ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಮೈಸೂರು

ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ

November 15, 2019

ಬೆಂಗಳೂರು, ನ.14(ಕೆಎಂಶಿ)-ಉಪ ಚುನಾವಣೆ ನಡೆಯಲಿರುವ ವಿಧಾನ ಸಭೆಯ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರ ಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಯಲ್ಲಾಪುರ ಕ್ಷೇತ್ರಕ್ಕೆ ಎ. ಚೈತ್ರಾಗೌಡ, ಹಿರೇಕೆರೂರು-ಉಜೆನಪ್ಪ ಜಟ್ಟೆಪ್ಪ ಕೋಡಿಹಳ್ಳಿ, ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ, ವಿಜಯ ನಗರ-ಎನ್.ಎಂ. ನಬಿ, ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ, ಕೆ.ಆರ್.ಪುರಂ-ಸಿ.ಕೃಷ್ಣಮೂರ್ತಿ, ಯಶವಂತಪುರ-ಟಿ.ಎನ್. ಜವರಾಯಿಗೌಡ, ಶಿವಾಜಿನಗರ-ತನ್ವೀರ್ ಅಹಮ್ಮದ್ ವುಲ್ಲಾ, ಕೆ.ಆರ್.ಪೇಟೆ- ಬಿ.ಎಲ್.ದೇವರಾಜ್, ಹುಣಸೂರು-ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಕುಟುಂಬದ ಕಡುವೈರಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಅವರಿಗೇ ಬೆಂಬಲ ಸೂಚಿಸಿದೆ. ಇದರೊಂದಿಗೆ ವಿಧಾನ ಪರಿಷತ್‍ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎ.ಪಿ. ರಂಗನಾಥ್, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಆರ್. ಚೌಡರೆಡ್ಡಿ ತೂಪಲ್ಲಿ, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶಿವಶಂಕರ ಕಲ್ಲೂರ ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ತಿಮ್ಮಯ್ಯ ಪುರ್ಲೆ ಜೆಡಿಎಸ್ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾ ಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದವರನ್ನು ಉಪ ಚುನಾವಣೆಯಲ್ಲಿ ಸೋಲಿಸಲು ಕಾರ್ಯತಂತ್ರ ರೂಪಿಸಲಾಗುವುದು ಎಂದರು.ಜೆಡಿಎಸ್ ಅಭ್ಯರ್ಥಿಗಳ ಗೆಲುವು ನಮ್ಮ ಮೊದಲ ಆದ್ಯತೆ, ಅದು ಸಾಧ್ಯವಾಗದ ಕಡೆಗಳಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿದವರ ಸೋಲಿಗೆ ಎರಡನೇ ಆದ್ಯತೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರೆಯುತ್ತಾರೆ, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರೆಯುತ್ತಾರೆ ಎಂದಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ರಾಜಕೀಯದ ಒಳ ನೋಟದ ಹಿನ್ನೆಲೆಯಲ್ಲಿ ಗೌಡರು ಈ ರೀತಿ ಹೇಳಿರಬಹುದು, ಹಾಗೆಂದು ಬಿಜೆಪಿ ಜತೆ ಕೈಜೋಡಿಸುವುದಿಲ್ಲ. ಉಪ ಚುನಾವಣೆ ಮೂರೂ ಪಕ್ಷಗಳಿಗೆ ಅಗ್ನಿ ಪರೀಕ್ಷೆ, 7 ಕ್ಷೇತ್ರಗಳಲ್ಲಿ ಗೆದ್ದು 113 ಶಾಸಕರ ಬೆಂಬಲ ಪಡೆದಾಗ ಮಾತ್ರ ಯಡಿಯೂರಪ್ಪ ಸರ್ಕಾರ ಉಳಿಯಲಿದೆ. ಉಪಚುನಾವಣಾ ಫಲಿತಾಂಶ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಚಟುವಟಿಕೆ ಆರಂಭವಾಗಲಿದೆ, ಮಾಜಿ ಶಾಸಕರಾದ ಸುಧಾಕರ್ ಹಾಗೂ ಯೋಗೇಶ್ವರ್ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ, ಮೈತ್ರಿ ಸರ್ಕಾರ ಪತನದಲ್ಲಿ ಇವರಿಬ್ಬರ ಪಾತ್ರವೂ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.

Translate »