ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆ 2ನೇ ತಂಡ
ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆ 2ನೇ ತಂಡ

September 10, 2019

ಮೈಸೂರು, ಸೆ.9(ಎಸ್‍ಬಿಡಿ)- ದಸರಾ ಮಹೋತ್ಸವದಲ್ಲಿ ಭಾಗಿಯಾಗುವ 2ನೇ ತಂಡದ ಗಜಪಡೆ ಇಂದು ಮೈಸೂರು ಅರಮನೆ ಆವರಣ ಪ್ರವೇಶಿಸಿತು.

ವಿವಿಧ ಶಿಬಿರಗಳಿಂದ 2 ತಂಡವಾಗಿ ಕರೆತರಲಾಗಿರುವ 7 ಆನೆಗಳನ್ನು ಅರಮನೆ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಶಾಸಕ ಎಸ್.ಎ.ರಾಮದಾಸ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಡಿಸಿಎಫ್(ವನ್ಯಜೀವಿ) ಅಲೆಕ್ಸಾಂಡರ್ ಇನ್ನಿತರ ಗಣ್ಯರು ಗಜಪಡೆಗೆ ಪೂಜೆ ಸಲ್ಲಿಸಿದರು. ಇದರಲ್ಲಿ ಮತ್ತಿಗೋಡು ಆನೆ ಶಿಬಿರದಿಂದ `ಬಲರಾಮ’ ನಿನ್ನೆಯೇ ಆಗಮಿಸಿದ್ದು, ಉಳಿದಂತೆ ದುಬಾರೆಯಿಂದ `ಕಾವೇರಿ’, `ವಿಕ್ರಮ’, `ಗೋಪಿ’, ಕೆ.ಗುಡಿ ಆನೆ ಶಿಬಿರದಿಂದ `ದುರ್ಗಾಪರಮೇಶ್ವರಿ’, ರಾಂಪುರ ಆನೆ ಶಿಬಿರದಿಂದ `ಜಯಪ್ರಕಾಶ್’ ಹಾಗೂ `ಲಕ್ಷ್ಮೀ’ಯನ್ನು ಇಂದು ಕರೆತರಲಾಯಿತು.

ಸಂಕ್ಷಿಪ್ತ ವಿವರ: ಮೈಸೂರು ದಸರಾ ಮಹೋತ್ಸವದಲ್ಲಿ 23 ವರ್ಷದಿಂದ ಭಾಗಿ ಯಾಗುತ್ತಿರುವ 61 ವರ್ಷದ `ಬಲರಾಮ’, `ದ್ರೋಣ’ನ ನಂತರ ಸತತವಾಗಿ 14 ವರ್ಷ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಮಾವುತ ತಿಮ್ಮ ಹಾಗೂ ಕಾವಾಡಿ ಪಾಪು `ಬಲರಾಮ’ನ ಆರೈಕೆಗೆ ಜೊತೆಯಲ್ಲಿದ್ದಾರೆ. 8 ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ `ಕಾವೇರಿ(41ವರ್ಷ)’ಯೊಂದಿಗೆ ಮಾವುತ ದೋಬಿ, ಕಾವಾಡಿ ಜೆ.ರಂಜನ್, 15 ವರ್ಷದಿಂದ ಪಾಲ್ಗೊಳ್ಳುತ್ತಿರುವ `ವಿಕ್ರಮ(46)’ನೊಂದಿಗೆ ಮಾವುತ ಪುಟ್ಟ, ಕವಾಡಿ ಹೇಮಂತ ಕುಮಾರ್, 9 ವರ್ಷದಿಂದ ಭಾಗಿಯಾಗುತ್ತಿರುವ `ಗೋಪಿ(37)’ಯೊಂದಿಗೆ ಮಾವುತ ದೊರೆಯಪ್ಪ, ಕವಾಡಿ ಶಿವು, 7ನೇ ಬಾರಿಗೆ ಪಾಲ್ಗೊಳ್ಳುತ್ತಿರುವ `ದುರ್ಗಾಪರ ಮೇಶ್ವರಿ(52)’ಯೊಂದಿಗೆ ಮಾವುತ ಅಣ್ಣು ಹಾಗೂ ಕವಾಡಿ ಕೃಷ್ಣ ಆಗಮಿಸಿದ್ದಾರೆ.

ಮೊದಲ ಬಾರಿ ಭಾಗಿ: ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಕರೆತರಲಾ ಗಿರುವ 57 ವರ್ಷದ `ಜಯಪ್ರಕಾಶ್’, 17 ವರ್ಷದ `ಲಕ್ಷ್ಮೀ’ ಹಾಗೂ ಮೊದಲ ತಂಡದ `ಈಶ್ವರ(49 ವರ್ಷ)’ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸಿವೆ. ಮಾವುತ ಸಯ್ಯದ್ ಮೊಹಮ್ಮದ್, ಕವಾಡಿ ಬಸವರಾಜು `ಜಯಪ್ರಕಾಶ್’ ಆನೆ, ಮಾವುತ ಚಂದ್ರ ಹಾಗೂ ಕಾವಾಡಿ ಲವ `ಲಕ್ಷ್ಮೀ’ ಆನೆಯ ಆರೈಕೆ ಮಾಡುತ್ತಿದ್ದಾರೆ.

ರೋಹಿತ್ ಬಂದಿಲ್ಲ: ದಸರಾ ಗಜಪಡೆ ಪಟ್ಟಿಯಲ್ಲಿದ್ದ `ರೋಹಿತ್’ನನ್ನು ಕರೆತಂದಿಲ್ಲ. ತುಂತಾಟದಿಂದಾಗಿ ಆತನನ್ನು ದಸರೆಗೆ ಕರೆತಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಅರಣ್ಯಾಧಿಕಾರಿಗಳು ಇದನ್ನು ನಿರಾಕರಿಸಿದ್ದು, ದಸರೆಗೆ ಬೇಕಿರುವ 12 ಆನೆಗಳ ಜೊತೆಗೆ ಹೆಚ್ಚುವರಿಯಾಗಿ ಒಂದು ಆನೆಯನ್ನು ಕರೆತರಲಾಗಿದೆ. ಎಲ್ಲಾ ಆನೆಗಳೂ ಆರೋಗ್ಯವಾಗಿರುವುದರಿಂದ `ರೋಹಿತ್’ನನ್ನು ಕರೆತಂದಿಲ್ಲ ಎಂದಿದ್ದಾರೆ.

ತಾಲೀಮಿಗೆ ಸಿದ್ಧ: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೊದಲ ತಂಡದಲ್ಲಿ ಆ.26ರಂದು ಆಗಮಿಸಿರುವ `ಅರ್ಜುನ’, `ಅಭಿಮನ್ಯು’, `ಧನಂಜಯ’, `ಈಶ್ವರ’, `ವರಲಕ್ಷ್ಮೀ’ ಹಾಗೂ `ವಿಜಯ’ ಗಜಪಡೆ ಈಗಾಗಲೇ ಜಂಬೂ ಸವಾರಿ ತಾಲೀಮು ನಡೆಸುತ್ತಿವೆ. ಇದೀಗ ಜೊತೆಗೂಡಿರುವ 2ನೇ ತಂಡದ ಆನೆಗಳೂ ತೂಕ, ಆರೋಗ್ಯ ಪರೀಕ್ಷೆ ಬಳಿಕ ಶೀಘ್ರ ತಾಲೀಮಿನಲ್ಲಿ ಭಾಗಿಯಾಗಲಿವೆ.

Translate »