ನುಗ್ಗೆಕಾಯಿ ಕೆಜಿಗೆ 160 ರೂ.! ಶುಂಠಿ ಬೆಲೆಯೂ ಹೆಚ್ಚಳ
ಮೈಸೂರು

ನುಗ್ಗೆಕಾಯಿ ಕೆಜಿಗೆ 160 ರೂ.! ಶುಂಠಿ ಬೆಲೆಯೂ ಹೆಚ್ಚಳ

January 12, 2019

ಮೈಸೂರು: ನಿತ್ಯ ಬಳ ಸುವ ತರಕಾರಿ ಪೈಕಿ ನುಗ್ಗೆಕಾಯಿ ಮತ್ತು ಶುಂಠಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ.

ಮೈಸೂರಿನ ದೇವರಾಜ ಮಾರುಕಟ್ಟೆ, ಕೆ.ಆರ್.ಮಾರ್ಕೆಟ್ ಹಾಗೂ ಎಪಿಎಂಸಿ ಮಾರುಕಟ್ಟೆಗಳಲ್ಲಿ ಶುಂಠಿ ಕೆಜಿಗೆ 100 ರೂ. ಹಾಗೂ ನುಗ್ಗೆಕಾಯಿ ಬೆಲೆ ಕೆಜಿಗೆ 160 ರೂ. ಇತ್ತು. ಮೂರು ದಿನಗಳ ಹಿಂದೆ ಶುಂಠಿ 60 ರೂ. ಇತ್ತು. ಆದರೆ ಇದು ಸೀಜನ್ ಇಲ್ಲದಿರುವುದರಿಂದ ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದು, ಒಂದೂವರೆ ತಿಂಗಳ ಹಿಂದೆ ಕೆಜಿಗೆ 50 ರೂ. ಇತ್ತು ಎಂದು ದೇವರಾಜ ಮಾರುಕಟ್ಟೆ ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.

ಇನ್ನು ಚಳಿಗಾಲವಾಗಿರುವುದರಿಂದ ಗಿಡದಲ್ಲಿ ಹೂ ಉದುರುತ್ತಿರುವ ಕಾರಣ ಟೊಮ್ಯಾಟೋ ಇಳುವರಿ ಕಡಿಮೆಯಾಗಿದ್ದು, ವಾರದ ಹಿಂದೆ 20 ರೂ. ಇದ್ದ ಟೊಮ್ಯಾಟೋ ಬೆಲೆ ಇಂದು ಕೆಜಿಗೆ 35 ರೂ.ಗೆ ಹೆಚ್ಚಳವಾಗಿದೆ.

ಬೀನ್ಸ್ ಕೆಜಿಗೆ ಬುಧವಾರ 35 ರೂ. ಇತ್ತು. ಬೀಟ್‍ರೂಟ್ 30 ರೂ. (ಹಳೇ ದರ 20 ರೂ.), ಗೆಡ್ಡೆ ಕೋಸು 30 ರೂ. (20 ರೂ.), ಸೀಮೆ ಬದನೆಕಾಯಿ 30 ರೂ. (ರೂ. 20), ಸಿಹಿ ಗೆಣಸು 30 ರೂ. (ರೂ. 40) ಗಳಿದ್ದು, ಉಳಿದಂತೆ ಕೋಸು 15 ರೂ., ಸಿಹಿ ಕುಂಬಳಕಾಯಿ 10 ರೂ., ಬೆಂಡೆ ಕಾಯಿ 40 ರೂ., ದಪ್ಪ ಮೆಣಸಿನಕಾಯಿ 60 ರೂ., ಬಟಾಣಿ 40 ರೂ. ಆಲೂಗೆಡ್ಡೆ 20 ರೂ., ಈರುಳ್ಳಿ 15 ರೂ., ಮೂಲಂಗಿ 20 ರೂ. ಹಾಗೂ ಬದನೆಕಾಯಿ 40 ರೂ. ಇವುಗಳ ಬೆಲೆಯಲ್ಲಿ ಗಣನೀಯ ಬದಲಾ ವಣೆಯೇನೂ ಆಗಿಲ್ಲ. ಬೆಲೆ ಹೆಚ್ಚಳ ಹೀಗೆಯೇ ಮುಂದುವರಿದಲ್ಲಿ ಸಂಕ್ರಾಂತಿ ಹಬ್ಬಕ್ಕೆ ತರಕಾರಿಗಳು ಗ್ರಾಹಕರ ಕೈ ಸುಡುವುದು ಗ್ಯಾರಂಟಿ ಎಂದು ವರ್ತಕರು ತಿಳಿಸಿದ್ದಾರೆ.

Translate »