ವಾರ್ಡ್ 21ರ ಉದ್ಯಾನಗಳಿಗಾಗಿ 3 ಹೊಸ ಕೊಳವೆ ಬಾವಿ
ಮೈಸೂರು

ವಾರ್ಡ್ 21ರ ಉದ್ಯಾನಗಳಿಗಾಗಿ 3 ಹೊಸ ಕೊಳವೆ ಬಾವಿ

March 4, 2020

ಮೈಸೂರು,ಮಾ.3(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ 21ರಲ್ಲಿ ಸಾರ್ವಜನಿಕ ಬಳಕೆ ಹಾಗೂ ಉದ್ಯಾನವನಗಳ ನಿರ್ವಹಣೆಗಾಗಿ 3 ಹೊಸ ಕೊಳವೆ ಬಾವಿ ಕೊರೆಸುವ ಕಾಮಗಾರಿಗೆ ಪಾಲಿಕೆ ಸದಸ್ಯೆ ಸಿ.ವೇದಾವತಿ ಮಂಗಳವಾರ ಚಾಲನೆ ನೀಡಿದರು.

ಕೆಲ ದಿನಗಳಿಂದ ವಾರ್ಡ್ 21ರಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಉದ್ಯಾನವನಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ 15 ಲಕ್ಷ ರೂ. ವೆಚ್ಚದಲ್ಲಿ ವಾಗ್ದೇವಿ ನಗರ, ಕುದುರೆ ಮಾಳ ಹಾಗೂ ಸರಸ್ವತಿಪುರಂ ಪಾರ್ಕ್‍ನಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಯಿತು ಎಂದು ವೇದಾವತಿ ಹೇಳಿದರು.

21ನೇ ವಾರ್ಡ್ ಅಭಿವೃದ್ಧಿಗೆ ವಿವಿಧ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹೊಸ ಬೋರ್‍ವೆಲ್‍ಗಳಿಂದ ಅಗತ್ಯವೆನಿಸಿದಾಗೆಲ್ಲಾ ಸಾರ್ವಜನಿಕರಿಗೂ ನೀರೊದಗಿಸಲಾಗುತ್ತದೆ. ನೀರಿನ ಮಿತ ಬಳಕೆಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ಶ್ರೀನಿವಾಸ್, ರಮೇಶ್, ಬಡಾವಣೆಯ ಹಿರಿಯ ನಾಗರಿಕರು, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Translate »