ಪರಿಸರ ಸಂರಕ್ಷಣೆಗಾಗಿ 2 ಲಕ್ಷ ಗಿಡ ನೆಟ್ಟಿದ್ದೇವೆ
ಮಂಡ್ಯ

ಪರಿಸರ ಸಂರಕ್ಷಣೆಗಾಗಿ 2 ಲಕ್ಷ ಗಿಡ ನೆಟ್ಟಿದ್ದೇವೆ

January 13, 2020

ಬೆಂಗಳೂರು ಲಾಲ್‍ಬಾಗ್ ಜಂಟಿ ನಿರ್ದೇಶಕ ಡಾ.ಕೆ.ಬೆಳ್ಳೂರು ಕೃಷ್ಣ
ಭಾರತೀನಗರ, ಜ.12(ಅ.ಸತೀಶ್)- ಪರಿಸರ ಸಂರಕ್ಷಣೆ ದೃಷ್ಠಿಯಿಂದ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದ್ದೇನೆ. ಪ್ರತಿಯೊಬ್ಬರಲ್ಲೂ ಪರಿಸರದ ಕಾಳಜಿ ಇರಬೇಕೆಂದು ಬೆಂಗಳೂರಿನ ಲಾಲ್‍ಬಾಗ್ ಜಂಟಿ ನಿರ್ದೇಶಕ ಡಾ.ಕೆ.ಬೆಳ್ಳೂರು ಕೃಷ್ಣ ತಿಳಿಸಿದರು.

ಇಲ್ಲಿನ ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ವೇದಿಕೆ ವತಿಯಿಂದ ನಡೆದ “ಪರಿಸರ ಉಳಿಸಿ” ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ಈ ಹಿಂದೆ ಉತ್ತಮ ಪರಿಸರ ನಿರ್ಮಿಸಿದ್ದರು. ಅದರೆ ಇದೀಗ ಅದೆಲ್ಲಾ ನಶಿಸಿ ಹೋಗುತ್ತಿದೆ. ಪರಿಸರ ಜಾಗೃತಿ ವೇದಿಕೆ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಲಿನವಾಗು ತ್ತಿರುವ ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ವನ್ನು ನಿಯಂತ್ರಿಸಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾವು ಪಶ್ಚಾತಾಪ ಪಡಬೇಕಾಗುತ್ತದೆ ಎಂದರು.

ಹೆಣ್ಣು ವಿದ್ಯೆ ಕಲಿತರೆ ಇಡೀ ಕುಟುಂಬವೇ ಕಲಿತಂತೆ. ಹೀಗಾಗಿ ಪ್ರತಿಯೊಬ್ಬರು ವಿದ್ಯಾಭ್ಯಾಸ ಪಡೆಯಬೇಕು. ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಇದರಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸಿ ಕೊಡುತ್ತೇನೆಂದು ಭರವಸೆ ನೀಡಿದರು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಅಣ್ಣೂರು ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಕಾಳಜಿ ಹೊಂದುವ ಮೂಲಕ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಡಲು ಮುಂದಾಗಬೇಕು ಎಂದು ಕರೆ ನೀಡಿದರು.

ನಮ್ಮ ಪೂರ್ವಿಕರ ಕಾಲದಲ್ಲಿ ಒಬ್ಬರಿಗೆ 60 ಮರಗಳಿ ದ್ದವು. ಆದರೆ ಈಗ 100 ಮಂದಿಗೆ 1 ಮರಗಳಿವೆ. ಇದರಿಂದ ಉತ್ತಮ ಆಹಾರ, ನೀರು, ಗಾಳಿ ಸಿಗುತ್ತಿಲ್ಲ. ನಾವು ಹಿಂದೆ 90-100 ವರ್ಷ ವಯಸ್ಸಿನ ಹಿರಿಯರನ್ನು ನೋಡುತ್ತಿದ್ದೆವು. ಆದರೀಗ 50-60 ವರ್ಷ ಬರುವುದೇ ಹೆಚ್ಚಾಗಿದೆ. ಇದಕ್ಕೆಲ್ಲಾ ಪರಿಸರ ಅಸಮತೋಲನವೇ ಕಾರಣ. ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಮರಗಳಿಲ್ಲದೇ ಇಡೀ ಭೂಮಂಡಲ ಸರ್ವನಾಶವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಇದೇ ವೇಳೆ ಬೆಂಗಳೂರಿನ ಲಾಲ್‍ಬಾಗ್‍ನ ಜಂಟಿ ನಿದೇರ್ಶಕ ಡಾ.ಕೆ.ಬೆಳ್ಳೂರು ಕೃಷ್ಣ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಟಿ.ಎಸ್.ಪ್ರಶಾಂತ್‍ಕುಮಾರ್, ಪರಿಸರ ಜಾಗೃತಿ ವೇದಿಕೆ ಉಪಾಧ್ಯಕ್ಷ ಶಂಕರೇಗೌಡ, ಜಗದೀಶ್, ನಂದೀಶ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರಗೌಡ, ಯೋಗೇಶ್, ಆನಂದ, ಸಿದ್ದು, ರಘು, ಕುಮಾರ್, ಶಿಕ್ಷಕರಾದ ಸಿದ್ದರಾಜು, ಜಯಲಿಂಗಯ್ಯ, ಮಂಜುನಾಥ್, ನಾಗೇಂದ್ರಸ್ವಾಮಿ, ಮಮತ ಸೇರಿದಂತೆ ಇತರರಿದ್ದರು.

Translate »