ನಾಳೆಯಿಂದ 3 ದಿನ ತೊಣ್ಣೂರು ಕೆರೆ ಉತ್ಸವ
ಮಂಡ್ಯ

ನಾಳೆಯಿಂದ 3 ದಿನ ತೊಣ್ಣೂರು ಕೆರೆ ಉತ್ಸವ

November 22, 2018

ಮಂಡ್ಯ:  ಐತಿಹಾಸಿಕ ತಾಣ ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಯ ಬಳಿ ನ.23ರಿಂದ 25 ರವರೆಗೆ ಒಟ್ಟು 3 ದಿನಗಳವರೆಗೆ `ತೊಣ್ಣೂರು ಕೆರೆ ಉತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಣ್ಣ ನೀರಾ ವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಕೆರೆತೊಣ್ಣೂರು ಗ್ರಾಮದ ಕೆರೆಯ ಬಳಿ ನಡೆದ ತೊಣ್ಣೂರು ಕೆರೆ ಉತ್ಸವ ಕಾರ್ಯ ಕ್ರಮದ ಪೂರ್ವಭಾವಿ ಸಿದ್ಧತಾ ಪರಿಶೀಲಿಸಿ, ಸಭೆ ನಡೆಸಿ ಬಳಿಕ ಅವರು ಮಾತನಾಡಿದರು.

`ತೊಣ್ಣೂರು ಕೆರೆ ಈ ಭಾಗದ ರೈತರ ಜೀವನಾಡಿಯಾಗಿದೆ. ಪ್ರತಿ ವರ್ಷ ತುಂಬಿದ ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಈ ಬಾರಿ ಈ ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಲು ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ ಕಾರಣ ಇಲ್ಲಿ ಬೃಹತ್ `ತೊಣ್ಣೂರು ಕೆರೆ ಉತ್ಸವ’ ನಡೆಸುವ ಮೂಲಕ ಈ ಸ್ಥಳಕ್ಕೆ ಸಾಂಸ್ಕೃತಿಕ ಸ್ಪರ್ಶದೊಂದಿಗೆ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲು 23ರಂದು ಸಂಜೆ 6ಕ್ಕೆ ಕೆರೆತೊಣ್ಣೂರಿಗೆ ಆಗಮಿಸುವರು. ಮುಖ್ಯ ಮಂತ್ರಿಗಳನ್ನು ಬೃಹತ್ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ವಿಶೇಷ ವಾಗಿ ಕೆರೆ ನೀರಿನ ಮೇಲೆ ನಿರ್ಮಿಸಿರುವ ತೇಲುವ ವೇದಿಕೆಯಲ್ಲಿ 3 ದಿನ ನಡೆಯುವ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡುವರು ಎಂದರು.
ಮೂರು ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿತ್ಯ 150 ಸಾಂಸ್ಕೃತಿಕ ಕಲಾ ತಂಡಗಳ ಜತೆಗೆ ಹಿನ್ನೆಲೆ ಗಾಯಕರಾದ ಮೈಸೂರಿನ ವಿಜಯ ಪ್ರಕಾಶ್, ಅರ್ಚನಾ ಉಡುಪಾ, ಐಶ್ವರ್ಯ (ಐಶ್) ಸೇರಿದಂತೆ ಚಲನಚಿತ್ರ ಕಲಾವಿದರು ಆಗಮಿಸುವರು. ಉತ್ಸವದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ ಸಣ್ಣ ನೀರಾವರಿ ಇಲಾಖೆಯಿಂದ ಉಚಿತ ಬೋಟಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ. ಜತೆಗೆ ಆಹಾರ ಮೇಳ ನಡೆಸಿ ಕಡಿಮೆ ಹಣ ದಲ್ಲಿ ಉತ್ತಮ ಆಹಾರವನ್ನು ಪ್ರವಾಸಿಗರಿಗೆ ನೀಡಲಾಗುವುದು ಎಂದು ತಿಳಿಸಿದರು.

ಡಿಸ್ನಿಲ್ಯಾಂಡ್ ಕೈಬಿಡಲ್ಲ: ಉದ್ದೇಶಿತ ಕೆಆರ್‍ಎಸ್‍ನ ಡಿಸ್ನಿ ಲ್ಯಾಂಡ್ ನಿರ್ಮಾಣ ಕಾರ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ, ಎಲ್ಲ ವಿರೋಧಗಳಿವೆಯೋ ಅವೆಲ್ಲಾ ತಪ್ಪು ಗ್ರಹಿಕೆಯಿಂದಷ್ಟೇ ಉದ್ಭವವಾಗಿದೆ. ಈ ಯೋಜನೆ ಜಾರಿಯಿಂದ ಸಹಸ್ರಾರು ಮಂದಿಗೆ ಉದ್ಯೋಗ ದೊರಕಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ತಜ್ಞರಿಂದ ಪರಿಶೀಲನೆ ನಡೆಸಿದ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು.

