ದೆಹಲಿಯಿಂದ ಬಂದ ನಂತರ ಸಂಪುಟ ವಿಸ್ತರಣೆ: ಬಿಎಸ್‍ವೈ
ಮೈಸೂರು

ದೆಹಲಿಯಿಂದ ಬಂದ ನಂತರ ಸಂಪುಟ ವಿಸ್ತರಣೆ: ಬಿಎಸ್‍ವೈ

December 13, 2019

ತುಮಕೂರು,ಡಿ.12-ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಬಂದ ಮೇಲೆ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು, ಎಂಟು ದಿನಗಳ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದು ಗಡುವನ್ನೂ ನೀಡಿದ್ಧಾರೆ.

ಕುಪ್ಪೂರು ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಉಪ ಚುನಾ ವಣೆಯಲ್ಲಿ ಸೋತವರಿಗೆ ಅವಕಾಶ ನೀಡುವ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟ ಪಡಿಸಿದರು. ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಡಿಸೆಂಬರ್ 20ರ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು. ಸರಕಾರ ರಚನೆಯಾಗಲು ಸಹಾಯ ಮಾಡಿ ದವರಿಗೆ ಕೊಟ್ಟ ಮಾತಿನಂತೆ ಎಲ್ಲವೂ ನಡೆಯುತ್ತದೆ ಎಂದ ಅಶೋಕ್, ಸೋತವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಗೊತ್ತಿಲ್ಲ ಎಂದರು. ಗೆದ್ದವರಿಗೆ ಮೊದಲ ಆದ್ಯತೆ ಎಂದ ಅಶೋಕ್, ಸೋತವರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ಇದಕ್ಕೂ ಮುನ್ನ ಕುಪ್ಪೂರು ಗದ್ದಿಗೆ ಜಾತ್ರಾ ಮಹೋತ್ಸವದಲ್ಲಿ ನಡೆದ ಭಾವೈಕ್ಯ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಗೆಲುವು ಕಂಡ 12 ಜನ ಶಾಸಕರ ಆಯ್ಕೆಯಿಂದ ರಾಜ್ಯದಲ್ಲಿ ಮೂರೂವರೆ ವರ್ಷ ನಿರಾಂತಕವಾಗಿ ಅಭಿವೃದ್ಧಿಗೆ ದುಡಿಯಬಹುದು ಎಂದರು. ಈ ಮೂಲಕ ನಾಡಿನ ಜನರ ನಿರೀಕ್ಷೆಗೆ ಸ್ಪಂದಿಸುತ್ತೇವೆ ಎಂದರಲ್ಲದೆ, ನೀರಾವರಿ, ಕೈಗಾರಿಕೆ ಹಾಗೂ ಬೆಲೆ ಕುಸಿದಾಗ, ಸರಕಾರ ಬೆಂಬಲ ಬೆಲೆ ನೀಡುತ್ತದೆ, ಕುಪ್ಪೂರು ಗದ್ದಿಗೆ ಮಠದ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಚಿಕ್ಕನಾಯಕ ನಹಳ್ಳಿ ತಾಲೂಕಿನ 96 ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಬಿಡುವ ಯೋಜನೆಗೆ ಸರಕಾರ 260 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು. ಜಿಲ್ಲೆಯ ಹೇಮಾವತಿ ನಾಲಾ ವಿಸ್ತರಣೆಗೆ ಯಡಿಯೂರಪ್ಪ 550 ಕೋಟಿ ರೂ. ಯೋಜನೆ ಮಂಜೂರು ಮಾಡಿದ್ದು, ಇದರಿಂದ ಜಿಲ್ಲೆಯಲ್ಲಿ 1200 ಕ್ಯೂಸೆಕ್ ನೀರಿನ ಬದಲಾಗಿ 2400 ಕ್ಯೂಸೆಕ್ ನೀರು ಹರಿಯಲಿದೆ. ರೈತರ ಜೀವನ ಸುಧಾರಿಸಲಿದೆ ಹಾಗೂ ಎಲ್ಲರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದರು.

Translate »