ಪರಿವಾರ, ತಳವಾರ ಎಸ್‍ಟಿಗೆ; ಪಕ್ಷಾತೀತ ಹೋರಾಟದ ಫಲ
ಮೈಸೂರು

ಪರಿವಾರ, ತಳವಾರ ಎಸ್‍ಟಿಗೆ; ಪಕ್ಷಾತೀತ ಹೋರಾಟದ ಫಲ

March 8, 2020

36 ವರ್ಷಗಳ ಸುದೀರ್ಘ ಹೋರಾಟ: ಶಾಸಕ ಅನಿಲ್ ಚಿಕ್ಕಮಾದು ಕೃತಜ್ಞತೆ
ಮೈಸೂರು,ಮಾ.7(ಎಂಟಿವೈ)- ಸತತ 36 ವರ್ಷಗಳ ಸುದೀರ್ಘ ಹಾಗೂ ಪಕ್ಷಾ ತೀತ ಹೋರಾಟದ ಫಲವಾಗಿ ಪರಿವಾರ ಮತ್ತು ತಳವಾರ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಈ ಹೋರಾಟದ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ದಿ.ಚಿಕ್ಕಮಾದು ಸೇರಿದಂತೆ ಹಲವು ನಾಯಕರ ಪರಿಶ್ರಮವಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪರಿವಾರ ಮತ್ತು ತಳವಾರ ಪಂಗಡ ವನ್ನು ಎಸ್‍ಟಿಗೆ ಸೇರಿಸುವಂತೆ ಒತ್ತಾ ಯಿಸಿ ಎಲ್ಲಾ ಪಕ್ಷಗಳ ಮುಖಂಡರೂ ಪಕ್ಷಭೇದ ಮರೆತು ಹೋರಾಡಿದ್ದಾರೆ. ಕಡೆಗೂ ಫಲ ಸಿಕ್ಕಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಎಲ್.ಜಿ.ಹಾವನೂರು ಆಯೋಗದ ವರದಿ ಆಧರಿಸಿ ನಾಯಕ ಜನಾಂಗದ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿ ಸಲು ಮೂರೂವರೆ ದಶಕಗಳ ಹಿಂದೆ (1984ರಲ್ಲಿ) ಹೋರಾಟ ಆರಂಭವಾಯಿತು. ಸಮಾಜದ ಹಿರಿಯ ಮುಖಂಡ ಸಂಜೀ ವಯ್ಯ ನೇತೃತ್ವದಲ್ಲಿ ಸಮುದಾಯದ ಅನೇಕ ಮುಖಂಡರು ಹೋರಾಟ ಆರಂಭಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದ್ದಾಗ ಸೂಕ್ತ ದಾಖಲೆಗಳೊಂದಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಬಿಜೆಪಿ ಸಂಸದರು ಈ ಕಾರ್ಯಕ್ಕೆ ಕೇಂದ್ರದಲ್ಲಿ ಶ್ರಮಿಸಿ ದರು. ಪರಿಣಾಮ ಎರಡೂ ಜಾತಿಗಳು ಎಸ್‍ಟಿಗೆ ಸೇರ್ಪಡೆಗೊಳ್ಳಲು ಸಾಧ್ಯವಾಯಿತು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಮಾತನಾಡಿ, ಪರಿವಾರ, ತಳವಾರ ಪಂಗಡವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್, ಕೇಂದ್ರ ಸಚಿವರಾದ ಸದಾ ನಂದಗೌಡ, ಪ್ರಹ್ಲಾದ್ ಜೋಶಿ, ಸಂಸದ ಪ್ರತಾಪಸಿಂಹ, ಮಾಜಿ ಸಂಸದ ಆರ್. ಧ್ರುವನಾರಾಯಣ, ಸಚಿವ ಶ್ರೀರಾಮುಲು, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಸ್.ಎ.ರಾಮದಾಸ್, ಮಾಜಿ ಶಾಸಕರಾದ ದಿ.ಚಿಕ್ಕಮಾದು, ಚಿಕ್ಕಣ್ಣ, ಸಿದ್ದರಾಜು, ಮುಖಂಡ ರಾದ ಅಪ್ಪಣ್ಣ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಮುಖಂಡರ ಶ್ರಮವಿದೆ. ಈ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸು ವುದು ನಮ್ಮ ಧರ್ಮ ಎಂದರು. ಸಮುದಾಯದ ಮುಖಂಡ ಶ್ರೀನಿವಾಸ್ ಗೋಷ್ಠಿಯಲ್ಲಿದ್ದರು

Translate »