ಬಿಜೆಪಿಗೆ ತಿರುಗೇಟು: ರೈತರ ಕಬ್ಬಿನ ದರ ನಿಗದಿ ವಿಚಾರದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ ಕೇಂದ್ರದಿಂದ ರೈತರಿಗೆ ಸಿಗಬೇಕಿ ರುವ ಸೌಲಭ್ಯ ಕೊಡಿಸುವ ಕೆಲಸ ಮಾಡಿ ತೋರಿಸಲಿ ಎಂದು ತಿರುಗೇಟು ನೀಡಿದ ಸಚಿವರು, ಬಿಜೆಪಿಯವರ ಬಂಡವಾಳವೇ ನೆಂದು ಜನರಿಗೂ ಗೊತ್ತಿದೆ, ಬಿಜೆಪಿ ನಾಯಕ ರಿಂದ ನಾವು ಪಾಠ ಕಲಿಯುವ ಅಗತ್ಯ ವಿಲ್ಲ ಎಂದು ಸಿಡಿಮಿಡಿಗೊಂಡರು.

ಇದೇ ಸಂದರ್ಭದಲ್ಲಿ ಡಿಸಿ ಮಂಜುಶ್ರೀ, ಎಸ್ಪಿ ಪ್ರಕಾಶ್ ದೇವರಾಜ್ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಸಚಿವ ರೊಂದಿಗೆ ಕಾರ್ಯಕ್ರಮದ ಸಿದ್ಧತೆಯ ಪರಿ ಶೀಲನೆ ನಡೆಸಿದರು. ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲಾ, ಟಿ.ಎಸ್.ಛತ್ರ ಗ್ರಾಪಂ ಅಧ್ಯಕ್ಷೆ ಶೃತಿ ಇತರರಿದ್ದರು.

718 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರಾಭಿವೃದ್ಧಿ: ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಷೇತ್ರದ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನ.23ರಂದು 12 ಇಲಾಖೆಯನ್ನೊಳ ಗೊಂಡಂತೆ 718 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡುವರು ಎಂದು ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ನ.23ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಧ್ಯಾಹ್ನ 2 ಗಂಟೆಗೆ ವಿಸಿ ಫಾರಂಗೆ ಆಗಮಿಸುವರು. 3 ಗಂಟೆಗೆ ದುದ್ದ ಕೇಂದ್ರ ಸ್ಥಾನದಲ್ಲಿ ಸುಮಾರು 144 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ದುದ್ದ ಹೋಬಳಿ ಕೆರೆಗಳಿಗೆ ಲೋಕಪಾವನಿಯಿಂದ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು.

ತಾಲೂಕಿನ ಜಕ್ಕನಹಳ್ಳಿ, ಎಲೆಕೆರೆ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳು ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡುವರು. ಜತೆಗೆ ಪಾಂಡವಪುರ ಬಸ್ ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಹಾಗೂ ಬಸ್ ಡಿಪೋ ಕಾಂಕ್ರಿಟ್ ಕಾಮಗಾರಿಗೂ ಚಾಲನೆ ನೀಡುವರು. ಅಲ್ಲದೇ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಈ ಸಂಬಂಧ ಮೇಲುಕೋಟೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸುವರು ಎಂದು ವಿವರಿಸಿದರು.

ಅಂದು ಸಂಜೆ 6ಕ್ಕೆ ಕೆರೆತೊಣ್ಣೂರಿಗೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡುವರು. ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ತೊಣ್ಣೂರುಕೆರೆಯಲ್ಲೂ ಕೆಆರ್‍ಎಸ್ ಮಾದರಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರ ಗಮನ ಸೆಳೆಯುವ ಕೆಲಸ ಮಾಡಲಾಗುವುದು. ಜತೆಗೆ ಪ್ರತಿ ವರ್ಷ ತೊಣ್ಣೂರು ಉತ್ಸವ ಆಚರಿಸಲು ಪ್ರಯತ್ನಿಸಲಾಗುವುದು ಎಂದರು.

Translate »