ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಡಿ ಒಬ್ಬ ವ್ಯಕ್ತಿಗೇ ಮುಡಾದಿಂದ 3 ನಿವೇಶನ ಮಂಜೂರು!
ಮೈಸೂರು

ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಡಿ ಒಬ್ಬ ವ್ಯಕ್ತಿಗೇ ಮುಡಾದಿಂದ 3 ನಿವೇಶನ ಮಂಜೂರು!

December 13, 2019

ಜೇಷ್ಠತೆ ಇಲ್ಲದೆ 20 ವರ್ಷಗಳಿಂದ ಅರ್ಜಿ ಸಲ್ಲಿಸಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಕಾಯುತ್ತಿರುವಾಗ ಒಬ್ಬನೇ ವ್ಯಕ್ತಿಗೆ ಬರೋಬ್ಬರಿ 3 ನಿವೇಶನ ಮಂಜೂರು ಮಾಡಿರುವ ಮುಡಾ ನಡೆಗೆ ನಾಗರಿಕರ ತೀವ್ರ ಆಕ್ರೋಶ
= ಎಸ್.ಟಿ.ರವಿಕುಮಾರ್
ಮೈಸೂರು, ಡಿ.12- ಮೈಸೂರು ನಗರದಲ್ಲಿ ಮುಡಾದಿಂದ ಒಂದು ನಿವೇ ಶನಕ್ಕೂ ದುಸ್ಸಾಹಸ ಮಾಡಬೇಕಲ್ಲದೆ, ಕನಿಷ್ಠ 20ರಿಂದ 25 ವರ್ಷ ಕಾಯಬೇಕು. ಆದರೆ ಇಲ್ಲೊಬ್ಬ ಮಹಾಶಯರಿಗೆ ಒಂದಲ್ಲ, ಎರಡಲ್ಲಾ ಬರೋಬ್ಬರಿ 3 ನಿವೇಶನ ಗಳನ್ನು ಮುಡಾ ಮಂಜೂರು ಮಾಡಿದೆ.

ಅಚ್ಚರಿ ಎನಿಸಿದರೂ ಇದು ನಿಜ. ಮೈಸೂರಿನ ಉದಯಗಿರಿ ಮಹದೇವ ಪುರ ರಸ್ತೆ ‘ಕಮಲಾ ನಿವಾಸ’ ವಿಳಾಸದಲ್ಲಿ ವಾಸವಾಗಿರುವುದಾಗಿ ಅರ್ಜಿ ನಮೂನೆ ಯಲ್ಲಿ ನಮೂದಿಸಿರುವ ಎಂ.ಎನ್.ರಾಮ ಕೃಷ್ಣ ಮೂರು ಬಾರಿ ಅರ್ಜಿ ಸಲ್ಲಿಸಿ, ಮೈಸೂರಿನ ವಿವಿಧ ಬಡಾವಣೆಗಳಲ್ಲಿ ವಿವಿಧ ಅಳತೆಯ 3 ನಿವೇಶನಗಳನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ಬಾರಿ ಅರ್ಜಿ: 1960ರ ಮೇ 13 ಜನ್ಮ ದಿನಾಂಕ ನಮೂದಿಸಿರುವ ಲೇಟ್ ಹೆಚ್.ಎಸ್.ನಂಜುಂಡಯ್ಯರ ಮಗನಾದ ಎಂ.ಎನ್.ರಾಮಕೃಷ್ಣ ತನ್ನ 29ನೇ ವಯಸ್ಸಿನಲ್ಲೇ 1989ರ ಮಾರ್ಚ್ 9 ರಂದು 30×40 ಅಡಿ ಅಳತೆಯ ನಿವೇ ಶನಕ್ಕೆ 250 ರೂ. ನೋಂದಣಿ ಶುಲ್ಕ ಪಾವತಿಸಿ ನಿಗದಿತ ನಮೂನೆ ಭರ್ತಿ ಮಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಅರ್ಜಿ(ಸಂಖ್ಯೆ 12156) ಸಲ್ಲಿಸಿದ್ದರು.

