ಸರ್ಕಾರಿ ನೌಕರರ 4ನೇ ಶನಿವಾರ ರಜೆ ರದ್ದು
ಮೈಸೂರು

ಸರ್ಕಾರಿ ನೌಕರರ 4ನೇ ಶನಿವಾರ ರಜೆ ರದ್ದು

December 13, 2019
  • ಸಂಪುಟ ಸಭೆ ನಿರ್ಧಾರ
  • ಜ.20ರಿಂದ 10 ದಿನ ಅಧಿವೇಶನ

ಬೆಂಗಳೂರು, ಡಿ.12-ಸರ್ಕಾರಿ ನೌಕರರ 4ನೇ ಶನಿವಾರದ ರಜೆಯನ್ನು ರದ್ದುಪಡಿ ಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಂಪುಟ ಸಭೆ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿ ಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು, ರಾಜ್ಯದ ಎಲ್ಲಾ ಕೋರ್ಟ್‍ಗಳಲ್ಲಿನ ಪ್ರಕರಣಗಳ ಸಮನ್ವಯ ಸಾಧಿಸಲು ಭಾಗಿಯಾಗುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ 4ನೇ ಶನಿವಾರದ ರಜೆ ರದ್ದುಪಡಿಸಲಾಗಿದ್ದು, ಅದಕ್ಕಾಗಿ 2019ರ ಜುಲೈ 13ರ ಸರ್ಕಾರಿ ಆದೇಶದಲ್ಲಿ ಮಾರ್ಪಾಡು ಮಾಡಲಾಗುತ್ತದೆ (ಈ ಆದೇಶದಲ್ಲಿ ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ಎಂದು ಘೋಷಿಸಲಾಗಿತ್ತು).

ಜ.20ರಿಂದ ಅಧಿವೇಶನ: ಜನವರಿ 20ರಿಂದ 30ರವರೆಗೆ ವಿಧಾನ ಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಈ ಅಧಿವೇಶನದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು 2020ನೇ ಸಾಲಿನ ಕ್ಷೇತ್ರಾವಾರು ಅನುದಾನ ಹಂಚಿಕೆ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದರು. ಬಿಡಿಎ ವ್ಯಾಪ್ತಿಯ 75 ಸಾವಿರ ಅನಧಿಕೃತ ಕಟ್ಟಡಗಳಿಗೆ ದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲು ಚಿಂತನೆ ನಡೆದಿದೆ. ಬಿಡಿಎ 98-ಸಿಗೆ ತಿದ್ದುಪಡಿ ತರಲು ತೀರ್ಮಾನಿಸಿದ್ದು, ಅದಕ್ಕಾಗಿ ಡಿಸಿಎಂ ಡಾ. ಅಶ್ವತ್ಥ್‍ನಾರಾಯಣ್, ಸಚಿವರಾದ ವಿ.ಸೋಮಣ್ಣ, ಅರ್.ಅಶೋಕ್, ಎಸ್.ಸುರೇಶ್‍ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದರು. ಆರ್ಯ ವೈಶ್ಯ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ತೀರ್ಮಾನಿಸಲಾಗಿದ್ದು, ಸದ್ಯಕ್ಕೆ ಸಾಲ ತೆಗೆದುಕೊಳ್ಳಲು ಮಾತ್ರ ಅವಕಾಶ ಮಾಡಿಕೊಡಲಾಗುವುದು. ಶಿಕ್ಷಣ ಹಾಗೂ ಉದ್ಯೋಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಟ್ಟಡ ಇನ್ನಿತರ ಕಾಮಗಾರಿ ಗಳಿಗೆ 525 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಎಸ್‍ಸಿ ಐಟಿಐ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲಾಗುವುದು. ಅದಕ್ಕಾಗಿ ಸುಮಾರು 16.98 ಕೋಟಿ ರೂ. ಮೀಸಲಿ ಡಲಾಗಿದೆ. ಬಾಗಲಕೋಟೆಯಲ್ಲಿ ಪಟ್ಟದ ಕಲ್ಲು ಪ್ರವಾಸಿ ತಾಣ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದ್ದು, 129.25 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಲ್ಲಿ 24 ಎಕರೆ ಜಮೀನು ಖರೀದಿಸಿ ಟೂರಿಸಂ ಪ್ಲಾಜಾ ನಿರ್ಮಾಣ ಮಾಡಲಿದ್ದೇವೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.

Translate »