ಮೈಸೂರು: ಸಂಪನ್ಮೂಲ ಕ್ರೋಢೀಕರಣ, ಹೊಸ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದರೊಂದಿಗೆ ಮೈಸೂರು ಮಹಾ ನಗರ ಪಾಲಿಕೆಯು 2019-20ನೇ ಸಾಲಿಗೆ 5.20 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರಿಗೆ ನಿರ್ಧಾರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಅವರು 2019-20ನೇ ಸಾಲಿನ ಆಯ-ವ್ಯಯವನ್ನು ಮಂಗಳವಾರ ಮಂಡಿಸಿದರು.
ಪ್ರಾರಂಭ ಶಿಲ್ಕು 14,369.37 ಲಕ್ಷ ರೂ. ಹಾಗೂ 63,656.47 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದು, 77,505.72 ಲಕ್ಷ ರೂ.ಗಳ ಪಾವತಿಯಾಗುವುದೆಂದು ನಿರ್ಧರಿಸಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಪಾಲಿಕೆಗೆ 520.12 ಲಕ್ಷ ರೂ. ಹಣ ಉಳಿತಾಯ ಗುರಿ ಹೊಂದಲಾಗಿದೆ ಎಂದು ಶೋಭಾ ಅವರು ಆಯ-ವ್ಯಯ ಪತ್ರದಲ್ಲಿ ಪ್ರಕಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಲ್ಲಾ ಮೂಲಗಳಿಂದ ಒಟ್ಟು 63,656.47 ಲಕ್ಷ ರೂ. ಸಂಪನ್ಮೂಲ ಕ್ರೋಢೀಕರಿಸಲು ಉದ್ದೇಶಿಸಲಾಗಿದೆ.
ಆಸ್ತಿ, ನೀರಿನ ತೆರಿಗೆ: 2019-20ನೇ ಸಾಲಿಗೆ ಆಸ್ತಿ ತೆರಿಗೆಯಿಂದ 15,725 ಲಕ್ಷ ರೂ. ಹಾಗೂ ನೀರು ಮತ್ತು ಒಳಚರಂಡಿ ನಿರ್ವಹಣಾ ತೆರಿಗೆ ಯಿಂದ 7,800 ಲಕ್ಷ ರೂ. ಆದಾಯ ಕ್ರೋಢೀಕರಿ ಸಲು ಉದ್ದೇಶಿಸಲಾಗಿದೆ.
ನಗರ ಯೋಜನೆ ವಿಭಾಗ: ಕಟ್ಟಡ ಪರವಾನಗಿ, ನೆಲ ಬಾಡಿಗೆ, ರಸ್ತೆ ಅಗೆತ, ಪರಿಶೀಲನಾ, ನೀರಿನ ಸಂಪರ್ಕ ಶುಲ್ಕ, ಜುಲ್ಮಾನೆ ಹಾಗೂ ಒಳಚರಂಡಿ ಶುಲ್ಕ ಸೇರಿ ನಗರ ಮತ್ತು ಪಟ್ಟಣ ವಿಭಾಗದಿಂದ ಒಟ್ಟು 1855.20 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಉದ್ದಿಮೆ ಪರವಾನಗಿ ಶುಲ್ಕ 5 ಕೋಟಿ ರೂ., ಪಾಲಿಕೆ ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆ ಹಾಗೂ ಗರುಡ ಮಾಲ್ ನೆಲಗುತ್ತಿಗೆ ಬಾಡಿಗೆಯಿಂದ 3.71 ಕೋಟಿ ರೂ. ಆದಾಯ ಸಂಗ್ರಹ ಮಾಡಲಾ ಗುವುದು ಎಂದು ಶೋಭಾ ತಿಳಿಸಿದರು.
ಸರ್ಕಾರದ ಅನುದಾನ: ರಾಜ್ಯ ಸರ್ಕಾರದಿಂದ 7186 ಲಕ್ಷ ರೂ., ರಾಜ್ಯ ಹಣಕಾಸು ಆಯೋಗದಿಂದ 7131 ಲಕ್ಷ ರೂ., 14ನೇ ಹಣಕಾಸು ಆಯೋಗದಿಂದ 6,829 ಲಕ್ಷ ರೂ., ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ 2 ಕೋಟಿ ರೂ. ನಗರದ ಅಭಿವೃದ್ಧಿ ಗಾಗಿ ಮಂಜೂರಾಗಬಹುದೆಂದು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿಗಳ ನಗರೋತ್ಥಾನಕ್ಕಾಗಿ 8.5 ಕೋಟಿ ರೂ. ವಿಶೇಷ ಅನುದಾನದಿಂದ ಮೈಸೂರು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ 150 ಕೋಟಿ ರೂ. ಅನುದಾನ ಘೋಷಿ ಸಿದ್ದಾರೆ ಎಂದು ಪ್ರಕಟಿಸಿದರು.
