ಸಾಲಿಗ್ರಾಮ ಘರ್ಷಣೆಗೆ ಪೊಲೀಸರ ವೈಫಲ್ಯವೇ ಕಾರಣ  ಶಾಸಕ ಎನ್.ಮಹೇಶ್ ಆರೋಪ
ಮೈಸೂರು

ಸಾಲಿಗ್ರಾಮ ಘರ್ಷಣೆಗೆ ಪೊಲೀಸರ ವೈಫಲ್ಯವೇ ಕಾರಣ ಶಾಸಕ ಎನ್.ಮಹೇಶ್ ಆರೋಪ

December 15, 2019

ಸಾಲಿಗ್ರಾಮ, ಡಿ.14(ಮಹೇಶ್/ ಜ್ಯೋತಿಸೇನ)-ಸಾಲಿಗ್ರಾಮ ಗುಂಪು ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಪೊಲೀಸರ ವೈಫÀಲ್ಯವೇ ಕಾರಣವಾಗಿದ್ದು, ಮುನ್ನೆಚ್ಚರಿಕೆ ವಹಿಸದ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ತನಿಖೆ ನಡೆಸಿ ಗೃಹಮಂತ್ರಿಗಳಿಗೆ ಘಟನೆ ಕುರಿತು ಸಂಪೂರ್ಣ ವರದಿ ನೀಡುವುದಾಗಿ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ಸಮಿತಿಯ ಸದಸ್ಯರೂ ಆದ ಶಾಸಕ ಎನ್.ಮಹೇಶ್ ತಿಳಿಸಿದರು.

ಸಾಲಿಗ್ರಾಮದ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಘಟನೆಯಿಂದ ಹಾನೀಗಿಡಾದ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಸಾಲಿಗ್ರಾಮದಲ್ಲಿ ಒಂದು ವೃತ್ತದ ವಿಚಾರವಾಗಿ ಕಳೆದ ಹದಿನೈದು ದಿನಗಳಿಂದ ಗಲಾಟೆಗಳು ನಡೆದಿತ್ತು. ಆದರೆ ಸ್ಥಳೀಯ ಪೊಲೀಸರು ಎಚ್ಚೆತ್ತು ಕೊಳ್ಳಲಿಲ್ಲ. ಬೈಕ್ ಡಿಕ್ಕಿ ನೆಪದಲ್ಲಿ ಮತ್ತೆ ಸಣ್ಣದಾಗಿ ಘರ್ಷಣೆ ಸೃಷ್ಟಿಯಾಯಿತು. ಆಗಲೂ ಪೊಲೀಸರು ಎಚ್ಚರ ವಹಿಸಲಿಲ್ಲ. ಈಗ ದೊಡ್ಡಮಟ್ಟದಲ್ಲಿ ಘರ್ಷಣೆ ನಡೆದಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದÀರು.

ಅಂಬೇಡ್ಕರ್ ನಗರದ ನಿವಾಸಿಗಳಿಗೆ ಯಾವುದೇ ಆತಂಕ ಬೇಡ. ನಿಮ್ಮೊಂದಿಗೆ ಸರ್ಕಾರವಿದೆ. ನಾನಿದ್ದೇನೆ. ನಿಮಗೆ ದೊರೆಯಬೇಕಾದ ಸೌಲಭ್ಯ, ಉಂಟಾಗಿರುವ ಹಾನಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸೂಕ್ತ ಪರಿಹಾರದ ಜತೆಗೆ ಉದ್ಯೋಗವಿಲ್ಲದವರಿಗೆ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳು ತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ನೊಂದ ಕುಟುಂಬಗಳು ನಮಗೆ ಈ ಗ್ರಾಮವೇ ಬೇಡ. ನಮ್ಮನ್ನು ಸ್ಥಳಾಂತರ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಾಲಿಗ್ರಾಮ ನಿಮ್ಮ ಕರ್ಮಭೂಮಿ. ನೀವು ಇಲ್ಲೇ ಇರಬೇಕು, ಇಲ್ಲೇ ಜೀವನ ಸಾಗಿಸಬೇಕು, ನಿಮ್ಮ ಜೀವನೋಪಾಯಕ್ಕೆ ಏನು ಬೇಕೋ ಎಲ್ಲವನ್ನೂ ಸರ್ಕಾರ ನೀಡುತ್ತದೆ. ಯಾವುದೇ ಅಂಜಿಕೆ, ಆತಂಕ ಬೇಡ ಎಂದು ಸಮಾಧಾನಪಡಿಸಿದರು.

