ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ
ಮೈಸೂರು

ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ

November 15, 2019

ಹುಣಸೂರು, ನ.14-ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿರುವ ಬೆನ್ನಲ್ಲೇ ಹುಣಸೂರಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಾಜಿ ಸಚಿವರೂ ಆದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಹಾಗೂ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಜಿ.ಡಿ.ಹರೀಶ್ ಗೌಡರನ್ನು ಕಣಕ್ಕಿಳಿಸಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ಹುಣಸೂರಿನ ಜಿ.ಟಿ.ದೇವೇಗೌಡರ ನಿವಾಸದಲ್ಲಿ ಅವರ ಅನುಪಸ್ಥಿತಿಯಲ್ಲಿ ಜಮಾಯಿ ಸಿದ್ದ ಸಾವಿರಾರು ಬೆಂಬಲಿಗರು, ಜಿಟಿಡಿ ಪುತ್ರ ಜಿ.ಡಿ. ಹರೀಶ್‍ಗೌಡ ಅವರನ್ನು ಉಪ ಚುನಾವಣೆಯಲ್ಲಿ ಸ್ಪರ್ಧೆ ಗಿಳಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಸುಮಾರು 2 ಗಂಟೆಗಳ ಕಾಲ ನಿವಾಸದ ಮುಂದೆ ಬಿಡಾರ ಹೂಡಿದ ಜೆಡಿಎಸ್ ಮುಖಂಡರು ಹಾಗೂ ಜಿಟಿಡಿ ಅಭಿಮಾನಿಗಳು, ಹರೀಶ್‍ಗೌಡರನ್ನು ಸ್ಪರ್ಧೆಗಿಳಿಸಲೇಬೇಕೆಂದು ಪಟ್ಟು ಹಿಡಿದರು. ಯಾವುದೇ ಪಕ್ಷವಾದರೂ ಸರಿ ಇಲ್ಲವೇ ಪಕ್ಷೇತರರಾಗಿಯಾದರೂ, ಹರೀಶ್‍ಗೌಡ ಸ್ಪರ್ಧಿಸಲೇಬೇಕು. ಹುಣಸೂರಿಗೆ ಜಿ.ಟಿ.ದೇವೇಗೌಡರ ಕುಟುಂಬದ ಸೇವೆ ಅತ್ಯಗತ್ಯವಾಗಿದ್ದು, ಜಿಟಿಡಿ ಒಪ್ಪದಿದ್ದರೆ ಮೈಸೂರಿನ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿಯಾದರೂ ಹರೀಶ್‍ಗೌಡರನ್ನು ಕಣಕ್ಕಿಳಿಸಲು ಪಟ್ಟು ಹಿಡಿಯುವುದಾಗಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಒಂದು ವೇಳೆ ತಮ್ಮ ಪುತ್ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಟಿಡಿ ಅವಕಾಶ ನೀಡದೇ ಹೋದ ಪಕ್ಷದಲ್ಲಿ ಅವರನ್ನೇ ನಂಬಿರುವ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಉಪ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಜಿಟಿಡಿ ಮಾರ್ಗದರ್ಶನ ನೀಡಬೇಕು. ಅವರ ಸೂಚನೆಯಂತೆಯೇ ನಾವೆಲ್ಲಾ ನಡೆದುಕೊಳ್ಳೋಣ ಎಂದು ಕೆಲ ಮುಖಂಡರು ಪ್ರಸ್ತಾಪಿಸಿದಾಗ ನೆರೆದಿದ್ದ ಅಭಿಮಾನಿಗಳು ಕರಘೋಷದೊಂದಿಗೆ ಅದನ್ನು ಅನುಮೋದಿಸಿದರು. ಈ ಸಭೆಯಲ್ಲಿ ಕೆಎಂಎಫ್ ನಿರ್ದೇಶಕ ಕೆ.ಎಸ್.ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ, ತಾಪಂ ಸದಸ್ಯರಾದ ಪ್ರಭಾಕರ್, ಪ್ರೇಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಎನ್.ವೆಂಕಟೇಶ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದೇವರಾಜು, ಮುಖಂಡರಾದ ಅಣ್ಣಯ್ಯ, ಬಸವಲಿಂಗಯ್ಯ, ವಾಸೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೆಂಗಳೂರಿಗೂ ಲಗ್ಗೆ ಇಟ್ಟ ತಂಡ: ಜಿಟಿಡಿ ಬೆಂಬಲಿಗರ ಮತ್ತೊಂದು ತಂಡ ಇಂದು ಬೆಂಗಳೂರಿನ ಜಿಟಿಡಿ ಅವರ ನಿವಾಸಕ್ಕೂ ಭೇಟಿ ನೀಡಿ, ಹರೀಶ್‍ಗೌಡರನ್ನು ಸ್ಪರ್ಧೆಗಿಳಿಸ ಬೇಕೆಂದು ಒತ್ತಾಯಿಸಿದೆ. ಆದರೆ ಜಿಟಿಡಿ ಅವರು ಯಾವುದೇ ಕಾರಣಕ್ಕೂ ತಮ್ಮ ಪುತ್ರನನ್ನು ಈ ಚುನಾವಣೆಯಲ್ಲಿ ಸ್ಪರ್ಧೆಗಿಳಿಸುವುದಿಲ್ಲ. ಅಲ್ಲದೇ ತಾವೂ ಕೂಡ ತಟಸ್ಥವಾಗಿ ಉಳಿಯುವುದಾಗಿ ತಿಳಿಸಿದರಲ್ಲದೇ, ಪುತ್ರನನ್ನು ಚುನಾವಣಾ ಕಣಕ್ಕೆ ಇಳಿಸದೇ ಇರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರಿದರು ಎಂದು ಹೇಳಲಾಗಿದೆ. ತಾವು ಚುನಾವಣೆಯಲ್ಲಿ ಯಾರ ಪರ ಕಾರ್ಯ ನಿರ್ವಹಿಸಬೇಕೆಂದು ಸಹ ನಿರ್ದೇಶನ ನೀಡುವುದಿಲ್ಲ. ಅಭಿಮಾನಿಗಳು ತಮ್ಮ ಮನಃಸ್ಸಾಕ್ಷಿಯಂತೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಇದೇ ವೇಳೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

Translate »