ಮೈಸೂರು ಸೇರಿ ರಾಜ್ಯದ 844 ಸ್ಮಾರಕಗಳ 3ಡಿ ಮ್ಯಾಪಿಂಗ್, ಲೇಸರ್ ಸ್ಕ್ಯಾನಿಂಗ್ ಆರಂಭ
ಮೈಸೂರು

ಮೈಸೂರು ಸೇರಿ ರಾಜ್ಯದ 844 ಸ್ಮಾರಕಗಳ 3ಡಿ ಮ್ಯಾಪಿಂಗ್, ಲೇಸರ್ ಸ್ಕ್ಯಾನಿಂಗ್ ಆರಂಭ

December 11, 2019

65 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಸರ್ಕಾರ ಒಡಂಬಡಿಕೆ

ಮೈಸೂರು,ಡಿ.10-ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಬೃಹತ್ ನಂದಿ ವಿಗ್ರಹ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 844 ಪುರಾತನ ಸ್ಮಾರಕಗಳ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಮಾಡುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾ ಖೆಯು ಈ ಯೋಜನೆ ಅನುಷ್ಠಾನಗೊಳಿಸಲು 64.92 ಲಕ್ಷ ರೂ. ವೆಚ್ಚ ಭರಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಮಾಡಲಿದೆ. ಈ ಸಂಬಂಧ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.

ಕರ್ನಾಟಕದಲ್ಲಿ ನಡೆಯಲಿರುವ ಈ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಯೋಜನೆಯು ಇಡೀ ದೇಶದಲ್ಲೇ ಪ್ರಥಮ ಕಾರ್ಯಕ್ರಮವಾಗಿದೆ. ಮೊದಲನೇ ಹಂತದಲ್ಲಿ 105 ರಾಜ್ಯ ಸಂರಕ್ಷಿತ ಸ್ಮಾರಕಗಳನ್ನು ಕೈಗೆತ್ತಿ ಕೊಳ್ಳಲು 4,25,000 ರೂ.ಗಳನ್ನು ವಿಜ್ಞಾನ-ತಂತ್ರಜ್ಞಾನ ಮಂಡಳಿಗೆ ಬಿಡುಗಡೆ ಮಾಡಲಾಗಿದೆ.

ಮೈಸೂರು ವಿಭಾಗದಲ್ಲಿ 125, ಬೆಂಗಳೂರಲ್ಲಿ 105, ಬೆಳಗಾವಿಯ 365 ಹಾಗೂ ಕಲಬುರಗಿ ವಿಭಾಗದಲ್ಲಿ 249 ಸ್ಮಾರಕಗಳ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ನಡೆಯಲಿದೆ. ಮೈಸೂರಿನ ಶ್ರೀ ಚಾಮುಂಡೇ ಶ್ವರಿ ದೇವಸ್ಥಾನ, ಮಹಾಬಲೇಶ್ವರ ದೇವಾಲಯ, ಬೃಹತ್ ನಂದಿ, ವೆಲ್ಲಿಂಗ್‍ಟನ್ ಲಾಡ್ಜ್, ಅರಮನೆ ಆವರಣದ ಕೋಟೆ ಸೋಮೇಶ್ವರ, ಕೋಡಿ ಭೈರವೇಶ್ವರ, ಲಕ್ಷ್ಮೀ ರಮಣ ದೇವಾಲಯ, ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ, ತ್ರಿನೇಶ್ವರ ವರಹಾಸ್ವಾಮಿ ದೇವಾಲಯ, ಮರಸೆಯ ನಾರಾಯಣ ಮತ್ತು ಮರಳೇಶ್ವರ ದೇವಾಲಯಗಳು, ಮಿರ್ಲೆಯ ಅಮೃತೇಶ್ವರ, ಯೋಗಾನರಸಿಂಹಸ್ವಾಮಿ, ಸಾಲಿಗ್ರಾಮದ ರಾಮಾನುಜಾಚಾರ್ಯ ದೇವಾ ಲಯಗಳಲ್ಲಿ 3ಡಿ ಮ್ಯಾಪಿಂಗ್ ಮಾಡಲಾಗುವುದು.

ನಂಜನಗೂಡಿನ ಲಕ್ಷ್ಮೀಕಾಂತ, ನಾಗೇಶ್ವರ, ಕಳಲೆಯ ಲಕ್ಷ್ಮೀಕಾಂತ ದೇವಾಲಯ, ಸುತ್ತೂರಿನ ನಾರಾಯಣ, ಸೋಮೇಶ್ವರ, ತಗಡೂರಿನ ಮೂಲಸ್ಥಾನೇಶ್ವರ ದೇವಾ ಲಯಗಳು, ಪಿರಿಯಾಪಟ್ಟಣದ ಚೆನ್ನಕೇಶವ ದೇವಾ ಲಯ, ಬನ್ನೂರಿನ ಹನುಮಂತೇಶ್ವರ, ಸೋಮನಾಥ ಪುರದ ಪಂಚಲಿಂಗೇಶ್ವರ, ತಿ.ನರಸೀಪುರದ ಅಗಸ್ತ್ಯೇಶ್ವರ, ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನ, ತಲಕಾಡಿನ ಮರಳು ದಿಣ್ಣೆಗಳೂ ಈ ಯೋಜನೆ ವ್ಯಾಪ್ತಿಗೆ ಬರಲಿವೆ.

ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ ದೇವಾ ಲಯ, ಕನಕಗಿರಿಯ ಬೆಟ್ಟದ ಸ್ಮಾರಕಗಳು, ಹಂಗಳದ ವರದರಾಜ, ಗುಂಡ್ಲುಪೇಟೆಯ ರಾಮೇಶ್ವರ ದೇವಾ ಲಯ, ಯಳಂದೂರಿನ ದಿವಾನ ಪೂರ್ಣಯ್ಯನವರ ನಿವಾಸ, ಛತ್ರ, ಕೊಳ್ಳೇಗಾಲದ ಲೂಷಿಂಗ್‍ಟನ್ ಬ್ರಿಡ್ಜ್‍ಗಳನ್ನೂ ಲೇಸರ್ ಸ್ಕ್ಯಾನಿಂಗ್ ಮಾಡಲು ಗುರುತಿಸಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ ರಾಜರ ಸಮಾಧಿಗಳು, ಯರಕಪಾಡಿ ಗ್ರಾಮದ ನಾಲಕ್ನಾಡು ಅರಮನೆ, ವಿರಾಜ ಪೇಟೆಯ ಅರಪಟ್ಟು ಗ್ರಾಮದ ಈಶ್ವರ ದೇವಾಲಯ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೋಟೆ, ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮಸ್ಥಳ, ಕೃಷ್ಣಮೂರ್ತಿ ಬಂಗಲೆ, ಮೇಲುಕೋಟೆಯ ನರಸಿಂಹಸ್ವಾಮಿ, ನಾರಾಯಣ ಸ್ವಾಮಿ, ಕಲ್ಯಾಣಿ, ಭುವನೇಶ್ವರಿ ಮಂಟಪ, ತೊಣ್ಣೂರಿನ ರಾಮಾನು ಜಾಚಾರ್ಯರು ಜೈನ ಗುರುಗಳೊಂದಿಗೆ ಜಿಜ್ಞಾಸೆ ನಡೆಸಿದ ಸ್ಥಳ, ವೇಣುಗೋಪಾಲಸ್ವಾಮಿ ದೇವಾ ಲಯ, ಹರವು ಕೋದಂಡರಾಮಸ್ವಾಮಿ ದೇವಾಲಯ ಸೇರಿದಂತೆ ಇತರ ಸ್ಮಾರಕಗಳೂ ಈ ವಿಶೇಷ ಯೋಜ ನೆಯ ವ್ಯಾಪ್ತಿಗೆ ಬರಲಿವೆ.

ಹಾಸನ ಜಿಲ್ಲೆಯ ಪುರಾತನ ದೇವಾಲಯ, ಶಾಸನಗಳು, ಶಾಂತಿನಾಥ ಬಸದಿ, ವಿಷ್ಣು ವಿಗ್ರಹ ಸೇರಿದಂತೆ ರಾಜ್ಯದ 497 ದೇವಾಲಯ, 47 ಮಸೀದಿ, ದರ್ಗಾ, 97 ಪುರಾತತ್ವ ನೆಲೆಗಳು, 48 ಕೋಟೆಗಳು, 7 ಅರಮನೆಗಳು, 140 ಕಲ್ಯಾಣಿಗಳು, ಶಾಸನಗಳು ಹಾಗೂ 8 ಪಾರಂಪರಿಕ ಕಟ್ಟಡಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.

ಪಾರಂಪರಿಕ ಕಟ್ಟಡಗಳು, ಸ್ಮಾರಕಗಳ ಪ್ರಾಥಮಿಕ ಡೇಟಾ (ದತ್ತಾಂಶ) ಸಂಗ್ರಹ, ಜಿಪಿಎಸ್ ಬಳಸಿ ಭೌಗೋಳಿಕ ಸ್ಥಳ ಗುರುತಿಸುವುದು, 3ಡಿ ಲೇಸರ್ ಸ್ಕ್ಯಾನಿಂಗ್ ಮಾಡಿ 3ಡಿ ಮಾಡ ಲಿಂಗ್ ತಯಾರಿಸುವುದು, ಜಿಯೋ ಸ್ಪೇಷಿಯಲ್ ಟೆಕ್ನಾಲ ಜೀಸ್ ಮೂಲಕ ಫೋಟೋಗ್ರಾಫ್ ಡೇಟಾ ಬೇಸ್ ಸೃಷ್ಟಿಸು ವುದು ಯೋಜನೆಯ ಉದ್ದೇಶವಾಗಿದೆ. 3ಡಿ ಪಾಯಿಂಟ್ ಕ್ಲೌಡ್ಸ್ ಡೇಟಾ, 3ಡಿ ಮೆಶ್ ಮಾಡೆಲ್ಸ್ ಮತ್ತು 2ಡಿ ಅಂಆ ಇಂಜಿನಿಯರಿಂಗ್ ಡ್ರಾಯಿಂಗ್, ಪ್ಲಾನ್, ಎಲಿವೇಷನ್ ಮೂಲಕ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ, ನವೀಕರಣ ಮಾಡುವ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಲು ಈ ಯೋಜನೆಯು ಸಹಕಾರಿಯಾಗಲಿದೆ.

ಎಸ್.ಟಿ.ರವಿಕುಮಾರ್

Translate »