ಸಂದೇಶ್‍ಗೆ ಸಚಿವ ಸಿ.ಟಿ.ರವಿ ವಿವರಣೆ
ಚಾ.ನಗರದಲ್ಲಿ ವಿವಿಧೆಡೆ ಬಸ್ ತಂಗುದಾಣ
ಐಬಿ ರಿಪೇರಿ ಜೊತೆಗೆ ಹೊಸ ಪೀಠೋಪಕರಣ
ಬೆಂಗಳೂರು, ಮಾ.11-ಕೊಳ್ಳೇಗಾಲ ತಾಲೂಕು ಶಿವನಸಮುದ್ರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ, ಐತಿಹಾಸಿಕ ಮಹತ್ವವುಳ್ಳ ವೆಸ್ಲಿ ಸೇತುವೆಯ ಸಂರಕ್ಷಣೆ ಹಾಗೂ ಅದಕ್ಕೆ ಪರ್ಯಾಯವಾಗಿ ಹೊಸದಾಗಿ ಸೇತುವೆ ನಿರ್ಮಾಣವನ್ನು 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನು ಮೋದನೆ ನೀಡಲಾಗಿದೆ. ಈ ಪೈಕಿ ಮೊದಲ ಕಂತಾಗಿ 95 ಲಕ್ಷ ರೂಪಾಯಿಗಳನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಿಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿಧಾನ ಪರಿಷತ್ತಿಗೆ ತಿಳಿಸಿದರು.
1832ರಲ್ಲಿ ಕೇವಲ ಕಲ್ಲುಚಪ್ಪಡಿಗಳಿಂದ ನಿರ್ಮಿತವಾದ ಪುರಾತತ್ವ ಮಹತ್ವ ಹಾಗೂ ಪ್ರವಾಸಿ ಆಕರ್ಷಣೆಯ ವೆಸ್ಲಿ ಸೇತುವೆಯು ಈಚಿನ ಕಾವೇರಿ ಪ್ರವಾಹದಲ್ಲಿ ಬಿದ್ದುಹೋಗಿದ್ದು, ಅದರ ಪುನರ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ನಿಂತು ಹೋಗಿದೆ, ಕೂಡಲೇ ಈ ಸೇತುವೆಯ ದುರಸ್ತಿ ಕಾರ್ಯ ಕೈಗೊಳ್ಳುವ ಸಂಬಂಧ ಸಂದೇಶ್ ನಾಗರಾಜ್ ಸರ್ಕಾರದ ಗಮನ ಸೆಳೆದರು.
ಬಸ್ ತಂಗುದಾಣ: ಚಾಮರಾಜನಗರದಲ್ಲಿ ಬಸ್ ಪ್ರಯಾಣಿಕರಿಗಾಗಿ ತಂಗುದಾಣ ಗಳು ಇಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ನಗರಸಭೆಯ ವತಿಯಿಂದ ಪ್ರಯಾಣಿಕರಿಗಾಗಿ ಬಸ್ ತಂಗುದಾಣಗಳನ್ನು ನಿರ್ಮಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದೆಂದು, ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ ನಾರಾಯಣಗೌಡ, ಸಂದೇಶರ ಮತ್ತೊಂದು ಪ್ರಶ್ನೆಗೆ ಉತ್ತ ರಿಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತ, ಗುಂಡ್ಲುಪೇಟೆ ವೃತ್ತ, ಜಿಲ್ಲಾ ಆಸ್ಪತ್ರೆ ಎದುರು, ಲಾರಿ ನಿಲ್ದಾಣದ ಬಳಿ ಸಾರ್ವಜನಿಕರು ಹೆಚ್ಚಾಗಿ ಬಸ್‍ಗಳಿಗಾಗಿ ಕಾಯುತ್ತಿದ್ದು, ವಿಪರೀತ ಬಿಸಿಲಿನ ಬೇಗೆ ಹಾಗೂ ಮಳೆಯಿಂದ ರಕ್ಷಣೆ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಂದೇಶ್ ಗಮನ ಸೆಳೆದಿದ್ದರು.
ಯಳಂದೂರು ಪರಿವೀಕ್ಷಣಾ ಮಂದಿರವು (ಐಬಿ) ಶಿಥಿಲಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಪರಿವೀಕ್ಷಣಾ ಮಂದಿರದ ಶೌಚಾಲಯ ನವೀಕರಣ ಹಾಗೂ ದುರಸ್ತಿಗಾಗಿ 2014-15ನೇ ಸಾಲಿನಲ್ಲಿ 4ಲಕ್ಷ ರೂ., ಸೋಫಾಸೆಟ್, ಡೈನಿಂಗ್ ಚೇರ್, ಪ್ಲಾಸ್ಟಿಕ್ ಚೇರ್‍ಗಳ ಖರೀದಿಗೆ 2016-17ನೇ ಸಾಲಿನಲ್ಲಿ 1 ಲಕ್ಷ ರೂ. ಬಿಡುಗಡೆ ಮಾಡ ಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಾಟರ್ ಪ್ರೂಫಿಂಗ್ ಕಾಮಗಾರಿ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ಅಂದಾಜು ಪಟ್ಟಿ ಅನುಮೋದನೆಯಾಗಿದ್ದು, ಈ ಕಾಮಗಾರಿಗಳನ್ನು ನಿರ್ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರ್ಜೋಳ ಅವರು ಸಂದೇಶ್ ಇನ್ನೊಂದು ಪ್ರಶ್ನೆಗೆ ಭರವಸೆ ನೀಡಿದರು. ಯಳಂದೂರು ಪರಿವೀಕ್ಷಣಾ ಮಂದಿರವು ಶಿಥಿಲಗೊಂಡಿದ್ದು, ಕೂಡಲೇ ಅದರ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಂದೇಶ್ ಆಗ್ರಹಪಡಿಸಿದ್ದರು.