ಬೀದಿಬದಿ ವ್ಯಾಪಾರಿಗಳಿಗಾಗಿ   29 ಸ್ಥಳ ಗುರುತಿಸಿದ ಪಾಲಿಕೆ
ಮೈಸೂರು

ಬೀದಿಬದಿ ವ್ಯಾಪಾರಿಗಳಿಗಾಗಿ  29 ಸ್ಥಳ ಗುರುತಿಸಿದ ಪಾಲಿಕೆ

December 15, 2019

ಮೈಸೂರು,ಡಿ.14(ವೈಡಿಎಸ್)-ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋ ಪಾಯ ಕಲ್ಪಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆ, ಅದಕ್ಕಾಗಿ ನಗರದ 29 ಕಡೆ ವ್ಯಾಪಾರಿ ಸ್ಥಳಗಳನ್ನು ಗುರುತಿಸಿದೆ.

ಕೇಂದ್ರ ಸರ್ಕಾರದ 2009, 2014, 2019ರ ಬೀದಿಬದಿ ವ್ಯಾಪಾರಿಗಳ ಕಾಯ್ದೆ ಪ್ರಕಾರ ಹಾಗೂ ಸುಪ್ರಿಂಕೋರ್ಟ್‍ನ ನಿರ್ದೇಶನಗಳ ಅನುಸಾರ ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋಪಾಯ ಕಲ್ಪಿಸಲು ಪಾಲಿಕೆಯು `ನಗರ ಜೀವನೋ ಪಾಯ ಸಮಿತಿ’ ರಚಿಸಿದೆ. ಈ ಸಮಿತಿಯು ಈಗಾಗಲೇ ನಗರಾದ್ಯಂತ 29 ವ್ಯಾಪಾರಿ ಸ್ಥಳಗಳು ಮತ್ತು 14 ವ್ಯಾಪಾರ ನಿರ್ಬಂಧಿತ ಸ್ಥಳಗಳನ್ನು ಗುರುತಿಸಿದೆ. ಈ ಕುರಿತು ಡಿ.5ರಂದು ನಡೆದ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಗುರುತಿಸಿರುವ ಕೆಲವು ಸ್ಥಳಗಳಲ್ಲಿ ಜನಸಂದಣಿ ಕಡಿಮೆಯಿದೆ, ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಕೆಲ ಸದಸ್ಯರು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀ ಲಿಸಿ ವರದಿ ನೀಡುವಂತೆ ಆಯುಕ್ತರು ವಲಯ ಆಯುಕ್ತರಿಗೆ ಸೂಚಿಸಿದ್ದಾರೆ.

ಮೈಸೂರು ನಗರದಲ್ಲಿ 1856 ಮಂದಿ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಪಾಲಿಕೆ ಯಿಂದ ಗುರುತಿನ ಚೀಟಿ ಮತ್ತು ವ್ಯಾಪಾರ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಶುಚಿತ್ವ ಕಾಪಾಡುವ ಕುರಿತು ತರಬೇತಿಯನ್ನೂ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಗುರುತಿಸಿದ ವ್ಯಾಪಾರ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಶೌಚಾಲಯ, ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕಿದೆ.

ಸಮಿತಿಯಲ್ಲಿ 22ಮಂದಿ: ನಗರ ಜೀವನೋಪಾಯ ಸಮಿತಿಗೆ ಪಾಲಿಕೆ ಆಯುಕ್ತರು ಅಧ್ಯಕ್ಷರಾಗಿದ್ದು, ಮೇಯರ್, ಮುಡಾ ಆಯುಕ್ತರು, ಡಿಸಿಪಿ, ಎಂಸಿಸಿ ಹೆಚ್ಚುವರಿ ಆಯುಕ್ತರು, ಆರೋಗ್ಯಾಧಿಕಾರಿ, ಉಪ ಆಯುಕ್ತರು ಕಂದಾಯ, ಡಿಡಿಪಿಐ, ಅಗ್ನಿಶಾಮಕ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತ ಅಧಿಕಾರಿ, ಲೀಡ್‍ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 13 ಮಂದಿ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ 9 ಮಂದಿ ಪ್ರತಿನಿಧಿಗಳು ಸಮಿತಿಯಲ್ಲಿ ಇದ್ದಾರೆ.

Translate »