ಕಟ್ಟುನಿಟ್ಟಿನ ಕಾನೂನಿದ್ದರೂ ಶೇ.23ರಷ್ಟು ಬಾಲ್ಯ  ವಿವಾಹ: ನ್ಯಾಯಾಧೀಶ ಸುನೀಲ್ ಎ.ಶೆಟ್ಟರ್ ಕಳವಳ
ಮೈಸೂರು

ಕಟ್ಟುನಿಟ್ಟಿನ ಕಾನೂನಿದ್ದರೂ ಶೇ.23ರಷ್ಟು ಬಾಲ್ಯ ವಿವಾಹ: ನ್ಯಾಯಾಧೀಶ ಸುನೀಲ್ ಎ.ಶೆಟ್ಟರ್ ಕಳವಳ

February 25, 2019

ಮೈಸೂರು: ಪ್ರಸ್ತುತ ಬಾಲ್ಯವಿವಾಹ ತಡೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕಾಯ್ದೆಗಳು ಇದ್ದಾಗ್ಯೂ ರಾಜ್ಯದಲ್ಲಿ ನಡೆಯುವ ಪ್ರತಿ 100 ವಿವಾಹಗಳ ಪೈಕಿ ಕನಿಷ್ಠ 23 ಬಾಲ್ಯವಿವಾಹವಾಗಿರುವ ಅಂಕಿ-ಅಂಶವಿದ್ದು, ಇದು ಆಘಾತಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ಸುನೀಲ್ ಎ.ಶೆಟ್ಟರ್ ಆತಂಕ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ `ಬಾಲ್ಯವಿವಾಹ ನಿಷೇಧ ಕಾಯ್ದೆ-2006’, `ಬಾಲ್ಯವಿವಾಹ ನಿಷೇಧ ನಿಯ ಮಾವಳಿ-2014’ ಹಾಗೂ `ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ-2016’ರ ಅನುಷ್ಠಾನ ಕುರಿತು ಜಿಲ್ಲೆಯ ನ್ಯಾಯಾಧೀಶರು, ಸರ್ಕಾರಿ ಅಭಿಯೋ ಜಕರಿಗೆ ಮತ್ತು ಬಾಲ್ಯವಿವಾಹ ನಿಷೇಧ ಅಧಿಕಾರಿ ಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾ ಗಾರ ಮತ್ತು ಸಂವಾದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಲ್ಯವಿವಾಹ ಕೇವಲ ಸಾಮಾಜಿಕ ನ್ಯಾಯದ ನಿರಾಕರಣೆ ಮಾತ್ರವಲ್ಲ, ಮಾನವ ಹಕ್ಕು ಉಲ್ಲಂ ಘನೆಯೂ ಹೌದು. ಸರ್ಕಾರಗಳು ಕೇವಲ ಕಾಯ್ದೆ ಗಳನ್ನು ತಂದರಷ್ಟೇ ಸಾಲದು. ಇದರ ನಿರ್ಮೂಲನೆ ಯಲ್ಲಿ ಜನರು ಪಾತ್ರ ವಹಿಸಲು ಮುಂದೆ ಬರುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು. ಹರಿಯಾಣ ಸರ್ಕಾರ `ಅಪ್ನಿ ಬೇಟಿ ಅಪ್ನಿ ಧನ್ (ನಮ್ಮ ಮಗಳು ನಮ್ಮ ಆಸ್ತಿ)’ ಯೋಜನೆ ಜಾರಿಗೆ ತಂದು 18 ವರ್ಷದವರೆ ಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡದಿದ್ದರೆ ಅಂತಹ ಕುಟುಂಬಕ್ಕೆ ಪ್ರೋತ್ಸಾಹಧನ ನೀಡುತ್ತಿತ್ತು. ಇಂತಹ ಆಕರ್ಷಕ ಯೋಜನೆಗಳು ಜಾರಿಗೊಂಡರೆ ಹೆಚ್ಚು ಪ್ರಯೋಜನ ಆಗಲಿದೆ ಎಂದು ಅಭಿಪ್ರಾಯಟ್ಟರು.