ನೊಂದವರಿಗೆ ಕೂಡಲೇ ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡಿ, ಪರಿಶಿಷ್ಠ ದೌರ್ಜನ್ಯ ಕಾಯ್ದೆಯಡಿ ಸೌಲಭ್ಯ ವಿತರಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಮಂಜುಳಾ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಅವರಿಗೆ ಆದೇಶಿಸಿದ ಶಾಸಕರು, ವಾರಕ್ಕೊಮ್ಮೆ ಅಂಬೇಡ್ಕರ್ ನಗರದ ಜನರ ಜತೆ ಸಭೆ ನಡೆಸಿ, ಸಮಸ್ಯೆ ಆಲಿಸುವಂತೆ ತಾಕೀತು ಮಾಡಿದರು.

ಹುಣಸೂರು ಡಿವೈಎಸ್‍ಪಿ ಸುಂದರ್‍ರಾಜು, ಕೆ.ಆರ್.ನಗರ ಸಿಪಿಐ ಪಿ.ಕೆ.ರಾಜು, ಸಾಲಿಗ್ರಾಮ ಠಾಣೆ ಎಸ್‍ಐ ಚೇತನ್, ಬಿಎಸ್‍ಪಿ ಜಿಲ್ಲಾಧ್ಯಕ್ಷ ಸಿದ್ದರಾಜು, ತಾಲೂಕು ಬಿಎಸ್‍ಪಿ ಅಧ್ಯಕ್ಷ ರಾಂಪುರ ಲೋಕೇಶ್, ಜಿಲ್ಲಾ ಮುಖಂಡರಾದ ಬಸವರಾಜ್, ಗಣೇಶ್, ದಿವಾಕರ್, ವಸಂತ, ಗ್ರಾಪಂ ಸದಸ್ಯ ರಾಮಯ್ಯ, ಮಾದವ್, ಶಶಿಕಾಂತ್, ಕಂಠೀಕುಮಾರ್, ಚಂದ್ರು, ಶ್ರೀನಿವಾಸ್, ಗೋವಿಂದ, ಮುಖಂಡರಾದ ರಂಗನಾಥ್, ಮೂರ್ತಿ, ಸುರೇಶ್ ಮತ್ತಿತರರಿದ್ದರು.

ಸಹಜ ಸ್ಥಿತಿಯತ್ತ ಸಾಲಿಗ್ರಾಮ

ಸಾಲಿಗ್ರಾಮ, ಡಿ. 14(ಎಸಿಪಿ)- ಕಳೆದ ಗುರುವಾರ ಗುಂಪು ಘರ್ಷಣೆಯಲ್ಲಿ ನಲುಗಿದ್ದ ಸಾಲಿಗ್ರಾಮ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಸಂತೆ ದಿನವಾದ ಶುಕ್ರವಾರ ಎಂದಿನಂತೆ ಸಂತೆ ನಡೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ. ಜಾತಿ ನಿಂದನೆ ಪ್ರಕರಣದ 17 ಆರೋಪಿಗಳ ಪೈಕಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಶಾಸಕ ಸಾ.ರಾ. ಮಹೇಶ್ ಸಹೋದರ ಸಾ.ರಾ. ರವೀಶ್ ಅಲಿಯಾಸ್ ರಘು ಸೇರಿದಂತೆ 10 ಮಂದಿ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.

ಹುಣಸೂರು ಡಿವೈಎಸ್ಪಿ ಸುಂದರರಾಜ್, ಕೆ.ಆರ್.ನಗರ ಠಾಣೆ ಇನ್ಸ್‍ಪೆಕ್ಟರ್ ಪಿ.ಕೆ. ರಾಜು, ಪಿರಿಯಾಪಟ್ಟಣ ಇನ್ಸ್‍ಪೆಕ್ಟರ್ ಪ್ರದೀಪ್, ತಿ.ನರಸೀಪುರ ಇನ್ಸ್‍ಪೆಕ್ಟರ್ ಲವ, ಐವರು ಸಬ್ ಇನ್ಸ್‍ಪೆಕ್ಟರ್‍ಗಳು ಮೊಕ್ಕಾಂ ಹೂಡಿದ್ದಾರೆ. ಒಂದು ಕೆಎಸ್‍ಆರ್‍ಪಿ ತುಕಡಿ, 4 ಸಶಸ್ತ್ರ ಮೀಸಲು ಪಡೆಗಳನ್ನು ಸಾಲಿಗ್ರಾಮದಲ್ಲಿ ನಿಯೋಜಿಸಲಾಗಿದೆ. ಗ್ರಾಮದಲ್ಲಿ ರಾತ್ರಿ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಶನಿವಾರ ಗ್ರಾಮದ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಇಲ್ಲಿ ನಡೆದ ಸಂತೆಗೆ ಅಕ್ಕಪಕ್ಕದ ಗ್ರಾಮಸ್ಥರು ನಿರಾತಂಕವಾಗಿ ಬಂದು ವಹಿವಾಟು ನಡೆಸಿದರು.

Translate »