ಮೈಸೂರು: ಪ್ಲಾಸ್ಟಿಕ್ ತ್ಯಜಿಸಿ, ಪೇಪರ್ ಮತ್ತು ಬಟ್ಟೆ ಬ್ಯಾಗ್ ಬಳಸಿ ಸಂದೇಶದೊಂದಿಗೆ ಶಾಲಾ ಮಕ್ಕಳು ಇಂದು ಮೈಸೂರಲ್ಲಿ ಬೃಹತ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಸ್ವಚ್ಛ ಭಾರತ ಅಭಿಯಾನದಡಿ ಏರ್ಪಡಿಸಿದ್ದ ಜಾಥಾಗೆ ಪ್ಲಾಸ್ಟಿಕ್ ತ್ಯಜಿಸಿ ನಿಸರ್ಗ ಉಳಿಸಿ ಅಭಿಯಾನ ನಡೆಸುತ್ತಿ ರುವ ನಾಲ್ಕು ವರ್ಷದ ಇಷಾನ್ ಚೇತನ್ ಅರಮನೆ ಉತ್ತರ ದ್ವಾರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ.
ಸ್ವಚ್ಛ ಭಾರತ ಅಭಿಯಾನಕ್ಕೆ ರಾಯ ಭಾರಿಯನ್ನಾಗಿ ನೇಮಕಗೊಂಡಿರುವ ಇಷಾನ್ ಚೇತನ್ ಇದೇ ವೇಳೆ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ನಲ್ಲದೆ, ಸ್ವಚ್ಛತೆ ಕಾಪಾಡುವ ಬಗ್ಗೆ ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ.
ಈ ಸಂದರ್ಭ ಬಿಎಂಶ್ರೀ ವಿದ್ಯಾ ವರ್ಧಕ ಶಾಲೆಯ ಮಕ್ಕಳು ಸ್ವಚ್ಛತೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರಲ್ಲದೆ, ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ಕೆ.ಆರ್. ಸರ್ಕಲ್, ಡಿ.ದೇವರಾಜ ಅರಸು ರಸ್ತೆ ಮೂಲಕ ಜಾಥಾದಲ್ಲಿ ಸಾಗಿದ ಬಿಎಂಶ್ರೀ ವಿದ್ಯಾವರ್ಧಕ ಶಾಲೆ, ಕೆಎನ್‍ಸಿ ಇನ್ನೋವೇಟಿವ್ ಶಾಲೆ, ಸ್ಮಾಲ್ ವಂಡರ್ ಶಾಲೆ ಹಾಗೂ ಈಶ್ವರ್ ವಿದ್ಯಾಲಯದ ಸುಮಾರು 500 ಮಕ್ಕಳು, ಜಿಲ್ಲಾಧಿಕಾರಿ ಗಳ ಕಚೇರಿ ಬಳಿ ಜಾಥಾ ಅಂತ್ಯಗೊಳಿಸಿದರು.
ಮಾರ್ಗದುದ್ದಕ್ಕೂ ಪೇಪರ್ ಮತ್ತು ಬಟ್ಟೆ ಬ್ಯಾಗ್‍ಗಳನ್ನು ಶಾಲಾ ಮಕ್ಕಳು ಸಾರ್ವಜನಿಕರಿಗೆ ವಿತರಿಸಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೋರಿ ದರು. ಮೇಯರ್ ಪುಷ್ಪಲತಾ ಜಗನ್ನಾಥ, ಉಪ ಮೇಯರ್ ಶಫಿ ಅಹಮದ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಲಕ್ಷ್ಮಿ ಶಿವಣ್ಣ, ಅಶ್ವಿನಿ ಅನಂತು, ರಮಣಿ (ರಮೇಶ್), ಶೋಭಾ ಹಾಗೂ ಕಾರ್ಪೊರೇಟರ್‍ಗಳು ಜಾಥಾದಲ್ಲಿ ಪಾಲ್ಗೊಂಡರು.
ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಆರ್. ಸುರೇಶ್, ಆರೋಗ್ಯಾಧಿಕಾರಿ ಡಾ.ನಾಗರಾಜ್, ಪರಿಸರ ಇಂಜಿನಿ ಯರ್‍ಗಳಾದ ಪೂರ್ಣಿಮಾ, ಮೈತ್ರಿ, ಮಧುಸೂದನ್, ಮೈಸೂರು ವೆಲ್‍ಫೇರ್ ಟ್ರಸ್ಟ್‍ನ ಡಾ. ಸಾರಾ ಹಕ್, ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿಸರದ ರವೀಂದ್ರನಾಥ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸದಸ್ಯರು ಪ್ಲಾಸ್ಟಿಕ್ ತ್ಯಜಿಸಿ ಜಾಥಾದಲ್ಲಿ ಭಾಗವಹಿಸಿದ್ದರು.
ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು. ದೇವರಾಜ ಸಂಚಾರ ಠಾಣೆ ಪೊಲೀಸರು ಜಾಥಾಗೆ ಸಂಚಾರ ಸುಗಮಗೊಳಿಸಿದರು.