ವಿಕಲಚೇತನರ ಸಂರಕ್ಷಣೆ: ಶೇ.5ರ ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮದಡಿ ಪೋಷಣಾಲಯವನ್ನು ನಿರ್ಮಿಸಿ 6 ವರ್ಷದೊಳಗಿನ ಮಕ್ಕಳಿಗೆ ತಜ್ಞ ವೈದ್ಯರಿಂದ ಅಗತ್ಯ ಶುಶ್ರೂಷೆ ನೀಡಲು ಪಾಲಿಕೆ ಉದ್ದೇಶಿಸಿದೆ.
ಪಿಂಕ್ ಶೌಚಾಲಯಗಳು: ಆಯ್ದ ಜನಸಂದಣಿ ಸ್ಥಳಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ಪಿಂಕ್ ಶೌಚಾಲಯಗಳನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಅದಕ್ಕಾಗಿ 10 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಅದೇ ರೀತಿ ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಪುರಭವನದ ಬಳಿ ಆಧುನಿಕ ಶೌಚಾಲಯ ನಿರ್ಮಿಸಲು ದ್ದೇಶಿಸಿ 83.51 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಸ್ವಚ್ಛ ಮೈಸೂರು: ಬಸ್ ನಿಲ್ದಾಣ, ಆಟೋರಿಕ್ಷಾ ನಿಲುಗಡೆ ಸ್ಥಳಗಳಲ್ಲಿ ಸ್ವಚ್ಛತೆ ನಿರ್ವಹಿಸಲು ಡಸ್ಟ್‍ಬಿನ್ ಅಳವಡಿಸಲು 25 ಲಕ್ಷ ರೂ., ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 5 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ.
ಮಲಿನ ನೀರು ಶುದ್ಧೀಕರಣ ಘಟಕವನ್ನು ದೇವ ನೂರು ಕೆರೆಯಲ್ಲಿ ನಿರ್ಮಿಸುವುದು, ವಿದ್ಯಾರಣ್ಯ ಪುರಂನ ಸುಯೇಜ್ ಫಾರಂನಲ್ಲಿ ತ್ಯಾಜ್ಯ ಮುಕ್ತಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಿಸುವುದಕ್ಕೆ 5.25 ಕೋಟಿ ರೂ. ನಿಗದಿಪಡಿಸಲಾಗಿದೆ.
ಒಳಚರಂಡಿ ಉನ್ನತೀಕರಣ: ಮುಖ್ಯ ಕೊಳವೆ ಮಾರ್ಗಗಳಿಗೆ ಪ್ರಿ-ಕ್ಯಾಸ್ಟ್ ಆರ್‍ಸಿಸಿ ಮ್ಯಾನ್‍ಹೋಲ್ ಅಳವಡಿಸುವುದು, ಗುಂಡಿಗಳಲ್ಲಿನ ಹೂಳೆತ್ತಲು ನೂತನ ತಂತ್ರಜ್ಞಾನ ಬಳಕೆಗೆ 10 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ.
ಉಪಮೇಯರ್ ಶಫೀ ಅಹಮದ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಶಾಸಕ ಎಲ್.ನಾಗೇಂದ್ರ, ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾದ ಎಂ.ಶಿವಕುಮಾರ್, ಎಸ್. ಪ್ರೇಮ, ಸಿ.ವೇದಾವತಿ, ಶರತ್‍ಕುಮಾರ್, ರುಕ್ಮಿಣಿ ಮಾದೇ ಗೌಡ ಹಾಗೂ ಬಷೀರ್ ಅಹಮದ್ ಬಜೆಟ್ ಸಭೆ ಯಲ್ಲಿ ಉಪಸ್ಥಿತರಿದ್ದರು. ಪಾಲಿಕೆಯ ಎಲ್ಲಾ ಕಾರ್ಪೊ ರೇಟರ್‍ಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ಯಲ್ಲಿ ಹಾಜರಿದ್ದು, ಬಜೆಟ್ ಮೇಲೆ ಚರ್ಚೆ ನಡೆಸಿದರು.