`ವೃತ್ತಿ ರಂಗಭೂಮಿ ಸಾಹಿತ್ಯ’ ಸಮಗ್ರ ಕೃತಿಗಾಗಿ ತಜ್ಞರ ಸಮಿತಿ ರಚನೆ
ಮೈಸೂರು

`ವೃತ್ತಿ ರಂಗಭೂಮಿ ಸಾಹಿತ್ಯ’ ಸಮಗ್ರ ಕೃತಿಗಾಗಿ ತಜ್ಞರ ಸಮಿತಿ ರಚನೆ

December 15, 2019

ಮೈಸೂರು,ಡಿ.14(ಎಸ್‍ಪಿಎನ್)- ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ `ವೃತ್ತಿ ರಂಗಭೂಮಿ ಸಾಹಿತ್ಯ’ದ ಸಮಗ್ರ ಕೃತಿಯನ್ನು ಹೊರತರಲು ತಜ್ಞರ ಸಮಿತಿ ರಚಿಸ ಲಾಗಿದೆ ಎಂದು ಅದರ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ತಿಳಿಸಿದರು.

ಮೈಸೂರು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ `ಅನನ್ಯ ಪುಸ್ತಕಗಳು; ಪ್ರಕಾಶಕರು’ ಮತ್ತು `ಪರಸ್ವರ ಆರ್ಟ್ ಫೌಂಡೇಶನ್’ ಸಹಯೋಗದೊಂದಿಗೆ ಆಯೋಜಿಸಿದ್ದ `ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ ಹಾಗೂ `ರಂಗೋತ್ರಿ’ ಕೃತಿ ಅನಾವರಣ ಕಾರ್ಯಕ್ರಮ ದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ವೃತ್ತಿ ರಂಗಭೂಮಿ ಸಾಹಿತ್ಯದ ಸಮಗ್ರ ಕೃತಿಯನ್ನು ಹಲವು ಹಿರಿಯ ರಂಗಕರ್ಮಿಗಳ ಸಲಹೆ ಮೇರೆಗೆ ಹೊರ ತರಲಾಗುತ್ತಿದ್ದು, ಇದರ ನೇತೃತ್ವವನ್ನು ಹೆಚ್.ಎಸ್. ಉಮೇಶ್ ಹಾಗೂ ಇತರರಿಗೆ ವಹಿಸಲಾಗಿದೆ ಎಂದರು.

ಆಧುನಿಕ ನಾಟಕ ಕೃತಿಗಳನ್ನು ಪ್ರಕಟಿಸಲು ಖಾಸಗಿ ಪ್ರಕಾಶನ ಸಂಸ್ಥೆಗಳು ಸಹಭಾಗಿತ್ವ ಪಡೆದುಕೊಳ್ಳುತ್ತವೆ. ಹಳೆಯ ನಾಟಕಗಳ ಮರುಮುದ್ರಣಕ್ಕೆ ಖಾಸಗಿ ಸಹಭಾ ಗಿತ್ವ ದೊರೆಯದ ಕಾರಣ ಪುಸ್ತಕ ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ವೃತ್ತಿರಂಗಭೂಮಿ ಸಾಹಿತ್ಯ ನಾನಾ ಕಾರಣಗಳಿಂದ ಅವನತಿ ಅಂಚಿನಲ್ಲಿರುವುದರಿಂದ ಈ ಸಾಹಿತ್ಯವನ್ನು ರಕ್ಷಿಸುವುದು ಪುಸ್ತಕ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ನಾಟಕಕಾರ ಬಿ.ಎಲ್.ತ್ರಿಪುರಾಂತಕ ರಚನೆಯ `ರಂಗೋತ್ರಿ’ ಪುಸ್ತಕದಲ್ಲಿರುವ `ದ ಪೇಯಿಂಗ್ ಗೆಸ್ಟ್’ ನಾಟಕ ಮಾನ ವೀಯ ನೆಲೆಗಟ್ಟಿನಲ್ಲಿ ರಚಿತವಾಗಿದೆ. ತಮ್ಮ ವಿದ್ಯಾವಂತ ಮಗನಿಂದ ನಿರ್ಲಕ್ಷ್ಯಕ್ಕೊಳಗಾಗುವ ವೃದ್ಧ ತಂದೆ-ತಾಯಿಯ ಜೀವನ ಶೋಷಣೆಯ ಮತ್ತೊಂದು ಮುಖವಾಗಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾದಂತೆಯೇ ಅಮಾನವೀಯ ಮನಸ್ಸುಳ್ಳವರ ಸಂಖ್ಯೆಯೂ ಹೆಚ್ಚಾಗುತ್ತದೆ ಎನ್ನುವುದು ನನ್ನ ಭಾವನೆ ಎಂದರು.

ವೇದಿಕೆಯಲ್ಲಿ ಕನಾಟಕ ಸಂಸ್ಕøತ ವಿವಿಯ ಶೈವಾ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶರತ್‍ಚಂದ್ರ ಸ್ವಾಮೀಜಿ, ಹಿರಿಯ ರಂಗಕರ್ಮಿ ಹೆಚ್.ಎಸ್.ಉಮೇಶ್, ನಾಟಕಕಾರ ತ್ರಿಪುರಾಂತಕ, ಡಿ.ಎನ್. ಲೋಕಪ್ಪ ಇದ್ದರು. ನಂತರ ಕಿರಣ್ ಗಿರ್ಗಿ ನಿರ್ದೇಶನದಲ್ಲಿ `ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನಗೊಂಡಿತು.

