ಮೂವರು ಸುಲಿಗೆಕೋರರ ಸೆರೆ; 3 ಬೈಕ್, ಬೆಳ್ಳಿ ಚೈನ್ ವಶ
ಮೈಸೂರು

ಮೂವರು ಸುಲಿಗೆಕೋರರ ಸೆರೆ; 3 ಬೈಕ್, ಬೆಳ್ಳಿ ಚೈನ್ ವಶ

December 15, 2019

ಮೈಸೂರು,ಡಿ.14(ಎಸ್‍ಪಿಎನ್)-ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ದೇವರಾಜ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಬೈಕ್ ಹಾಗೂ ಬೆಳ್ಳಿ ಚೈನ್ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ಕಾರ್ತಿಕ್ ಅಲಿಯಾಸ್ ಕರಿಯ(23), ವಿನಾಯಕನಗರದ ನಿವಾಸಿ ಆನಂದ ಅಲಿಯಾಸ್ ನೇಪಾಳಿ(22), ಬೆಳವಾಡಿಯ ಅಮೃತೇಶ್ವರ ನಗರದ ನಿವಾಸಿ ಶಿವಕುಮಾರ್ ಅಲಿಯಾಸ್ ಶಿವಪ್ರಸಾದ್(19) ಬಂಧಿತರು.

ವಿವರ:ಡಿ.4ರಂದು ಮಂಜುನಾಥ್ ಎಂಬುವವರು ಹೊಳೆನರಸೀಪುರಕ್ಕೆ ಹೋಗ ಲೆಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದರು. ಹೊಳೆನರಸೀಪುರ ರೈಲು ಹೊರಡುವುದು ತಡವಾದ್ದರಿಂದ ನಿಲ್ದಾಣದ ಹೊರಗೆ ರಸ್ತೆ ಬದಿ ಹೋಟೆಲ್ ನಲ್ಲಿ ಊಟ ಮಾಡಲು ಮಂಜುನಾಥ್, ದಾಸಪ್ಪ ವೃತ್ತದ ಬಳಿ ಬಂದಿದ್ದಾರೆ. ಈ ವೇಳೆ ಪೆಟ್ರೋಲ್ ಬಂಕ್ ಬಳಿ ಇದ್ದ ಇಬ್ಬರು ಅಪರಿಚಿತರು, ಮಂಜುನಾಥನನ್ನು ತಡೆದು ಪರಿಚಿತರಂತೆ ಮಾತನಾಡಿಸಿ, ಆತ್ಮೀಯತೆ ಬೆಳಸಿಕೊಂಡಿದ್ದಾರೆ. ಮಾತಿನ ಮಧ್ಯೆ ನಾವು ಹೊಳೆನರಸೀಪುರದವರು ಎಂದಾಗ ಮಂಜುನಾಥ್ ಅವರ ಬಳಿ ಮತ್ತಷ್ಟು ಆತ್ಮೀಯವಾಗಿ ಮಾತನಾಡಲು ಮುಂದಾಗಿದ್ದಾರೆ.

ಈ ವೇಳೆ ಅಪರಿಚಿತರು ಮಂಜುನಾಥ್‍ನನ್ನು ಪುಸಲಾಯಿಸಿ, ಮೂತ್ರ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಂಜುನಾಥ್‍ಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ, ಮಂಜುನಾಥ್ ಬಳಿಯಿದ್ದ 2,400 ರೂ. ನಗದು, ಕೊರಳಲ್ಲಿದ್ದ ಬೆಳ್ಳಿ ಚೈನ್ ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಮಂಜುನಾಥ್ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ದಾಸಪ್ಪ ಸರ್ಕಲ್ ಬಳಿಯಿರುವ ಸಿಸಿ ಕ್ಯಾಮರಾ ದಲ್ಲಿ ಪರಿಶೀಲಿಸಿ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸುಲಿಗೆ ಪ್ರಕರಣದಲ್ಲಿ ಆನಂದ್ ಹಾಗೂ ಶಿವಕುಮಾರ್, ಕಾರ್ತಿಕ್‍ಗೆ ಸಾಥ್ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರಮುಖ ಆರೋಪಿ ಕಾರ್ತಿಕ್ ನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ನಜರ್‍ಬಾದ್, ಹುಣಸೂರು, ನರಸಿಂಹ ರಾಜ ಠಾಣಾ ವ್ಯಾಪ್ತಿಯಲ್ಲಿಯೂ ಬೈಕ್‍ಗಳ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮೂರು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪತ್ತೆ ಕಾರ್ಯದಲ್ಲಿ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಸಬ್‍ಇನ್ಸ್ ಪೆಕ್ಟರ್ ಎಂ.ಆರ್. ಲೀಲಾ ವತಿ, ಸಿಬ್ಬಂದಿಗಳಾದ ಎಸ್.ರಾಜು, ಉದಯಕುಮಾರ್, ಸೋಮಶೆಟ್ಟಿ, ವೇಣು ಗೋಪಾಲ, ಸುರೇಶ್, ನಂದೀಶ್, ಪ್ರದೀಪ, ಮಾರುತಿ ಪವನ್ ಪಾಲ್ಗೊಂಡಿದ್ದರು.

Translate »