ನಿಖರ ಕೃಷಿ ಯೋಜನೆ ಜಾರಿಗೆ ಸಿದ್ಧತೆ
ಮೈಸೂರು

ನಿಖರ ಕೃಷಿ ಯೋಜನೆ ಜಾರಿಗೆ ಸಿದ್ಧತೆ

December 15, 2019

ಮೈಸೂರು, ಡಿ.14- ರೈತರ ಅನುಕೂಲಕ್ಕಾಗಿ ರಾಜ್ಯದಲ್ಲಿ `ನಿಖರ ಕೃಷಿ ಯೋಜನೆ’ ಜಾರಿಗೆ ಸಿದ್ಧತೆ ನಡೆದಿದೆ ಎಂದು ಸಿಎಸ್‍ಐಆರ್ ಪ್ರಧಾನ ನಿರ್ದೇಶಕ ಶೇಖರ್ ಸಿ. ಮಂಡೆ ತಿಳಿಸಿದರು.

ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಸಿಎಸ್‍ಐಆರ್ ವತಿಯಿಂದ `ನಿಖರ ಕೃಷಿ ಯೋಜನೆ’ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ರೈತರು ನೋಂದಣಿ ಮಾಡಿಕೊಂಡು ಯೋಜನೆಯ ಉಪಯೋಗ ಪಡೆಯಬಹುದು. 2020ರ ಏಪ್ರಿಲ್‍ನೊಳಗೆ ಸಿಎಸ್‍ಐಆರ್‍ನಡಿ 4 ಸಂಸ್ಥೆಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಮಣ್ಣಿನ ಗುಣ ಇನ್ನಿತರ ಅವಶ್ಯ ಮಾಹಿತಿ ಹಂಚಿಕೊಂಡರೆ ಅಲ್ಗರಿದಂ(ಕಂಪ್ಯೂಟರ್ ಸನ್ನೆ) ಮೂಲಕ ನಿಖರ ಮಾಹಿತಿ ನೀಡಲಾಗುವುದು. ಜೊತೆಗೆ ಅಗತ್ಯವಿದ್ದಲ್ಲಿ ಬದಲಾವಣೆಗೆ ಸೂಚನೆ ನೀಡಲಾಗುವುದು. ಈ ಮೂಲಕ ಕೃಷಿ ಸುಧಾರಣೆ ಜೊತೆಗೆ ಅಪೌಷ್ಟಿಕ ಸಮಸ್ಯೆಯನ್ನೂ ತಾಂತ್ರಿಕ ಪರಿಹಾರಗಳ ಮೂಲಕ ನಿಯಂತ್ರಿಸಬಹುದು ಎಂದರು.

ದೇಸಿ ವಿಮಾನ: ದೇಶಿಯ ತಂತ್ರe್ಞÁನ ಬಳಸಿ 70 ಸೀಟುಗಳ ವಿಮಾನ ತಯಾರಿಸಲಾಗುವುದು. ಇದಕ್ಕೆ ಹಣಕಾಸು ಸ್ಥಾಯಿ ಸಮಿತಿ ಅನುಮೋದನೆ ದೊರೆತಿದ್ದು, ಬೆಂಗಳೂರು ಮೂಲದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ವಿಮಾನ ತಯಾರಿ ಯೋಜನೆಯನ್ನು ಆರಂಭಿಸಲಿದೆ. ಆರೇಳು ವರ್ಷಗಳಲ್ಲಿ ಸೇವೆಗೆ ಲಭ್ಯವಾಗಬಹುದು. ಈ ವಿಮಾನವನ್ನು ಪ್ರಾದೇಶಿಕ ವಿಮಾನ ಸಂಪರ್ಕಕ್ಕಾಗಿ ಬಳಸಲಾಗುವುದು. ಇದರಿಂದ ಸಣ್ಣ ನಗರಗಳ ಸಂಪರ್ಕ ಸಮಸ್ಯೆಗಳಿಗೂ ಪರಿಹಾರ ದೊರಕಿದಂತಾಗುತ್ತದೆ. ಸೈನಿಕರ ಪ್ರಯಾಣ ಹಾಗೂ ಏರ್ ಆ್ಯಂಬುಲೆನ್ಸ್ ಆಗಿ ತುರ್ತು ಸಂದರ್ಭದಲ್ಲೂ ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

Translate »