ನಾಟಕ ಕುರಿತು: ತಂದೆ ವಿಷಕಂಠನಿಗೆ ಸಂದರ್ಶನಕ್ಕೆ ಹೋಗಿದ್ದ ಪುತ್ರ ಆದರ್ಶನ ಬಗ್ಗೆ ತಿಳಿದುಕೊಳ್ಳುವ ತವಕ. ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ. ಇದರಿಂದ ಮನೆಯಲ್ಲಿ ಅಡ್ಡಾಡುತ್ತಿರುತ್ತಾರೆ. ಈ ವೇಳೆ ಪತ್ನಿ ಪಾರ್ವತಿ, ಟೀ ನೀಡಿದಾಗ ಇಷ್ಟೊಂದು ಬಿಸಿಯಾ ಗಿದೆಂದು ರೇಗುತ್ತಾರೆ. ಟೀ ಗಿಂತ ನಿಮ್ಮ ಬಿಪಿನೇ ಹೆಚ್ಚಾಗಿದೆಂದು ಹೇಳುತ್ತಾರೆ. ಅಷ್ಟರಲ್ಲಿ ಪುತ್ರನ ಫೋನ್ ರಿಂಗಣಿಸುತ್ತದೆ. ನನಗೆ ಕೆಲಸ ಸಿಕ್ಕಿತು. ವಾರ್ಷಿಕ ಪ್ಯಾಕೇಜ್ 18 ಲಕ್ಷ ರೂ. ಎನ್ನುತ್ತಾರೆ. ಇದರಿಂದ ಸಂತೋಷ ಗೊಂಡ ಅಪ್ಪ, ಸಿಹಿ ತರುವಂತೆ ಪತ್ನಿಗೆ ಹೇಳುತ್ತಾರೆ. ಮೊದಲೇ ಶುಗರಿದೆ ಎಂದು ಪತ್ನಿ ಛೇಡಿಸುತ್ತಾರೆ.

ಆನಂತರ ವಿಷಕಂಠ, ಸ್ನೇಹಿತರೊಬ್ಬರಿಗೆ ಕರೆ ಮಾಡಿ ಪುತ್ರನಿಗೆ ವಾರ್ಷಿಕ ಪ್ಯಾಕೇಜ್ 20 ಲಕ್ಷ ರೂ. ಎಂದು ಬೀಗುತ್ತಾರೆ. ಆಗ ಪತ್ನಿ, ಜಿಎಸ್‍ಟಿ ಸೇರಿಸಿ 2 ಲಕ್ಷ ರೂ. ಹೆಚ್ಚಾಗಿ ಹೇಳುತ್ತೀದ್ದೀರೆಂದು ರೇಗಿಸುತ್ತಾರೆ. ಅಷ್ಟ ರಲ್ಲಿ ಸ್ನೇಹಿತ ಮೂರ್ತಿಯ ಆಗಮನವಾಗುತ್ತದೆ. ವಿಷಕಂಠ, ಪುತ್ರ ಆದರ್ಶನಿಗೆ ಕೆಲಸ ಸಿಕ್ಕಿತೆಂದು ಹೇಳುತ್ತಾರೆ.

ಆಗ ಮೂರ್ತಿ, ನಿಮ್ಮನ್ನು ದೇವರೇ ಕಾಪಾಡಬೇಕು. ಈಗಿನ ಕಾಲದ ಸಾಫ್ಟ್‍ವೇರ್ ಹುಡುಗರು ಹಿರಿಯರಿಗೆ ಗೌರವ ನೀಡಲ್ಲ. ಎಲ್ಲವನ್ನೂ ಹಣದಿಂದಲೇ ಅಳೆಯುತ್ತಾರೆ ಎಂದು ಹೇಳುತ್ತಾರೆ. ಅಷ್ಟರಲ್ಲಿ ಮನೆಗೆ ಬಂದ ಪುತ್ರ ಆದರ್ಶನನ್ನು ಪೋಷಕರು ಸ್ವಾಗತಿಸಿ, ಇಂದು ಸಂಜೆ ಹೋಟೆಲ್‍ಗೆ ಹೋಗೋಣ. ಡಿನ್ನರ್ ಖರ್ಚು ನನ್ನದೆಂದು ಅಪ್ಪ ಹೇಳುತ್ತಾರೆ. ನಾನು ನನ್ನ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದು, ನೀವೇ ಡಿನ್ನರ್ ಮಾಡುವಂತೆ ಪುತ್ರ ಆದರ್ಶ, ಹೇಳಿ ಹೊರಟು ಹೋಗುತ್ತಾನೆ. ದಿನದಿಂದ ದಿನಕ್ಕೆ ಆತನ ವರ್ತನೆಯಿಂದ ಭಯಗೊಂಡ ತಾಯಿ, ಅವನು ಯಾರೊಂದಿಗೂ ಮಾತನಾಡದೇ ಮನೆಯಲ್ಲಿ ಪೇಯಿಂಗ್ ಗೆಸ್ಟ್ ರೀತಿ ಇದ್ದಾನೆ. ನಾನು ಅನಾರೋಗ್ಯಗೊಂಡಾಗ ವಾಹನ ವ್ಯವಸ್ಥೆ ಮಾಡಿ ಕಳುಹಿಸಿದ ಹೊರತು ನನ್ನೊಂದಿಗೆ ಬರಲಿಲ್ಲ. ಅವನು ಭಾವನಾತ್ಮಕವಾಗಿ ನಮ್ಮಿಂದ ದೂರವಾಗುತ್ತಿದ್ದಾನೆಂದು ಆನಿಸುತ್ತಿದೆ ಎನ್ನುವ ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ತೇವವಾಗಿಸಿದವು.

Translate »