ಕೆಲಸವಿಲ್ಲ ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ. ಉದ್ಯೋಗದ ಮಾಹಿತಿ ಪಡೆದು ಪ್ರಯತ್ನ ಹಾಕಬೇಕು. ವಾಟ್ಸಪ್‍ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಉದ್ಯೋಗ ಮಾಹಿತಿ ಪಡೆಯಲು ಸಾಧ್ಯವಿದೆ. ಆದರೆ ಹೆಚ್ಚು ಮಂದಿ ಈ ವ್ಯವಸ್ಥೆಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸುತ್ತಾರೆಯೇ ಹೊರತು ಸದ್ಬಳಕೆ ಮಾಡಿಕೊಳ್ಳುವುದಿಲ್ಲ. ಇಂದು ಮೈಸೂರು ಜಿಲ್ಲಾಧಿಕಾರಿಗಳು 70 ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರೆ, ಈ ಮಾಹಿತಿ ನಿಮಗೆ ಗೊತ್ತಿದ್ದರೆ ಸಂತಸ. ಇಂತಹ ಮಾಹಿತಿಗಳನ್ನು ತಿಳಿದು ಕೊಂಡು ಕೆಲಸ ಗಿಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ರವಿಶಂಕರ್ ಸಲಹೆ ನೀಡಿದರು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು\

Translate »