ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್
ಮೈಸೂರು

ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್

August 31, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಮೈಸೂರಿಗೆ ಆಗಮಿಸುತ್ತಿರುವ ಗಜಪಡೆಯ ನಾಯಕ ಅರ್ಜುನ ನೇತೃತ್ವದ ಆರು ಆನೆಗಳ ಮಾವುತರು ಹಾಗೂ ಕಾವಾಡಿಗಳಿಗಾಗಿ ಅರಮನೆ ಆವರಣದಲ್ಲಿ 22 ಟೆಂಟ್‍ಗಳನ್ನು ನಿರ್ಮಿಸಲಾಗಿದೆ.

ಪ್ರತಿ ವರ್ಷದಂತೆ ದಸರಾ ಆನೆಗಳಿಗೆ ಅರಮನೆ ಆವರಣದಲ್ಲಿ ಶೆಡ್ ಹಾಗೂ ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಟೆಂಟ್ ಶಾಲೆ, ಗ್ರಂಥಾಲಯ ಹಾಗೂ ಆಯುರ್ವೇದ ಚಿಕಿತ್ಸಾಲಯಕ್ಕೆ ಟೆಂಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ವರು ಭಾಗವಹಿಸಿದ್ದರು. ಅದರಲ್ಲಿ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ್ದ ನ್ಯಾಷನಲ್ ಎಂಟರ್ ಪ್ರೈಸಸ್‍ಗೆ ಈ ಬಾರಿ ಟೆಂಟ್ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ಆ.23ರಂದೇ ಆನೆಗಳು ಬರಬೇಕಾಗಿದ್ದ ಹಿನ್ನೆಲೆಯಲ್ಲಿ 15 ದಿನದ ಹಿಂದೆಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಕೊಡಗಿನಲ್ಲಿ ಭಾರೀ ಮಳೆ ಹಾಗೂ ಭೂ ಕುಸಿತ ಹಿನ್ನೆಲೆಯಲ್ಲಿ ಗಜ ಪಯಣವನ್ನು ಆ.29ಕ್ಕೆ ಮುಂದೂಡಲಾಗಿತ್ತು. ಆದರೆ ಆ.28ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಸಮಿತಿ ಸಭೆಯಲ್ಲಿ ಸೆ.2ರಂದು ಮೊದಲ ಹಂತದಲ್ಲಿ ಆರು ಆನೆಗಳ ಕರೆತರಲಾಗುತ್ತಿದೆ. ಈ ಮಧ್ಯೆ ಈಗಾಗಲೇ ಅರಮನೆಯ ಆವರಣದಲ್ಲಿ ದಸರಾ ಆನೆಗಳು, ಮಾವುತರು, ಕಾವಾಡಿಗಳಿಗೆ ಶೆಡ್ ಹಾಗೂ ಟೆಂಟ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ, ಕೆಲ ದಿನಗಳಿಂದ ಮಳೆಯ ವಾತಾವರಣ ಇರುವ ಹಿನ್ನೆಲೆಯಲ್ಲಿ ದಸರಾ ಆನೆಗಳೊಂದಿಗೆ ವಿವಿಧ ಆನೆ ಶಿಬಿರಗಳಿಂದ ಬರುವ ಮಾವುತರು ಹಾಗೂ ಕಾವಾಡಿಗಳಿಗೆ ನಾಲ್ಕು ದಿನ ಮುನ್ನವೇ ಟೆಂಟ್ ನಿರ್ಮಾಣ ಮಾಡಲಾಗಿದೆ. ಸೆ.2ಕ್ಕೆ ಮೊದಲ ತಂಡದಲ್ಲಿ ಆರು ಆನೆಗಳು ಆಗಮಿಸಲಿದ್ದು, ಅವುಗಳೊಂದಿಗೆ ಬರುವ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಸದಸ್ಯರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಅಂಬಾರಿ ಆನೆ ಅರ್ಜುನನಿಗೆ ಪ್ರತ್ಯೇಕವಾಗಿ ಶೆಡ್ ನಿರ್ಮಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಟೆಂಟ್ ಶಾಲೆ, ಆಯುರ್ವೇದ ಚಿಕಿತ್ಸಾ ಘಟಕ, ಗ್ರಂಥಾಲಯಕ್ಕೂ ಶೆಡ್ ನಿರ್ಮಾಣ ಮಾಡಲಾಗಿದೆ ಎಂದರು.

ಶೆಡ್ ನಿರ್ಮಾಣದ ಗುತ್ತಿಗೆದಾರ ನ್ಯಾಷನಲ್ ಎಂಟರ್ ಪ್ರೈಸಸ್ ಸಂಸ್ಥೆಯ ಮುಖ್ಯಸ್ಥ ತಫಜುóಲ್ಲ ಮಾತನಾಡಿ, ಅಂಬಾರಿ ಆನೆ ಅರ್ಜುನನಿಗೆ 80ಘಿ40 ಅಳತೆ ಶೆಡ್ ನಿರ್ಮಿಸಲಾಗಿದೆ. ಉಳಿದಂತೆ 20ಘಿ10 ಅಳತೆಯ 22 ಟೆಂಟ್‍ಗಳನ್ನು ಮಾವುತರು ಮತ್ತು ಕಾವಾಡಿಗಳಿಗೆ ನಿರ್ಮಿಸಲಾಗಿದೆ. ಮಳೆ ಹಾಗೂ ಗಾಳಿ ಹಿನ್ನೆಲೆಯಲ್ಲಿ ಶೆಡ್‍ಗಳಿಗೆ ಹೆಚ್ಚುವರಿಯಾಗಿ ಮರದ ಬೊಂಬುಗಳನ್ನು ಕಟ್ಟಿ, ಭದ್ರಗೊಳಿಸಲಾಗಿದೆ. ಮಳೆ ನೀರು ಶೆಡ್‍ಗಳಿಗೆ ನುಗ್ಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.

ಸ್ವಚ್ಛಗೊಳಿಸಲಾಗಿದೆ: ಅರಮನೆ ಆರು ಆನೆಗಳ ಲದ್ದಿ ರಾಶಿ ತೆರವುಗೊಳಿಸಲಾಗುತ್ತಿದೆ. ಅರ್ಜುನನನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಕಟ್ಟುವುದರಿಂದ ಆ ಸ್ಥಳದ ಸುತ್ತಲೂ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೆ ಲಾರಿಯಲ್ಲಿ ಆನೆಗಳು ನೇರವಾಗಿ ಅರಮನೆಯ ಅಂಗಳಕ್ಕೆ ಬರುವ ಹಿನ್ನೆಲೆಯಲ್ಲಿ ಅವುಗಳನ್ನು ಲಾರಿಯಿಂದ ಕೆಳಗಿಳಿಸಲು ತಾತ್ಕಾಲಿಕ ರ್ಯಾಂಪ್ ಮಾದರಿಯಲ್ಲಿ ಮಣ್ಣನ್ನು ತಂದು ಸುರಿಯಲಾಗಿದೆ. ಜೊತೆಗೆ ಅರಮನೆಗೆ ಬರುವ ಪ್ರವಾಸಿಗರು ದಸರಾ ಆನೆಗಳತ್ತ ಬರದಂತೆ ಕಟ್ಟೆಚ್ಚರ ವಹಿಸಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.

Translate »