ಮೈಸೂರು: ಪ್ರವಾಸಿಗರು ಹಾಗೂ ಮೈಸೂರಿಗರ ಪ್ರಮುಖ ಆಕರ್ಷಣೇಯ ಕೇಂದ್ರ ಬಿಂದು ದಸರಾ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿರುವ ದಸರಾ ವಸ್ತುಪ್ರದರ್ಶನ ಅ.10 ರಂದು ಆರಂಭವಾಗಿದ್ದು, ಈವರೆಗೆ 3.70 ಲಕ್ಷ ಜನ ಭೇಟಿ ನೀಡಿದ್ದಾರೆ. ವಿವಿಧ ಇಲಾಖೆಗಳಿಂದ ನಿರ್ಮಾಣವಾಗುತ್ತಿರುವ ಮಳಿಗೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.
ಲ್ಯಾಂಟನ್ ಪಾರ್ಕ್: ಈ ಬಾರಿಯ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್ ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ವಿಶೇಷ ತ್ರೀಡಿ ಆಕೃತಿಗಳು ಜನರ ಸೆಳೆಯುತ್ತಿವೆ. ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಆಕರ್ಷಕ ಮಳಿಗೆಗಳು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ, ಅರಣ್ಯ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರ್ಮಾಣವಾಗಿರುವ ಮಳಿಗೆಗಳು ಆಕರ್ಷಕವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ.