16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ
ಮೈಸೂರು

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ

November 15, 2019

ಬೆಂಗಳೂರು, ನ.14(ಕೆಎಂಶಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಕಮಲ ಸರ್ಕಾರವನ್ನು ರಾಜ್ಯದಲ್ಲಿ ಮರು ಸ್ಥಾಪಿಸಲು ಕಾರಣರಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅನರ್ಹಗೊಂಡ ಶಾಸಕರ ಪೈಕಿ 16 ಮಂದಿ ಇಂದು ವಿಧ್ಯುಕ್ತ ವಾಗಿ ಬಿಜೆಪಿ ಸೇರ್ಪಡೆಯಾದರು.

ಪಕ್ಷದ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ನೂತನ ಸದಸ್ಯರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾವು ಕೊಟ್ಟ ಭರವಸೆಯನ್ನು ಅಕ್ಷರಶಃ ಈಡೇರಿಸು ತ್ತೇವೆ, ವಿಶ್ವಾಸದ್ರೋಹ ಮಾಡಲ್ಲ’ ಎಂದು ಮಾತುಕೊಟ್ಟರು. ಇಂದು ಬಿಜೆಪಿ ಸೇರ್ಪಡೆ ಗೊಂಡ ಮಾಜಿ ಶಾಸಕರು, ನಾಳೆಯ ಭಾವೀ ಶಾಸಕರು ಮತ್ತು ಭಾವೀ ಸಚಿವರು, ಇವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎನ್ನುವ ಮೂಲಕ ಯಡಿಯೂರಪ್ಪ, ಪಕ್ಷ ಸೇರ್ಪಡೆಗೊಂಡ ವರಲ್ಲಿ ವಿಶ್ವಾಸ ತುಂಬಿದರು. ಇವರು ಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತ್ಯಾಗ ಮಾಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಯಿತು, ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬಿಜೆಪಿ ಸೇರಿದ್ದಾರೆ.

ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದು ಕೊಂಡಿದ್ದಾರೆ, ನಮ್ಮ ಜೊತೆಗೆ ಬಂದಿ ರುವ ನಿಮಗೆ, ನಾವು ನೀಡಿರುವ ಭರವಸೆ ಯನ್ನು ಈಡೇರಿಸುತ್ತೇವೆ. ಬಿಜೆಪಿ ಕಾರ್ಯ ಕರ್ತರು ಮತ್ತು ಮುಖಂಡರಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ, ಒಡಕಿನ ಮಾತು ಗಳನ್ನು ಆಡದೆ, ಉಪ ಚುನಾವಣೆಯಲ್ಲಿ ಇವರ ಗೆಲುವಿಗೆ ಎಲ್ಲ ಸಹಕಾರ ನೀಡಿ, ತನು-ಮನ-ಧನದೊಂದಿಗೆ ಶ್ರಮಿಸಿ ಎಂದು ಮನವಿ ಮಾಡಿದರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಕಾರಣರಾದ ಇವರ ಗೆಲುವಿಗಾಗಿ ನಾನು ಟೊಂಕಕಟ್ಟಿ ನಿಲ್ಲುತ್ತೇನೆ, ಪ್ರತಿ ಕ್ಷೇತ್ರಕ್ಕೂ ಉಸ್ತುವಾರಿಗಳ ನೇಮಕ ಮಾಡಿದ್ದು, ಅವರೂ ಇದರ ಹೊಣೆ ಹೊರು ತ್ತಾರೆ. ಉಪ ಚುನಾವಣೆ ನಡೆಯಲಿರುವ ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲ್ಲೋಣ, ಫಲಿ ತಾಂಶದ ದಿನ ಅರಮನೆ ಆವರಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರ ಮುಂದೆ ನಿಮ್ಮನ್ನು ಅಭಿನಂದಿಸುತ್ತೇವೆ. ನಂತರ ಮಂತ್ರಿಯಾಗಿ ಜನರ ಸೇವೆ ಮಾಡಿ, ಗೆಲುವಿಗಾಗಿ ಹೋರಾಟ ನಡೆಸಿ, ನಿಮ್ಮ ಜೊತೆ ನಾವಿದ್ದೇವೆ ಎಂದರು.

ನಿನ್ನೆಯೇ ಬಿಜೆಪಿ ವರಿಷ್ಠರು ರೆಡ್ ಸಿಗ್ನಲ್ ನೀಡಿದ್ದರಿಂದ ರೋಷನ್ ಬೇಗ್ ಇಂದು ತಮ್ಮ ಬಿಜೆಪಿ ಸೇರ್ಪಡೆಯಾಗಲಿಲ್ಲ, ಅವರು ಪಕ್ಷೇತರ ಸದಸ್ಯರಾಗಿ ಚುನಾವಣಾ ಕಣಕ್ಕಿಳಿ ಯಲಿದ್ದಾರೆ. ಉಳಿದಂತೆ ಶಾಸಕ ಸ್ಥಾನ ದಿಂದ ಅನರ್ಹಗೊಂಡ ಕಾಂಗ್ರೆಸ್‍ನ ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಮುನಿರತ್ನ (ರಾಜರಾಜೇಶ್ವರಿನಗರ), ಎಸ್.ಟಿ.ಸೋಮ ಶೇಖರ್ (ಯಶವಂತಪುರ), ಭೈರತಿ ಬಸವ ರಾಜ್ (ಕೆ.ಆರ್.ಪುರಂ), ಬಿ.ಸಿ.ಪಾಟೀಲ್ (ಹಿರೇಕೆರೂರು), ಮಹೇಶ್ ಕುಮಟಳ್ಳಿ (ಅಥಣಿ), ಆರ್.ಶಂಕರ್ (ರಾಣೆಬೆನ್ನೂರು), ಶ್ರೀಮಂತ ಪಾಟೀಲ್ (ಕಾಗವಾಡ), ರಮೇಶ್ ಜಾರಕಿಹೊಳಿ (ಗೋಕಾಕ್), ಆನಂದ್ ಸಿಂಗ್ (ವಿಜಯನಗರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಜೆಡಿಎಸ್‍ನ ಎಚ್. ವಿಶ್ವನಾಥ್ (ಹುಣಸೂರು), ಕೆ.ಗೋಪಾ ಲಯ್ಯ (ಮಹಾಲಕ್ಷ್ಮಿ ಲೇಔಟ್), ನಾರಾಯಣಗೌಡ (ಕೆ.ಆರ್.ಪೇಟೆ) ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದು, ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.

