ಮಾವು ಮೇಳದಲ್ಲಿ ಈ ಬಾರಿ 2.06 ಲಕ್ಷ ಕೆಜಿ ಮಾವು ಮಾರಾಟ
ಮೈಸೂರು

ಮಾವು ಮೇಳದಲ್ಲಿ ಈ ಬಾರಿ 2.06 ಲಕ್ಷ ಕೆಜಿ ಮಾವು ಮಾರಾಟ

May 30, 2019

ಮೈಸೂರು: ಮೈಸೂರಿನ ಕರ್ಜನ್ ಪಾರ್ಕ್ ಆವರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಐದೇ ದಿನದಲ್ಲಿ 2,06,773 ಕೆಜಿ ಮಾವಿನ ಹಣ್ಣು ಮಾರಾಟವಾಗಿದೆ.

ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಮಾವಿನಹಣ್ಣನ್ನು ರೈತರಿಂದ ನೇರವಾಗಿ ಗ್ರಾಹಕ ರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಿತ್ತು. ಈ ಮೇಳದಲ್ಲಿ 40 ಮಳಿಗೆಗಳಲ್ಲಿ ಮಾವಿನಹಣ್ಣು ಮಾರಾಟ, 2 ಮಳಿಗೆಯಲ್ಲಿ ಹಲಸು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ದಿನದಿಂದಲೇ ಮೇಳದಲ್ಲಿ ಭರ್ಜರಿ ಮಾರಾಟ ನಡೆದಿತ್ತು. ಈ 5 ದಿನದಲ್ಲಿ ಬಾದಾಮಿ/ಆಲ್ಫಾನ್ಸೋ 10,38,850 ಕೆಜಿ, ರಸಪುರಿ 37,955 ಕೆಜಿ, ಮಲಗೋವಾ 6,505 ಕೆಜಿ, ಮಲ್ಲಿಕಾ 21,280 ಕೆಜಿ, ಸೆಂಧೂರ 11,600 ಕೆಜಿ, ತೋತಾಪುರಿ 1,913 ಕೆಜಿ, ಬಂಗನಪಲ್ಲಿ 4,250 ಕೆಜಿ, ದಶೇರಿ 13,585 ಕೆಜಿ, ಸಕ್ಕರೆಗುತ್ತಿ 4,935 ಕೆಜಿ, ವಾಲಾಜಾ ತಳಿ ಮಾವಿನಿ ಹಣ್ಣು 900 ಕೆಜಿ ಮಾರಾಟವಾಗಿದೆ. ಒಟ್ಟು 5 ದಿನದಲ್ಲಿ 2,06,773 ಕೆಜಿ (206 ಟನ್, 773 ಕೆಜಿ) ವಿವಿಧ ಬಗೆಯ ಮಾವಿನ ಹಣ್ಣು ಮಾರಾಟವಾಗಿವೆ. ಕಳೆದ ಬಾರಿ 65 ಮೆಟ್ರಿಕ್ ಟನ್ ಮಾವು ಮಾರಾಟವಾಗಿತ್ತು. ಈ ಬಾರಿ 100 ಮೆಟ್ರಿಕ್ ಟನ್ ಮಾವಿನ ಹಣ್ಣು ಮಾರಾಟದ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಹಬೀಬಾ ನಿಶಾತ್ ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ವಿವಿಧ ನರ್ಸರಿಗಳ ವತಿಯಿಂದ ಮಾವು ಮೇಳದಲ್ಲಿ ಆಯೋಜಿಸಿದ್ದ ಸಸ್ಯ ಸಂತೆಯಲ್ಲಿ ವಿವಿಧ ಹಣ್ಣುಗಳ ಗಿಡ, ಹೂವಿನ ಗಿಡ, ಅಲಂಕಾರಿಕಾ ಗಿಡಗಳ ಮಾರಾಟವೂ ಈ ಬಾರಿ ಹೆಚ್ಚಾಗಿ ನಡೆದಿದೆ.

Translate »