ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!
ಮೈಸೂರು

ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ನಾಳೆ(ಆ.31) ನಡೆಯಲಿರುವ ಚುನಾವಣಾ ಕರ್ತವ್ಯಕ್ಕೆ ಮಹಿಳಾ ಪೇದೆಯೊಬ್ಬರು ತನ್ನ 2 ವರ್ಷದ ಮಗುವಿನೊಂದಿಗೆ ಹಾಜರಾಗುವ ಅನಿವಾರ್ಯತೆ ಎದುರಾಗಿತ್ತು.

ಮೈಸೂರಿನ ಲಷ್ಕರ್ ಠಾಣೆ ಮಹಿಳಾ ಪೇದೆ ಈ.ಜ್ಯೋತಿ, ತನ್ನ 2 ವರ್ಷದ ಮಗುವಿನೊಂದಿಗೆ ಗುರುವಾರ ಮೈಸೂರಿನ ಮಹಾರಾಣಿ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಬಂದರು. ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಮತಗಟ್ಟೆಯ ಮಾಹಿತಿ ಪಡೆದು, ಇನ್ನಿತರ ಸಿಬ್ಬಂದಿಯೊಂದಿಗೆ ವಾಹನ ಏರಿದರು.

ಈ.ಜ್ಯೋತಿ, ಅವರ ಪತಿಯೂ ಕೆಎಸ್‍ಆರ್‍ಪಿ ಪೇದೆ. ಅವರೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವುದರಿಂದ ಬೇರೆ ದಾರಿ ಇಲ್ಲದೆ ಜ್ಯೋತಿ, ಮಗುವಿನೊಂ ದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಸಹೋದರಿ ಬೆಂಗಳೂರಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಎಫ್‍ಡಿಎ ಆಗಿದ್ದು, ಅವರು ಇಂದು ರಾತ್ರಿ ಮೈಸೂರಿಗೆ ಬಂದು ಮಗುವನ್ನು ಜೋಪಾನ ಮಾಡಲಿದ್ದಾರೆ. ಜ್ಯೋತಿ ಅವರಿಗೆ ಲಷ್ಕರ್ ಠಾಣೆ ಹಿಂಭಾಗವಿರುವ ಗೀತಾಮಂದಿರದ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಈ.ಜ್ಯೋತಿ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಗುವಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದಿದ್ದೇನೆ. ಸಾಮಾನ್ಯ ದಿನಗಳಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮಗುವನ್ನು ಜೊತೆಗೆ ಕರೆದುಕೊಂಡು ಹೋಗುತ್ತೇನೆ. ಇದಕ್ಕೆ ಹಿರಿಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಇಂದು ಮಗುವಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದೇನೆ. ರಾತ್ರಿ ಸಹೋದರಿ ಬಂದು ಮಗುವನ್ನು ಕರೆದುಕೊಂಡು ಹೋಗಲಿದ್ದಾರೆ ಎಂದರು.

Translate »