ಯುವಜನರ ಸ್ಫೂರ್ತಿ ‘ವಿವೇಕಾನಂದ’
ಕೊಡಗು

ಯುವಜನರ ಸ್ಫೂರ್ತಿ ‘ವಿವೇಕಾನಂದ’

January 13, 2020

ವ್ಯಕ್ತಿತ್ವದ ಎಲ್ಲಾ ಆಯಾಮಗಳ ಸಾರ್ಥಕತೆಗೆ ಅವಕಾಶವನ್ನು ನೀಡುವ ಕಾಲವೇ ಯೌವನ. ಆದರೆ, ಈ ಕಾಲದಲ್ಲಿ ಬುದ್ಧಿ ಇದ್ದರೆ ಕ್ರಿಯಾಶೀಲತೆ ಇರದು; ಕ್ರಿಯಾಶೀಲತೆ ಇದ್ದರೆ ಬುದ್ಧಿ ಇರದು. ಹೀಗಾಗಿ, ಯೌವನ ಎನ್ನುವುದು ಹಲವರ ಜೀವನದಲ್ಲಿ ಅರ್ಥವನ್ನು ಕಳೆದುಕೊಳ್ಳುವ ಸಂದರ್ಭವೇ ಹೆಚ್ಚು. ಬುದ್ಧಿ-ಶಕ್ತಿ-ಕ್ರಿಯಾಶೀಲತೆಗಳ ಮಹಾಸಂಗಮದಂತಿದ್ದವರು ಸ್ವಾಮಿ ವಿವೇಕಾನಂದರು. ಅವರ ಜೀವನ-ಸಂದೇಶಗಳು ಎಲ್ಲ್ಲಾ ಕಾಲದ ಯುವಜನಾಂಗದ ಸ್ಫೂರ್ತಿ ಕೇಂದ್ರ; ವ್ಯಕ್ತಿತ್ವ ನಿರ್ಮಾಣದ ಅರಿವಿನ ನಡಿಗೆ. ವ್ಯಕ್ತಿಯ ಏಳಿಗೆಗೂ ಸಮಾಜದ ಏಳಿಗೆಗೂ ಪೂರಕವಾಗಿರುವ ಅವರ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ವಿವೇಕಾನಂದರ 157ನೇ ಜನ್ಮದಿನವನ್ನು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆ ಆಚರಿಸಲಾಯಿತು.

ಮಡಿಕೇರಿ, ಜ.12- ಯುವ ಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶ. ಆದ್ದರಿಂದ ಯುವ ಜನರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸು ವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕರೆ ನೀಡಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತ್ರಿನೇತ್ರ ಯುವಕ ಸಂಘ ಹಾಕತ್ತೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾ ಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ, ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಅಪಾರ ರಾಷ್ಟ್ರ ಪ್ರೇಮ, ವಿಶ್ವ ಭ್ರಾತೃತ್ವ ಹೊಂದಿದ್ದರು, ಸ್ವಾಮಿ ವಿವೇಕಾ ನಂದರ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪ್ರತಿ ಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ತಿಳಿಸಿದರು.

ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣ ರಾಷ್ಟ್ರದ ಸಂಸ್ಕøತಿಯನ್ನು ಎತ್ತಿ ಹಿಡಿದಿತ್ತು. ಇದರಿಂದಾಗಿ ಭಾರತ ದೇಶದ ಶ್ರೀಮಂತ ಸಂಸ್ಕøತಿ, ಪರಂಪರೆ, ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ತಿಳಿಯುವಂತಾಯಿತು ಎಂದರು.

ಶಿಕ್ಷಕರು ತರಗತಿಗಳಲ್ಲಿ ಹಲವು ಉಪಯುಕ್ತ ಮಾಹಿತಿ ನೀಡಿ, ಯುವ ಜನರನ್ನು ಸತ್ಪ್ರಜೆಯ ಮೂರ್ತಿಗಳನ್ನಾಗಿ ನಿರ್ಮಿಸುತ್ತಾರೆ. ಆದರೆ ವಿವೇಕಾ ನಂದರು ನಿಮಗೆ ನೀವೆ ಶಿಲ್ಪಿಗಳು ಎಂದಿದ್ದಾರೆ. ಈ ನಿಟ್ಟಿನಲ್ಲಿ ಯುವ ಜನರು ಭವಿಷ್ಯವನ್ನು ಉಜ್ವಲ ವಾಗಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆÀ ಕಿವಿ ಮಾತು ಹೇಳಿದರು.

ಸ್ವಾಮಿ ವಿವೇಕಾನಂದರು ‘ಏಳಿ, ಎದ್ದೇಳಿ, ಗುರಿ ತಲುಪುವ ತನಕ ನಿಲ್ಲದಿರಿ’ ಎಂಬ ಮಾತಿನ ಸಾರವನ್ನು ಅರಿತುಕೊಳ್ಳಿ. ಯುವ ಜನರು ತಮ್ಮ ಜೀವನದ ಗುರಿ ತಲುಪುವವರೆಗೂ ಸತತ ಪ್ರಯತ್ನ ಮತ್ತು ಪರಿಶ್ರಮ ಇರಬೇಕು ಎಂದರು.

ಯುವ ಜನರು ಬದುಕಿನಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ, ಸಮಯ ಮತ್ತು ಸಮುದ್ರದ ಅಲೆ ಎಂದೂ ಯಾರಿಗೂ ಕಾಯುವುದಿಲ್ಲ. ಸಮ ಯದ ಮೌಲ್ಯವನ್ನು ಅರಿತು ಜೀವನದಲ್ಲಿ ಮುಂದೆ ಸಾಗಬೇಕು ಎಂದು ನುಡಿದರು.

ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ಮೇದಾನಂದರು ಮಾತನಾಡಿ, ರವೀಂದ್ರನಾಥ ಠಾಕೂರ್ ಅವರು ವಿದೇಶಿ ಸಾಹಿತಿ ರೋಮೈನ್ ರಾಲ್ಡ್ ಅವರಿಗೆ ತಿಳಿಸಿದಂತೆ ಭಾರತವನ್ನು ಅಧ್ಯಯನ ಮಾಡ ಬೇಕೆಂದರೆ, ದೇಶ ಸುತ್ತುವ ಅಗತ್ಯವಿಲ್ಲ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಧ್ಯಯನ ಮಾಡಿ ದರೆ ಸಾಕು ಎಂದಿದ್ದಾರೆ. ಅಂತಹ ಮಹಾನ್ ಚೇತನ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು.

ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬು ದನ್ನು ಸಿಂಹ ಮತ್ತು ಕುರಿಯ ಕಥೆಯೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಜೀವನ ದಲ್ಲಿ ಹೋರಾಟವನ್ನು ಎಂದೂ ಬಿಡಬೇಡಿ. ಹೋರಾ ಟದ ಮನೋಭಾವನೆಯಿಂದ ಅನೇಕ ಲಾಭ ಗಳನ್ನು ನೀವು ಪಡೆಯಬಹುದು ಎಂದು ನುಡಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅಣ್ಣಾ ಹಜಾರೆ ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ವಿಶ್ವವನ್ನು ಗೆಲ್ಲಲು ಖಡ್ಗ-ಲೇಖನಿಗಳು ಬೇಕಿಲ್ಲ. ಪ್ರೀತಿ ವಿಶ್ವಾಸದಿಂದಲೇ ಪ್ರಪಂಚವನ್ನು ಗೆಲ್ಲಬಹುದು. ಯುವ ಜನರು ಮಾದಕ ವ್ಯಸನಿಗಳಾಗಬಾರದು. ವಿವೇಕಾನಂದರ ಚಿಂತನೆಗಳು ಆದರ್ಶ ನಿಮ್ಮಲ್ಲಿ ತುಂಬಿರಲಿ. 60 ಕೋಟಿ ಜನಸಂಖ್ಯೆಯ ಯುವಕ ರಿಂದ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜವರಪ್ಪ ಅವರು ಮಾತ ನಾಡಿ, ಸ್ವಾಮಿ ವಿವೇಕಾನಂದರು ಬಹು ಭಾಷೆ ಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಯುವ ಜನರೂ ಹೆಚ್ಚು ಭಾಷೆಗಳನ್ನು ಕಲಿಯಿರಿ ಎಂದರು.

ಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾ ಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಪಿ.ಎಸ್.ಮಹೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ್, ಪ್ರಾಂಶುಪಾಲ ಪ್ರೊ.ವೈ. ಚಿತ್ರಾ, ಪಾಧ್ಯಾಪಕ ದಯಾನಂದ, ಕೆ.ಪಿ.ಕುಸುಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಾರತೀಯರಿಗೆ ವಿವೇಕಾನಂದರು ‘ರೋಲ್ ಮಾಡೆಲ್’
ಸೋಮವಾರಪೇಟೆ, ಜ.12- ಸ್ವಾಮಿ ವಿವೇಕಾನಂದರು ಭಾರತೀಯರೆಲ್ಲರಿಗೂ ‘ರೋಲ್ ಮಾಡೆಲ್’ ಎಂದು ಬಸವಾಪಟ್ಟಣದ ತೋಂಟದಾರ್ಯ ಮಠಾಧೀಶ ಶ್ರೀಸ್ವತಂತ್ರ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಭಾನುವಾರ ಮಾನಸ ಸಭಾಂಗಣದಲ್ಲಿ ನಡೆದ ವಿವೇಕಾನಂದರ 157ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವೇಕಾನಂದರು ಭಾರತೀಯರೆಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರಂತೆಯೇ ಎಲ್ಲರೂ ದೇಶಪ್ರೇಮ ಮತ್ತು ಧರ್ಮನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಸ್ವಾಮಿ ವಿವೇಕಾನಂದರು ಸಮಾಜಕ್ಕೆ ಸಾರ್ವಕಾಲಿಕ ಸ್ಫ್ಪೂರ್ತಿಯಾಗಿದ್ದಾರೆ. ಅವರು ದೇಶದ ಯುವ ಜನಾಂಗದ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಅವರ ನಂಬಿಕೆಯನ್ನು ಹುಸಿಗೊಳಿಸದಂತೆ ಯುವ ಜನಾಂಗ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಸದಾನಂದ್, ಕಿರಿಕೊಡ್ಲಿ ಮಠಾಧೀಶ ಶ್ರೀಸದಾಶಿವ ಸ್ವಾಮೀಜಿ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ಸಮಿತಿಯ ಕಾರ್ಯದರ್ಶಿ ಎಸ್.ಮಹೇಶ್, ಖಜಾಂಚಿ ಮೃತ್ಯುಂಜಯ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವೇಕಾನಂದ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಡೊಳ್ಳು ಕುಣಿತ ತಂಡದೊಂದಿಗೆ ವಿವೇಕಾನಂದರ ವಿಚಾರಧಾರೆಗಳ ಜಾಗೃತಿ ಜಾಥಾ ನಡೆಯಿತು.