ಮೈಸೂರು, ಡಿ.12(ಆರ್‍ಕೆ)- ಭಾರೀ ಮಳೆಯಿಂದಾಗಿ ಕುಸಿದಿದ್ದ ಮೈಸೂರಿನ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ವಿಗ್ರಹ ನಡುವಿನ ರಸ್ತೆಗೆ ತಡೆ ಗೋಡೆ ನಿರ್ಮಾಣ ಕಾಮಗಾರಿ ತ್ವರಿತಗತಿ ಯಲ್ಲಿ ನಡೆಯುತ್ತಿದೆ. ಅಕ್ಟೋಬರ್ ಮಾಹೆ ಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟ ದಿಂದ ಅಧಿಕ ಪ್ರಮಾಣದ ನೀರು ಹರಿದು ಬಂದ ಪರಿಣಾಮ ನಂದಿ ಪ್ರತಿಮೆ ಸಮೀಪ ಸುಮಾರು 40 ಅಡಿ ಅಗಲದ ರಸ್ತೆ ಕುಸಿ ದಿದ್ದರಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಕ್ಷಣ ಕಂದಕಕ್ಕೆ ನೂತನ ತಂತ್ರ ಜ್ಞಾನ ಬಳಸಿ ರಾಫ್ಟ್ ಕಾಂಕ್ರಿಟ್ ಮಾದರಿಯ ತಡೆಗೋಡೆ(ರೀಟೇನಿಂಗ್ ಮಾಲ್) ನಿರ್ಮಿಸಿ ಮಣ್ಣು ತುಂಬಿದ ನಂತರ ಆಸ್ಫಾ ಲ್ಟಿಂಗ್ ಮಾಡಿ ಎಂದು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು.
ಅದರಂತೆ ಎಸ್ಟಿಮೇಟ್ ತಯಾರಿಸಿದ್ದ ಲೋಕೋಪಯೋಗಿ ಇಲಾಖೆ ಇಂಜಿ ನಿಯರ್‍ಗಳು 50 ಲಕ್ಷ ರೂ. ವೆಚ್ಚದಲ್ಲಿ ಕಾಮ ಗಾರಿಗೆ ಗುತ್ತಿಗೆದಾರ ದಶರಥ ಅವರಿಗೆ ಜವಾಬ್ದಾರಿ ವಹಿಸಿ ಕಾರ್ಯಾದೇಶ ನೀಡಿ ದ್ದರು. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಕುಸಿದಿದ್ದ ಭಾಗದ ಸಂಪೂರ್ಣ ಮಣ್ಣನ್ನು ಹೊರತೆಗೆದು 25 ಅಡಿ ಆಳದಲ್ಲಿ ಅಡಿಪಾಯ ಹಾಕಿ ಸುಮಾರು 70 ಅಡಿ ಅಗಲಕ್ಕೆ ಬೇಸ್ ಕಾಂಕ್ರಿಟ್ ಹಾಕಿ ಕಬ್ಬಿಣದ ಸಲಾಕೆಗಳನ್ನು ಬಳಸಿ ರಾಫ್ಟ್ ರೀಟೇನಿಂಗ್ ವಾಲ್ ನಿರ್ಮಿಸುತ್ತಿದ್ದಾರೆ. ಸಿಮೆಂಟ್ ಕಾಂಕ್ರಿಟ್ ಬಾಕ್ಸ್ ನಿರ್ಮಿಸಿ ಎಷ್ಟೇ ಒತ್ತಡ ಬಂದರೂ ಜಗ್ಗದ ಹಾಗೆ ಶಾಶ್ವತ ತಡೆ ಗೋಡೆ ನಿರ್ಮಿಸಿ,
ಹಳ್ಳಕ್ಕೆ ಮಣ್ಣು ತುಂಬಿ ಸಮತಟ್ಟು ಮಾಡಿ, ನಂತರ ಜೆಲ್ಲಿ ಹಾಕಿ ಬಳಿಕ ಆಸ್ಪಾಲ್ಟಿಂಗ್ ಮಾಡಲಾಗುವುದು ಎಂದು ದಶರಥ ತಿಳಿಸಿದ್ದಾರೆ. ಕುಸಿದಿದ್ದ ನಂದಿ ಸಮೀಪದ ರಸ್ತೆ ರಿಪೇರಿ ಕಾಮಗಾರಿ ತ್ವರಿತವಾಗಿ ನಡೆಯುತ್ತಿರುವುದರಿಂದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಕಾಮಗಾರಿಗಾಗಿ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್‍ನಿಂದ ನಂದಿ ವಿಗ್ರಹದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದ್ದು, ಅದರಿಂದ ನಂದಿ ಬಳಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಅಲ್ಲಿನ ಅಂಗಡಿಯವರಿಗೆ ವ್ಯಾಪಾರವೇ ಇಲ್ಲದಂತಾಗಿದೆ.
ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ಅವರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಇಷ್ಟರಲ್ಲೇ ವಾಹನಗಳ ಸಂಚಾರಕ್ಕೆ ಆ ರಸ್ತೆಯನ್ನು ಮುಕ್ತಗೊಳಿಸಲಾಗುವುದು ಎಂದರು.
ಚಾ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಕಾಯಕಲ್ಪ
ಅಧಿ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿ ಧಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಅಗಲೀಕರಿಸಿ, ಡಾಂಬರೀಕರಣ ಮಾಡುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.
ಲಲಿತ ಮಹಲ್ ರಸ್ತೆಯ ಕುರುಬಾರ ಹಳ್ಳಿ ಸರ್ಕಲ್‍ನಿಂದ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಆಸ್ಫಾಲ್ಟಿಂಗ್ ಮತ್ತು ಡಾಂಬರೀಕರಣ ಗೊಳಿಸುವ 4 ಕೋಟಿ ರೂ. ವೆಚ್ಚದ ಕಾಮ ಗಾರಿ ಹಾಗೂ ಬೆಟ್ಟದ ಮಧ್ಯಭಾಗದ ಉತ್ತನ ಹಳ್ಳಿ ಕಡೆಯ ಜ್ವಾಲಾಮುಖಿ ಜಂಕ್ಷನ್ ನಿಂದ ಚಾಮುಂಡಿಬೆಟ್ಟದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ 2.2 ಕೋಟಿ ರೂ. ವೆಚ್ಚದ ಡಾಂಬರೀಕರಣ ಕಾಮಗಾರಿ ಯನ್ನು ಯೋಗಾನಂದ ಎಂಬ ಗುತ್ತಿಗೆ ದಾರ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಉತ್ತನಹಳ್ಳಿ ರಸ್ತೆ ಜಂಕ್ಷನ್‍ನಿಂದ ಜ್ವಾಲಾ ಮುಖಿ ಜಂಕ್ಷನ್‍ವರೆಗೆ 1550 ಮೀಟರ್ ಉದ್ದದ ಪ್ರಸ್ತುತ ಇರುವ 3.45 ಮೀಟರ್ ಅಗಲದ ರಸ್ತೆಯನ್ನು 5.5 ಮೀಟರ್ ಅಗ ಲಕ್ಕೆ ವಿಸ್ತರಿಸಿ ಎರಡೂ ಬದಿ ಮಳೆ ನೀರು ಹರಿದು ಹೋಗಲು ಕಾಂಕ್ರಿಟ್ ಹಾಕಿ ಡಾಂಬರೀಕರಣ ಮಾಡುವ 1.2 ಕೋಟಿ ರೂ. ಕಾಮಗಾರಿ ಮತ್ತು ತಾವರೆಕಟ್ಟೆಯಿಂದ ನಂದಿ ವಿಗ್ರಹ ಸರ್ಕಲ್‍ವರೆಗೆ 2,330 ಮೀಟರ್ ರಸ್ತೆಯನ್ನು ಮೆಟ್ಲಿಂಗ್ ಮಾಡಿ ಆಸ್ಪಾಲ್ಟಿಂಗ್ ಮಾಡುವ 2 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ದಶರಥ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ರಸ್ತೆಗಳ ರಿಪೇರಿ, ಅಗಲೀಕರಣ ಮತ್ತು ಡಾಂಬರೀಕರಣ ಕೆಲಸಗಳು ಪ್ರಗತಿಯಲ್ಲಿದ್ದು, 2020ರ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಯ್ ತಿಳಿಸಿದ್ದಾರೆ.
ಮಳೆಯಿಂದಾಗಿ ನಂದಿ ರಸ್ತೆಯ ಒಂದು ಭಾಗ ಕುಸಿದಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅದನ್ನು ರಿಪೇರಿ ಮಾಡುವ ಜತೆಗೆ ಚಾಮುಂಡಿಬೆಟ್ಟದ ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಸೂಚನೆ ನೀಡಿದ್ದರಿಂದ ಈ ರಸ್ತೆಗಳಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದ್ದು, ಇನ್ನು ಮುಂದೆ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಯಲ್ಲಿ ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಸ್ತೆ ಡಾಂಬರೀಕರಣ ಕಾಮಗಾರಿ ಮಾಡುವಾಗ ಸುರಕ್ಷತೆಗಾಗಿ ಇರುವ ತಡೆಗೋಡೆ ಹಾಳಾಗಿರುವ ಕಡೆ ರಿಪೇರಿ ಮಾಡುವಂತೆಯೂ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.