ಇಂದು  ಮತದಾನ
ಮೈಸೂರು

ಇಂದು  ಮತದಾನ

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳು, ತಿ.ನರಸೀಪುರ, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಪುರಸಭೆಗಳಿಗೆ ನಾಳೆ (ಆ.31) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಹಾಸನ ಜಿಲ್ಲೆಯ ಹಾಸನ, ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ ಪುರಸಭೆ, ಮಂಡ್ಯ ಜಿಲ್ಲೆಯ, ಮಂಡ್ಯ ನಗರಸಭೆ, ಪಾಂಡವಪುರ, ಮದ್ದೂರು, ನಾಗಮಂಗಲ ಪುರಸಭೆ ಅಲ್ಲದೆ ಬೆಳ್ಳೂರು ಪಟ್ಟಣ ಪಂಚಾಯ್ತಿಗಳಿಗೂ ನಾಳೆಯೇ ಮತದಾನ ನಡೆಯಲಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣ ಗೊಳಿಸಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದೆ. ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಅಧ್ಯಕ್ಷೀಯ ಅಧಿಕಾರಿಗಳು (PRO’s) ಸಹಾಯಕ ಅಧ್ಯಕ್ಷೀಯ ಅಧಿಕಾರಿಗಳು(APRO’s), ಮೊದಲನೇ ಮತಗಟ್ಟೆ ಅಧಿಕಾರಿ, 2ನೇ ಮತಗಟ್ಟೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಇಂದು ಮಸ್ಟರಿಂಗ್ ಕೇಂದ್ರಗಳಿಂದ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್,ಲೇಖನ ಸಾಮಗ್ರಿ ಹಾಗೂ ಮತದಾನ ಇನ್ನಿತರೆ ಸಲಕರಣೆಗಳೊಂದಿಗೆ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ತಂತಮ್ಮ ಮತಗಟ್ಟೆಗಳಿಗೆ ಇಂದು ಮಧ್ಯಾಹ್ನದ ನಂತರ ತಲುಪಿದರು.

ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವೀಡಿಯೋ ರೆಕಾರ್ಡಿಂಗ್, ಪಾರ್ಕಿಂಗ್, ಕಾಂಪೌಂಡ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸ ಲಾಗಿದ್ದು, ಇಂದು ರಾತ್ರಿ ಮತಗಟ್ಟೆಗಳಲ್ಲೇ ವಾಸ್ತವ್ಯ ಹೂಡುವ ಸಿಬ್ಬಂದಿ, ಪೂರ್ವ ತಯಾರಿ ಮಾಡಿಕೊಂಡು ನಾಳೆ(ಆ.31)ಬೆಳಿಗ್ಗೆ 6 ರಿಂದ 7 ಗಂಟೆವರೆಗೆ ಎವಿಎಂ ಗಳಲ್ಲಿ ಅಣಕು ಮತದಾನ ನಡೆಸಿ ಮತದಾನಕ್ಕೆ ಅಣಿಯಾಗುವರು.

884 ಮತಗಟ್ಟೆಗಳು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಲ್ಲಿ 90 ಆಕ್ಸಿಲರಿ ಮತಗಟ್ಟೆ ಸೇರಿ ಒಟ್ಟು 815 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತಿ.ನರಸೀಪುರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಪುರಸಭೆಗಳಲ್ಲಿ ತಲಾ 23 ಮತಗಟ್ಟೆ ಸ್ಥಾಪಿಸಲಾಗಿದೆ.

658 ಅಭ್ಯರ್ಥಿಗಳು ಕಣದಲ್ಲಿ: ಪಾಲಿಕೆಯ 65 ವಾರ್ಡ್‍ಗಳಿಗೆ ಒಟ್ಟು 393, ತಿ.ನರಸೀ ಪುರದಲ್ಲಿ 111, ಪಿರಿಯಾಪಟ್ಟಣದಲ್ಲಿ 63 ಹಾಗೂ ಹೆಚ್.ಡಿ.ಕೋಟೆಯಲ್ಲಿ 91 ಸೇರಿ ಪಾಲಿಕೆ ಮತ್ತು ಪುರಸಭೆಗಳಿಂದ ಒಟ್ಟು 658 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
8,53,068 ಮತದಾರರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 4,01,211 ಮಹಿಳೆಯರು ಸೇರಿ ಒಟ್ಟು 7,92,107 ಮಂದಿ ಶುಕ್ರವಾರ ಮತ ಚಲಾಯಿಸ ಬೇಕಾಗಿದೆ. ಉಳಿದಂತೆ ತಿ.ನರಸೀಪುರದಲ್ಲಿ 26,355, ಪಿರಿಯಾಪಟ್ಟಣದಲ್ಲಿ 16,992, ಹೆಚ್.ಡಿ.ಕೋಟೆಯಲ್ಲಿ 17,614 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

1154 ವಿದ್ಯುನ್ಮಾನ ಮತಯಂತ್ರಗಳು: ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಬಾರಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ 1064, ತಿ.ನರಸೀಪುರ ಪುರಸಭೆಗೆ 30, ಪಿರಿಯಾಪಟ್ಟಣಕ್ಕೆ 30 ಹಾಗೂ ಹೆಚ್.ಡಿ.ಕೋಟೆಗೆ 30 ಸೇರಿ ಒಟ್ಟು 1154 ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಅನ್ನು ಒದಗಿಸಲಾಗಿದೆ.

