ನಿವೇಶನ ಕೊಡಿಸುವುದಾಗಿ  ಗೆಳೆಯನಿಂದಲೇ 20 ಲಕ್ಷ ವಂಚನೆ
ಮೈಸೂರು

ನಿವೇಶನ ಕೊಡಿಸುವುದಾಗಿ ಗೆಳೆಯನಿಂದಲೇ 20 ಲಕ್ಷ ವಂಚನೆ

January 12, 2019

ಮೈಸೂರು: ನಿವೇಶನ ಕೊಡಿಸುವುದಾಗಿ 20 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ವಿರುದ್ಧ ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಮಿಳುನಾಡಿನ ಈರೋಡು ಜಿಲ್ಲೆಯ ವಸಂತಕುಮಾರ್, ತನ್ನ ಸ್ನೇಹಿತ ಸಾವಕಟ್ಟು ಪಾಳ್ಯಂ ಗ್ರಾಮದ ಮುರುಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮೈಸೂರಿನ ಒಳ್ಳೆಯ ಜಾಗದಲ್ಲಿ ನಿವೇಶನ ಕೊಡಿಸುವುದಾಗಿ ಸ್ನೇಹಿತ ಮುರುಗೇಶ್ ನಂಬಿಸಿ, ಎರಡು ಬಾರಿ ಕರೆತಂದು ಮಾಲ್ ಆಫ್ ಮೈಸೂರ್ ಹಿಂಭಾಗ ರೇಸ್‍ಕ್ಲಬ್ ರಸ್ತೆಯಲ್ಲಿರುವ ಖಾಲಿ ನಿವೇಶನವನ್ನು ತೋರಿಸಿದ್ದ. ಅವನ ಮಾತು ನಂಬಿದ್ದ ನಾನು, ಚಿನ್ನಾಭರಣ ಅಡವಿಟ್ಟು, ಬ್ಯಾಂಕ್‍ನಲ್ಲಿ ಸಾಲ ಪಡೆದು 20 ಲಕ್ಷ ರೂ. ಹಣ ಹೊಂದಿಸಿದ್ದೆ. ಹಾಗೆಯೇ ಜ.6ರಂದು ಮಧ್ಯಾಹ್ನ ನಿವೇಶನದ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಯಾರಿಗೋ ಸ್ನೇಹಿತರಿಗೆ ಕರೆ ಮಾಡಿ, ಬರುವಂತೆ ತಿಳಿಸಿದ. 3 ಗಂಟೆಯ ಬಳಿಕ ಕಪ್ಪು ಬಣ್ಣದ ಮಾರುತಿ ಓಮ್ನಿ ವ್ಯಾನ್‍ನಲ್ಲಿ ಬಂದ ನಾಲ್ವರನ್ನು ಮಧ್ಯವರ್ತಿಗಳೆಂದು ಪರಿಚಯ ಮಾಡಿಸಿದ. ನಾನು ಅವರೊಂದಿಗೆ ಮಾತನಾಡುವಾಗ ಮುರುಗೇಶ್ ಹಣ ತೆಗೆದುಕೊಂಡು ಹೋಗಿದ್ದಾನೆ ಎಂದು ವಸಂತಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೆಡಿಕಲ್ ಸೀಟು ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಲಕ್ಷ ರೂ. ವಂಚನೆ

ಮೈಸೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ.ಪಡೆದು ವಂಚಿಸಿರುವ ಘಟನೆ ವಿಜಯನಗರದಲ್ಲಿ ನಡೆದಿದ್ದು, ಈ ಕುರಿತು ವ್ಯಕ್ತಿಯೊಬ್ಬರು ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.ಗುಜರಾತ್ ಮೂಲದ ವಿಜಯ ನಗರ 2ನೇ ಹಂತದ ನಿವಾಸಿ ವಿಪುಲ್ ಕುಮಾರ್ ಹಣ ಕಳೆದುಕೊಂಡವರು.

ವಿಪುಲ್ ಕುಮಾರ್ ಅವರಿಗೆ ಆನ್ ಲೈನ್‍ನಲ್ಲಿ ಅಹಮದಾಬಾದ್‍ನ ಮಹೇಶ್ ಪಟೇಲ್ ಎಂಬುವನ ಪರಿಚಯ ವಾಗಿದೆ. ನಂತರದಲ್ಲಿ ವಿಪುಲ್ ಕುಮಾರ್, ಮಗನನ್ನು ಮೆಡಿಕಲ್ ಕಾಲೇಜಿಗೆ ಸೇರಿಸುವ ವಿಷಯವನ್ನು ಮಹೇಶ್ ಪಟೇಲ್‍ನೊಂದಿಗೆ ಪ್ರಸ್ತಾಪಿಸಿದ್ದಾರೆ.
ಈ ಸನ್ನಿವೇಶವನ್ನು ಉಪಯೋಗಿಸಿ ಕೊಂಡ ಮಹೇಶ್ ಪಟೇಲ್, ಮಗನಿಗೆ ಕಸ್ತೂರಿ ಬಾ ಮೆಡಿಕಲ್ ಕಾಲೇಜ್‍ನಲ್ಲಿ ಸೀಟ್ ಕೊಡಿಸುತ್ತೇನೆ. ಲಕ್ಷ ರೂ.ಗಳನ್ನು ಅಕೌಂಟ್‍ಗೆ ಹಾಕುವಂತೆ ಹೇಳಿದ್ದಾನೆ. ಈತನ ಮಾತನ್ನು ನಂಬಿದ ವಿಪುಲ್, ಆತನ ಅಕೌಂಟ್‍ಗೆ ಹಣ ಪಾವತಿಸಿದ್ದಾರೆ. ನಂತರದಲ್ಲಿ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಹೇಶ್ ಪಟೇಲ್ ಹಣ ಪಡೆದು ವಂಚಿಸಿದ್ದಾನೆಂದು ವಿಪುಲ್ ಕುಮಾರ್ ದೂರು ನೀಡಿದ್ದಾರೆ.

ಜೂಜಾಟ: ನಾಲ್ವರ ಬಂಧನ

ಮೈಸೂರು: ಜೂಜಾಡುತ್ತಿದ್ದ ನಾಲ್ವರನ್ನು ವಿಜಯನಗರ ಪೊಲೀಸರು ಬಂಧಿಸಿ, 4 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಹೂಟಗಳ್ಳಿಯ ಸಂತೆಮಾಳದ ಪಕ್ಕದ ಜಾಗದಲ್ಲಿ ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ನಾಲ್ವರು ಆರೋಪಿಗಳು ಹೂಟಗಳ್ಳಿ ನಿವಾಸಿಗಳು.

Translate »