ಹುಣಸೂರಿಂದ ವಿಶ್ವನಾಥ್, ಕೆ.ಆರ್.ಪೇಟೆಯಿಂದ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ
ಬೆಂಗಳೂರು, ನ.14(ಕೆಎಂಶಿ)-ಮಾಜಿ ಸಚಿವ, ಅನರ್ಹಗೊಂಡ ಶಾಸಕ ಎಚ್. ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಮತ್ತೊಬ್ಬ ಅನರ್ಹ ಶಾಸಕ ಕೆ.ಸಿ. ನಾರಾಯಣ ಗೌಡ ಅವರು ಕಮಲದ ಚಿನ್ಹೆಯಡಿ ಸ್ಪರ್ಧಿಸುತ್ತಿದ್ದಾರೆ.

ಅನರ್ಹಗೊಂಡ 17 ಶಾಸಕರ ಪೈಕಿ 16 ಮಂದಿ ಇಂದು ಅಧಿಕೃತವಾಗಿ ಸೇರ್ಪಡೆಗೊಂಡ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಘಟಕ 14 ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಪ್ರಕಟಿಸಿದ್ದು, ಅವರೆಲ್ಲರೂ ದಕ್ಷಿಣ ಭಾರತದಲ್ಲಿ ಕಮಲ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣೀಭೂತರಾದ ಅನರ್ಹಗೊಂಡ ಶಾಸಕರೇ ಆಗಿ ದ್ದಾರೆ. ಆದರೆ, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಪ್ರಕಟಿಸಿಲ್ಲ, ರೋಷನ್ ಬೇಗ್ ಶಿವಾಜಿನಗರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿ ಯಲಿದ್ದಾರೆ. ಅದೇ ರೀತಿ ರಾಣೆಬೆನ್ನೂರಿನಲ್ಲಿ ಆರ್.ಶಂಕರ್ ಪಕ್ಷೇತರರಾಗಿ ಕಣಕ್ಕಿಳಿಯುವ ಆಲೋಚನೆಯಲ್ಲಿದ್ದಾರೆ, ಆದರೆ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಉನ್ನತ ಮೂಲಗಳ ಪ್ರಕಾರ ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಮಾಡು ವುದಾಗಿ ಭರವಸೆ ನೀಡಲಾಗಿದೆ, ರಾಣೆಬೆನ್ನೂರು ಕ್ಷೇತ್ರದಿಂದ ಪಂಚಾ ಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಣಕ್ಕಿಳಿಯುವುದಿಲ್ಲ ಎಂದು ವಿಶ್ವನಾಥ್ ಈ ಮೊದಲು ತಿಳಿಸಿದ್ದರು, ಆದರೆ ಮುಖ್ಯಮಂತ್ರಿ

ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ಒಪ್ಪುತ್ತಿದ್ದಂತೆ ಅವರಿಗೆ ಪಕ್ಷ ಟಿಕೆಟ್ ನೀಡಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಇನ್ನು ವಿಧಾನಮಂಡಲದ ಉಭಯ ಸದನದ ಸದಸ್ಯರಲ್ಲ, ಅವರು, ಬೆಳಗಾವಿ ಜಿಲ್ಲೆಯಲ್ಲಿನ ಸ್ವಕ್ಷೇತ್ರ ಅಥಣಿಯಿಂದ ಕಣಕ್ಕಿಳಿಯಲು ಟಿಕೆಟ್ ಕೇಳಿದ್ದರು. ಆದರೆ ಪಕ್ಷ ಟಿಕೆಟ್ ನಿರಾಕರಿಸಿ, ಕಾಂಗ್ರೆಸ್‍ನಿಂದ ಅನರ್ಹಗೊಂಡ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಅವಕಾಶ ಮಾಡಿಕೊಟ್ಟಿದೆ.

ಉಳಿದಂತೆ, ಶ್ರೀಮಂತ ಗೌಡ ಪಾಟೀಲ್ (ಕಾಗವಾಡ), ರಮೇಶ್ ಜಾರಕಿಹೊಳಿ (ಗೋಕಾಕ್), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಎಂ.ಶರವಣ (ಶಿವಾಜಿನಗರ), ಎಸ್.ಟಿ. ಸೋಮಶೇಖರ್ (ಯಶವಂತಪುರ), ಭೈರತಿ ಬಸವರಾಜ್ (ಕೆ.ಆರ್.ಪುರ), ಆನಂದ್ ಸಿಂಗ್ (ವಿಜಯನಗರ), ಪ್ರತಾಪ್‍ಗೌಡ ಪಾಟೀಲ್ (ಮಸ್ಕಿ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ಅಭ್ಯರ್ಥಿಗಳೆಂದು ಬಿಜೆಪಿ ಪ್ರಕಟಿಸಿದೆ.

Translate »