ಸೆ.3ರಂದು ಮತ ಎಣಿಕೆ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆಯು ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಪಡು ವಾರಹಳ್ಳಿಯಲ್ಲಿರುವ ಮಹಾರಾಣಿ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಉಳಿದಂತೆ ತಿ.ನರಸೀಪುರ, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಪುರಸಭೆ ಮತ ಎಣಿಕೆಯು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಅಳಿಸಲಾಗದ ಶಾಯಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರನ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು. ಮೈಸೂರು ಲ್ಯಾಕ್ ಅಂಡ್ ಪೇಂಟ್ಸ್ ಕಾರ್ಖಾನೆಯಿಂದ ರಾಜ್ಯ ಚುನಾವಣಾ ಆಯೋಗಕ್ಕೆ 5 ಮಿ.ಲೀಟರ್‍ನ 12,000 ಇಂಕ್ ಬಾಟಲಿಗಳನ್ನು ಪೂರೈಸಲಾಗಿದೆ.

ಮತಗಟ್ಟೆ ತಿಳಿದುಕೊಳ್ಳಿ: ಶುಕ್ರವಾರ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಮತದಾನ ಕೇಂದ್ರದ ವಿವರ, ವಾರ್ಡ್ ಸಂಖ್ಯೆ, ಭಾಗದ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು mysore.nic.in ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ರೀತಿ ಮೈಸೂರು ಮಹಾನಗರ ಪಾಲಿಕೆಯು ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಮತಗಟ್ಟೆಯ ಬಗ್ಗೆ ದೂರವಾಣಿ: 0821-2418805 ಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

ಇಂದು ಸಾರ್ವತ್ರಿಕ ರಜೆ

ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ತಿ. ನರಸೀಪುರ, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಪುರಸಭೆ ವ್ಯಾಪ್ತಿಯಲ್ಲಿ ನಾಳೆ (ಆ.31) ಎಲ್ಲಾ ರಾಜ್ಯ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಮತದಾರರಿಗೆ ಅನುಕೂಲವಾಗು ವಂತೆ ಕಾರ್ಖಾನೆಗಳು, ಅಂಗಡಿ,
ವಾಣಿಜ್ಯ ಸಂಸ್ಥೆಗಳು ವೇತನ ಸಹಿತ ರಜೆ ನೀಡುವಂತೆ ಆದೇಶಿಸಲಾಗಿದೆ. ಇಂದು ಬೆಳಿಗ್ಗೆ 7 ರಿಂದ ನಾಳೆ (ಆ.31) ಮಧ್ಯರಾತ್ರಿವರೆಗೆ ಹಾಗೂ ಸೆಪ್ಟೆಂಬರ್ 2ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 3ರ ಮಧ್ಯರಾತ್ರಿವರೆಗೆ ಸ್ಥಳೀಯ ಸಂಸ್ಥೆಗಳ ಸುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ಪಾನ್‍ನಿರೋಧ ದಿನವನ್ನಾಗಿ ಘೋಷಿಸಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತಗಟ್ಟೆಗಳಿಗೆ ಮೊಬೈಲ್, ಕ್ಯಾಮರಾ, ಇಂಕ್, ನೀರು ಇತ್ಯಾದಿ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಇಂದು ಬೆಳಿಗ್ಗೆ 9 ಗಂಟೆಯಿಂದ ಆಗಸ್ಟ್ 31ರ ರಾತ್ರಿ 10 ಗಂಟೆವರೆಗೆ ಮೈಸೂರು ಮಹಾನಗರ ಪಾಲಿಕೆಯ ಮತಗಟ್ಟೆಗಳ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತದಾನಕ್ಕೆ ಇವುಗಳಲ್ಲಿ ಯಾವುದಾದರೂ ಒಂದನ್ನು ತನ್ನಿ

ಮೈಸೂರು: ನಾಳೆ (ಆ.31) ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಚಲಾ ಯಿಸಲು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಈ ಕೆಳ ಕಂಡ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಬಹುದಾಗಿದೆ. ಪಾಸ್ ಪೋರ್ಟ್, ಡಿಎಲ್, ಪಾನ್ ಕಾರ್ಡ್, ಸರ್ಕಾರಿ ಅಥವಾ ಖಾಸಗಿ ಸೇವಾ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ವಿದ್ಯಾಸಂಸ್ಥೆ ನೀಡಿರುವ ಗುರುತಿನ ಚೀಟಿ, ಆಸ್ತಿ ದಾಖಲೆ, ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿ, ಶಸ್ತ್ರ ಪರ ವಾನಗಿ, ಅಂಗವಿಕಲ ಗುರು ತಿನ ಚೀಟಿ, ಸಿಎಸ್‍ಡಿ ಕ್ಯಾಂಟಿನ್ ಕಾರ್ಡ್, ಸಂಧ್ಯಾ ಸುರಕ್ಷಾ ಗುರುತಿನ ಚೀಟಿ, ಉದ್ಯೋಗ ಕಾರ್ಡ್, ಯಶಸ್ವಿನಿ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿಮಾ ಸ್ಮಾರ್ಟ್ ಕಾರ್ಡ್.

Translate »