ಉದ್ಘಾಟನೆ ನೆರವೇರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೋಡಿ ಮಾತನಾಡಿ, ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕ ರಣಗಳ ಶೀಘ್ರ ವಿಲೇವಾರಿ ನಿಟ್ಟಿನಲ್ಲಿ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಹಾಗೂ ನ್ಯಾಯಾಧೀಶರು ಕಾರ್ಯ ನಿರ್ವಹಿಸಬೇಕು. ಅಂತಹ ಪ್ರಕ್ರಿಯೆಗೆ ಇಂದಿನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದ 1929ರಲ್ಲಿ ಬಾಲ್ಯವಿವಾಹ ತಡೆಗಾಗಿ `ಚೈಲ್ಡ್ ಮ್ಯಾರೇಜ್ ರಿಸ್ಟ್ರಿಂಟ್ ಆಕ್ಟ್’ ಜಾರಿ ಗೊಳಿಸಲಾಗಿತ್ತು. ಇದೀಗ 2006ರ ಬಾಲ್ಯ ವಿವಾಹ ಕಾಯ್ದೆ ಸೇರಿದಂತೆ ಅನೇಕ ತಿದ್ದುಪಡಿಗಳೊಂದಿಗೆ ಮತ್ತಷ್ಟು ಹೆಚ್ಚಿನ ಕಾನೂನು ಬಲ ನೀಡಲಾಗಿದೆ. ಭಾರತದಲ್ಲಿ ಪುರಾತನ ಕಾಲದಿಂದಲೂ ಬಾಲ್ಯ ವಿವಾಹ ಪದ್ಧತಿಯನ್ನು ಕಾಣಬಹುದು ಎಂದರು.

ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸುವುದು ಸೇರಿದಂತೆ ಅನೇಕ ನಂಬಿಕೆಗಳ ಹಿನ್ನೆಲೆಯಲ್ಲಿ ಈ ಪದ್ಧತಿ ನಡೆಯುತ್ತಿತ್ತು. ಇದರ ದುಷ್ಪರಿಣಾಮದ ಬಗ್ಗೆ ಅರಿವಿನ ಕೊರತೆ ಇದ್ದಿತು. ಹೀಗಾಗಿ ಅಂದು ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದವು. ಪ್ರಸ್ತುತ ಅದರ ಸಂಖ್ಯೆ ವಿರಳವಾಗಿದ್ದರೂ ಸಾಮೂಹಿಕ ವಿವಾಹಗಳು, ಗ್ರಾಮೀಣ ಪ್ರದೇಶಗಳು ಹಾಗೂ ಬುಡ ಕಟ್ಟು ಜನಸಮುದಾಯದಲ್ಲಿ ಇಂದಿಗೂ ನಡೆಯುತ್ತಿ ರುವುದು ದುರಂತ. ನಮ್ಮ ಸಮಾಜದಲ್ಲಿ ಬಾಲ್ಯ ವಿವಾಹ ವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿ ನಲ್ಲಿ ಇರುವ ಕಾಯ್ದೆಗಳನ್ನು ಸಕ್ರಿಯ ಬಳಕೆಗೆ ಅಧಿಕಾರಿ ಗಳು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಮಾತನಾಡಿ, ಬಾಲ್ಯ ವಿವಾಹದೊಂದಿಗೆ ಹಲವು ಸಾಮಾಜಿಕ ಪಿಡುಗುಗಳು ದೇಶವನ್ನು ಇಂದಿಗೂ ಕಾಡುತ್ತಿವೆ. ಬಾಲ್ಯ ವಿವಾಹ ದಿಂದ ಸಂಬಂಧಗಳು ಮುರಿದು ಹೋಗುವುದೇ ಹೆಚ್ಚು. ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತೊಡೆದು ಹಾಕಲೇಬೇಕು ಎಂಬುದು ಭಾರತದ ಸಂವಿಧಾನ ಆಶಯವಾಗಿದೆ ಎಂದು ನುಡಿದರು. ಜಿಪಂ ಸಿಇಓ ಕೆ.ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಉಪ ನಿರ್ದೇಶಕ ಪಿ.ಬಿ.ಧರಣ್ಣನವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗೀತಾ ಲಕ್ಷ್ಮೀ ಮತ್ತಿತರರು ಹಾಜರಿದ್ದರು.

Translate »