ಆ ವೇಳೆ ತಾನು ‘ಜೂನಿಯರ್ ಟೆಲಿಕಾಂ ಆಫೀಸರ್’ ಎಂದು ಅರ್ಜಿಯ 14ನೇ ಕಾಲಂನಲ್ಲಿ ನಮೂದಿಸಿ ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಲ್ಲಿ ನಿವೇಶನಕ್ಕೆ ಬೇಡಿಕೆ ಸಲ್ಲಿಸಿದ್ದರು. ನಂತರ 1991ರ ಮಾರ್ಚ್ 2ರಂದು ತಮ್ಮ 30ನೇ ವಯಸ್ಸಿನಲ್ಲಿ ಮತ್ತೆ ಅರ್ಜಿ ಸಂಖ್ಯೆ 58377 ರೀತ್ಯಾ 750 ರೂ. ಶುಲ್ಕ ಪಾವತಿಸಿ 85051 ನೋಂದಣಿ ಮೂಲಕ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ರಾಮಕೃಷ್ಣ, ಆ ಸಂದರ್ಭದಲ್ಲೂ ಟೆಲಿ ಕಮ್ಯುನಿಕೇಷನ್ ಇಲಾಖೆಯ ‘ಜೂನಿ ಯರ್ ಟೆಲಿಕಾಂ ಆಫೀಸರ್’ ಹುದ್ದೆಯಲ್ಲಿ ದ್ದೇನೆ ಎಂದು ನಮೂದಿಸಿದ್ದಾರೆ.

ಹಾಗೆಯೇ ತನ್ನ 32ನೇ ವಯಸ್ಸಿನಲ್ಲಿ 100 ರೂ. ಶುಲ್ಕದೊಂದಿಗೆ ಅರ್ಜಿ ಸಂಖ್ಯೆ 145837 ರೀತ್ಯಾ 1992ರ ಮಾರ್ಚ್ 5ರಂದು(ನೋಂದಣಿ ಸಂಖ್ಯೆ 125007) ಮತ್ತೆ ನಿವೇಶನ ಕೋರಿ ಮುಡಾಗೆ ಅವರು ಮೂರನೇ ಬಾರಿಯೂ ಅರ್ಜಿ ಸಲ್ಲಿಸುತ್ತಾರೆ. ಆಗಲೂ ತಾನು ‘ಟಿಲಿಕಾಂ ಡಿಸ್ಟ್ರಿಕ್ಟ್ ಮ್ಯಾನೇಜರ್’ ಎಂದು ನಮೂದಿಸುತ್ತಾರೆ.

3 ನಿವೇಶನ ಮಂಜೂರು: ಅರ್ಜಿ ಪರಿಶೀಲಿಸಿದ ಮುಡಾ, ಕೇಂದ್ರ ಸರ್ಕಾರಿ ನೌಕರರ ಕೋಟಾದಡಿ ಜೇಷ್ಠತೆಯನ್ನೂ ನೋಡದೆ ರಾಮಕೃಷ್ಣಗೆ 1991ರ ಫೆಬ್ರವರಿ 6ರಂದು ದೇವನೂರು 2ನೇ ಹಂತದಲ್ಲಿ 20×30 ಅಳತೆಯ 168ನೇ ಸಂಖ್ಯೆ ನಿವೇಶನ ಹಾಗೂ ಅದೇ ದಿನಾಂಕದಂದು ವಿಜಯನಗರ 4ನೇ ಹಂತ, 1ನೇ ಘಟ್ಟ ದಲ್ಲಿ 30×40 ಅಳತೆಯ 712ನೇ ಸಂಖ್ಯೆಯ ನಿವೇಶನವನ್ನು ಕೇಂದ್ರ ಸರ್ಕಾರದ ನೌಕರರ ಪ್ರವರ್ಗದ ವಿಶೇಷ ಮೀಸಲಾತಿಯಡಿ ಪ್ರಾಧಿಕಾರವು ಮಂಜೂರು ಮಾಡಿದೆ.

