ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಮೈಸೂರು

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

November 15, 2019

ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಲ್ಲಿಸಿದ್ದ ಮರು ಪರಿ ಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಜತೆಗೆ ನ್ಯಾಯಾಂಗ ನಿಂದನೆ ದಾವೆಯಲ್ಲಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ತರಾಟೆಗೆ ತೆಗೆದುಕೊಂಡಿದೆ. ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಸುವುದರಲ್ಲಿ ಅಕ್ರಮ ನಡೆದಿದೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ತೀರ್ಪನ್ನು ಮರು ಪರಿ ಶೀಲಿಸಬೇಕು ಎಂದು ಸಿನ್ಹಾ, ಶೌರಿ, ಭೂಷಣ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, ಮರು ಪರಿಶೀಲನೆಗೆ ಅರ್ಹವಲ್ಲ ಎಂದು ಗುರುವಾರ ವಜಾಗೊಳಿಸಿತು. ನ್ಯಾ.ಎಸ್.ಕೆ.ಕೌಲ್, ನ್ಯಾ.ಕೆ.ಎಂ.ಜೋಸೆಫ್ ಅವರುಗಳಿದ್ದ ನ್ಯಾಯಪೀಠವು, ಅರ್ಜಿಗಳಿಗೆ ಮರು ಪರಿಶೀಲನೆಯ ಅರ್ಹತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಫ್‍ಐಆರ್ ಅಗತ್ಯವಿಲ್ಲ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿ ಕೌಲ್ ತೀರ್ಪು ಓದುವ ವೇಳೆ, ನಾವು ರಫೇಲ್ ಒಪ್ಪಂದದ ಎಲ್ಲ ವಿಚಾರಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದ್ದೇವೆ. ಈ ಪ್ರಕರಣದಲ್ಲಿ ಎಫ್‍ಐಆರ್ ಹಾಕುವ ಅಗತ್ಯವಿಲ್ಲ ಎಂದಿದ್ದಾರೆ. ನ್ಯಾ.ಕೆ.ಎಂ.ಜೋಸೆಫ್ ಅವರು, ಅಂತಹ ವಿಷಯಗಳ ಬಗ್ಗೆ ನ್ಯಾಯಾಂಗ ವಿಮರ್ಶೆ ಯಾವಾಗಲೂ ಸೀಮಿತವಾಗಿರುತ್ತದೆ ಎಂದು ಹೇಳಿದ್ದಾರೆ. ಮೂವರೂ ನ್ಯಾಯಮೂರ್ತಿಗಳು ಒಂದೇ ರೀತಿಯಲ್ಲಿ ಅಭಿಪ್ರಾಯಪಟ್ಟು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ನೀಡಿರುವ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ರಾಹುಲ್ ದೇಶದ ಕ್ಷಮೆ ಕೇಳಲಿ: ಅಮಿತ್ ಶಾ ; ರಫೇಲ್ ತನಿಖೆಗೆ ‘ಜೆಪಿಸಿ’ ರಚಿಸಿ: ರಾಹುಲ್

ನವದೆಹಲಿ: ರಫೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಅದರ ನಾಯಕರು ಇನ್ನಾದರೂ ದೇಶದ ಜನತೆಯ ಕ್ಷಮೆ ಯಾಚಿಸಲಿ ಎಂದು ಕೇಂದ್ರದ ಗೃಹ ಸಚಿವರೂ ಆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗ್ರಹಿಸಿದ್ದಾರೆ. ಇದಕ್ಕೆ ಒಪ್ಪದ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಫೇಲ್ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದುರುದ್ದೇಶಪೂರಿತ ಹಾಗೂ ಆಧಾರರಹಿತ ಆರೋಪ ಹೊರಿಸುತ್ತಾ ವದಂತಿ ಹರಡುತ್ತಿದ್ದವರಿಗೆ ಸುಪ್ರೀಂಕೋರ್ಟ್ ತಕ್ಕ ಪಾಠ ಕಲಿಸಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಮೀರಿದ ರಾಜಕೀಯ ಮಾಡುವ ಕಾಂಗ್ರೆಸ್ ಮತ್ತು ಅದರ ನಾಯಕರು ಇನ್ನಾದರೂ ದೇಶದ ಜನತೆಗೆ ಕ್ಷಮೆ ಯಾಚಿಸಬೇಕು ಎಂದು ಅಮಿತ್ ಷಾ ಗುರುವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ, 3 ಸದಸ್ಯರ ನ್ಯಾಯಪೀಠದÀಲ್ಲಿ ಭಿನ್ನ ಅಭಿಪ್ರಾಯ ಹೊಂದಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ತೀರ್ಪಿನ ಅಂಶಗಳನ್ನು ಉದ್ದೇಶಿಸಿ ರಫೇಲ್ ಪ್ರಕರಣದ ಉನ್ನತ ತನಿಖೆಗೆ ‘ಜಂಟಿ ಸಂಸದೀಯ ಸಮಿತಿ’ ರಚಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

Translate »