ಮೈಸೂರು: ದೇಶದಲ್ಲಿ ಶೇ.20 ರಷ್ಟು ಅರಣ್ಯ ಪ್ರದೇಶವಿದ್ದು, ಶೇ.5 ರಷ್ಟು ಅರಣ್ಯ ವನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ. ಇನ್ನುಳಿದ ಶೇ.15 ರಷ್ಟು ಅರಣ್ಯ ಪ್ರದೇಶವನ್ನು ರಕ್ಷಿಸಿದರೆ ಅರಣ್ಯದ ಪುನರ್ ಸ್ಥಾಪನೆಯಾದಂತಾಗುತ್ತದೆ ಎಂದು ಜಂಗಲ್ ಸ್ಕ್ಯೇಪ್ ಚಾರಿಟಬಲ್ ಟ್ರಸ್ಟ್ ಸಮಿತಿ ಸದಸ್ಯ ಸಿ.ಆರ್.ಹನುಮಂತು ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯ ದಿಂದಾಗಿ ವಾತಾವರಣದಲ್ಲಿ ಇಂಗಾಲ ಡೈ ಆಕ್ಸೈಡ್ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಾಗಿ ಜೀವ ಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ರಕ್ಷಣೆ ಒದಗಿಸಿರುವ ಅರಣ್ಯ ಕ್ಕಿಂತ ಹೆಚ್ಚಾಗಿ ರಕ್ಷಣೆ ಇಲ್ಲದ ಅರಣ್ಯಗಳು ನಿರಂ ತರವಾಗಿ ನಾಶವಾಗುತ್ತಿವೆ. ಆದ್ದರಿಂದ ರಕ್ಷಣೆ ಇಲ್ಲದ ಅರಣ್ಯ ಪ್ರದೇಶವನ್ನು ಕಾಪಾಡಬೇಕಾಗಿದೆ.
ಮನುಷ್ಯ ಆಧುನಿಕತೆಗೆ ಅನುಗುಣವಾಗಿ ಕಾಡ್ಗಿಚ್ಚಿಗಿಂತ ಹೆಚ್ಚಾಗಿ ಅರಣ್ಯವನ್ನು ನಾಶಪಡಿಸುತ್ತಿದ್ದಾನೆ. ಹೊಸದಾಗಿ ಅರಣ್ಯವನ್ನು ಬೆಳೆಸುವುದಕ್ಕಿಂತ ಇರುವ ಅರಣ್ಯವನ್ನು ಉಳಿಸಿಕೊಂಡರೆ ಸಾಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಕೆಲಸ ನಿರ್ವಹಿ ಸುತ್ತಿದ್ದಾರೆ. ಆದರೆ, ಅನುದಾನದ ಕೊರತೆಯಿಂದ ಅರಣ್ಯ ರಕ್ಷಣೆಯಲ್ಲಿ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.
ಅರಣ್ಯವೇ ನಮ್ಮ ಆಸ್ತಿಯೆಂದು ತಿಳಿದು ರಕ್ಷಣೆ ಮಾಡಬೇಕು. ಅರಣ್ಯದಲ್ಲಿರುವ ವೈವಿದ್ಯತೆ ಎಲ್ಲಿಯೂ ದೊರೆಯುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಬೇಕು. ಕಾಡಿನಲ್ಲಿ ಹರಿ ಯುವ ನದಿಗಳ ಎರಡು ಬದಿಯಲ್ಲಿನ ಮರ, ಗಿಡಗಳನ್ನು ಕಾಪಾಡುವುದರಿಂದ ಶುದ್ಧ ನೀರು ಸಹ ದೊರೆಯುತ್ತದೆ. ಸ್ಥಳೀಯ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಿದರೆ ವಾತಾವರಣದ ಉಷ್ಣಾಂಶ ವನ್ನು ತಗ್ಗಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ಡಿ.ಕೆ. ದಿನೇಶ್ ಕುಮಾರ್, ಪಿ.ವಿ ಬಾರದ್ವಾಜ್ ಉಪಸ್ಥಿತರಿದ್ದರು.