ಕೇವಲ 32 ಸಾವಿರ ರೂ. ಪಾವತಿಸಿ ಕೊಂಡು ರಾಮಕೃಷ್ಣ ಅವರಿಗೆ ಮುಡಾ ಮೂರು ನಿವೇಶನಗಳನ್ನು ಹಂಚಿಕೆ ಮಾಡಿ, ತದನಂತರ ಕ್ರಮವಾಗಿ ಗುತ್ತಿಗೆ ಕ್ರಯಪತ್ರ (Lease cum Sale Agreement), ಸ್ವಾಧೀನ ಪತ್ರ, ಖಾತಾ ಪತ್ರ ಹಾಗೂ ಬ್ಯಾಂಕ್ ಸಾಲ ಪಡೆಯಲು ನಿರಾಕ್ಷೇಪಣಾ ಪತ್ರ(NOC)ಗಳನ್ನೂ ನೀಡಿದೆ.

ಸೆಂಟ್ರಲ್ ಗವರ್ನಮೆಂಟ್ ಎಂಪ್ಲಾಯಿಸ್ ಖೋಟಾದಡಿ ಕ್ಲೇಮು ಮಾಡಿ ಕೇವಲ 3 ವರ್ಷದ ಅವಧಿಯಲ್ಲಿ ಮೂರು ನಿವೇ ಶನಗಳನ್ನು ದಕ್ಕಿಸಿಕೊಂಡ ರಾಮಕೃಷ್ಣ, ನಂತರ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಆರ್‍ಟಿಐ ಕಾರ್ಯ ಕರ್ತ ನಾಗೇಂದ್ರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆ ದಾಗ ಇದು ಬೆಳಕಿಗೆ ಬಂದಿದೆ.

ನಿಯಮ ಉಲ್ಲಂಘನೆ: ನಿವೇಶನ ಹೊಂದಿ ರದ ಒಬ್ಬ ವ್ಯಕ್ತಿಗೆ ಒಂದೇ ನಿವೇಶನ ನಿಯಮ ವನ್ನು ಗಾಳಿಗೆ ತೂರಿ ಒಬ್ಬ ವ್ಯಕ್ತಿಗೆ ಮೂರು ನಿವೇಶನ ಮಂಜೂರು ಮಾಡಿರುವ ಮುಡಾ, ಕಾನೂನು ಬಾಹಿರವಾಗಿ ಪಡೆದಿರುವ ನಿವೇಶನಗಳ ಮಂಜೂರಾತಿ ರದ್ದು ಪಡಿಸದಿರುವುದು ಹಲವು ಸಂಶಯ ಗಳಿಗೆ ಎಡೆಮಾಡಿಕೊಟ್ಟಿದೆ.

ಅಧಿಕಾರಿಗಳ ಶಾಮೀಲು: ಅರ್ಜಿದಾರನ ಮನೆಗೆ ಭೇಟಿ ನೀಡಿ ಸ್ವಂತ ನಿವೇಶನ ಹೊಂದಿರುವ ಬಗ್ಗೆ ಮಹಜರು ಹೇಳಿಕೆ ಪಡೆಯಬೇಕಾದ ಅಧಿಕಾರಿಗಳು, ಮಂಜೂರಾತಿಯಾಗಿದ್ದರೂ ಮಾಹಿತಿ ಬಚ್ಚಿಟ್ಟು ಮತ್ತೆ ಮತ್ತೆ ನಿವೇಶನ ಹಂಚಿಕೆ ಮಾಡುವಲ್ಲಿ ಮುಡಾ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಗಳಿವೆ.

Translate »