ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ತೊಡಕಾಗಿದ್ದ 97 ಮಳಿಗೆ ನೆಲಸಮ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ತೊಡಕಾಗಿದ್ದ 97 ಮಳಿಗೆ ನೆಲಸಮ

September 13, 2019

ಮೈಸೂರು: ಚಾಮುಂಡಿಬೆಟ್ಟದ ದೇವಾಲಯ ರಸ್ತೆಯ ಎರಡೂ ಬದಿಯಲ್ಲಿದ್ದ 52 ಅನಧಿ ಕೃತ ಮಳಿಗೆ ಸೇರಿದಂತೆ 97 ಮಳಿಗೆಗಳನ್ನು ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆಯಲ್ಲಿ ಗುರುವಾರ ಬೆಳಿಗ್ಗೆ ತೆರವು ಗೊಳಿಸಿತು. ಬಸ್ ನಿಲ್ದಾಣ ಹಾಗೂ ಮಹಿಷಾಸುರ ಪ್ರತಿಮೆ ಯಿಂದ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಗೂಡಂಗಡಿ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಗ್ರಾ.ಪಂನಿಂದ ಲೈಸನ್ಸ್ ಪಡೆದ 45 ಹಾಗೂ ಅನಧಿಕೃತವಾಗಿ ತಲೆ ಎತ್ತಿದ್ದ 52 ಮಳಿಗೆ ಸೇರಿದಂತೆ 97 ಮಳಿಗೆಗಳನ್ನು ಇಂದು ಬೆಳಿಗ್ಗೆ ತಹಶೀಲ್ದಾರ್ ಟಿ.ರಮೇಶ್ ಬಾಬು, ತಾ.ಪಂ ಇಒ ಕೃಷ್ಣ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 3 ಜೆಸಿಬಿ ಬಳಸಿ ಮಳಿಗೆಗಳನ್ನು ತೆರವು ಮಾಡಲಾಯಿತು.

ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣವನ್ನು ಸೆ.20 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾ ಟಿಸಲಿರುವ ಹಿನ್ನೆಲೆಯಲ್ಲಿ ಮೊದಲ ಹಂತದ ಕಾರ್ಯಾ ಚರಣೆಯಲ್ಲಿ ದೇವಾಲಯದ ರಸ್ತೆ ಬದಿ ಇದ್ದ 97 ಮಳಿಗೆ ಗಳನ್ನು ತೆರವು ಮಾಡಲಾಗಿದ್ದು, ಲೈಸನ್ಸ್ ಪಡೆದಿರುವ 45 ವ್ಯಾಪಾರಿಗಳಿಗೆ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ಮಂಜೂರು ಮಾಡಿ ಹಕ್ಕುಪತ್ರವನ್ನು ವಿತರಿಸಲಾಗಿದೆ. ಉಳಿದ 52 ವ್ಯಾಪಾರಿಗಳಿಗೂ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ದಸರಾ ಮಹೋತ್ಸವ ಮುಗಿದ ನಂತರ ಎರಡನೇ ಹಂತದಲ್ಲಿ ಮಹಿಷಾಸುರ ಪ್ರತಿಮೆ ಬಳಿಯಿರುವ 100ಕ್ಕೂ ಹೆಚ್ಚು ಮಳಿಗೆ ತೆರವಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ವಿವಿಧೆಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಬದಿಯಿದ್ದ ಮಳಿಗೆ ತೆರವು ಮಾಡುವುದು ಅನಿವಾರ್ಯವಾಗಿತ್ತು. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು 116 ಮಳಿಗೆಯುಳ್ಳ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿತ್ತು. ಆದರೆ ವಿವಿಧ ಕಾರಣ ಮುಂದಿಟ್ಟುಕೊಂಡು ಸ್ಥಳಾಂತರಕ್ಕೆ ವ್ಯಾಪಾರಿಗಳು ವಿರೋಧಿಸುತ್ತಾ ಬಂದಿದ್ದರು. ಅಲ್ಲದೆ ಬೇನಾಮಿ ಹೆಸರಿನಲ್ಲಿ ಮಳಿಗೆ ಹೊಂದಿದ್ದ ಪ್ರಭಾವಿಗಳ ಲಾಬಿಯೂ ತೆರೆಮರೆಯಲ್ಲಿ ಕೆಲಸ ಮಾಡಿ, ವ್ಯಾಪಾರಿಗಳಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿತ್ತು. ಸಂಚು ಅರಿಯದ ವ್ಯಾಪಾರಿಗಳು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಇದರಿಂದ ಸಮಸ್ಯೆ ಬಗೆಹರಿದಿರಲಿಲ್ಲ. ರಾಜಕೀಯ ಒತ್ತಡವೂ ಇದ್ದುದರಿಂದ ಜಿಲ್ಲಾಡಳಿತ ಕೈಕಟ್ಟಿ ಸುಮ್ಮನಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯಾಚರಣೆ ನಡೆಸಿ ವಾಣಿಜ್ಯ ಸಂಕೀರ್ಣಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವಂತೆ ನೀಡಿದ ಸೂಚನೆ ಮೇರೆಗೆ ಇಂದು ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಲಾಯಿತು. ಇಂದು ಮುಂಜಾನೆ 5 ಗಂಟೆಗೆ ತೆರವು ಕಾರ್ಯಾ ಚರಣೆಗೆ ಸಿದ್ಧತೆ ಮಾಡಿಕೊಂಡು ಚಾಮುಂಡಿಬೆಟ್ಟಕ್ಕೆ ಬಂದ ತಹಶೀಲ್ದಾರ್ ನೇತೃತ್ವದ ಕಂದಾಯ ಇಲಾಖೆ ಮತ್ತು ಗ್ರಾ.ಪಂ ಸಿಬ್ಬಂದಿ ಬೆಳಿಗ್ಗೆ 6.15ರ ನಂತರ ಕಾರ್ಯಾಚರಣೆ ಆರಂಭಿಸಿದರು. ಮೂರು ಜೆಸಿಬಿಗಳನ್ನು ಬಳಸಿ ಮಳಿಗೆಗಳನ್ನು ನೆಲಸಮ ಮಾಡಲಾಯಿತು. ಒಂದರ ನಂತರ ಮತ್ತೊಂದರಂತೆ ಗೂಡಂಗಡಿಗಳನ್ನು ನೆಲಸಮ ಮಾಡುತ್ತಿದ್ದಂತೆ ನಿಯಮ ಬಾಹಿರವಾಗಿ ಮಳಿಗೆ ಹಿಂಭಾಗ ಗೋಡೆ ನಿರ್ಮಿಸಿ, ನೆಲಕ್ಕೆ ಕಾಂಕ್ರಿಟ್ ಹಾಕಿರುವುದು ಕಂಡು ಬಂದಿತು. ಅದರಲ್ಲೂ ಕೆಲವು ಮಳಿಗೆದಾರರು ಒಳಭಾಗದಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಿ ಕೊಂಡಿದ್ದು ಗೋಚರಿಸಿತು. ಮೂರ್ನಾಲ್ಕು ದಿನದ ಹಿಂದೆಯೇ ವ್ಯಾಪಾರಿಗಳಿಗೆ ಮಳಿಗೆ ತೆರವು ಮಾಡುವ ಬಗ್ಗೆ ಮಾಹಿತಿ ನೀಡಿದ್ದರಿಂದ ಎಲ್ಲರೂ ಅಂಗಡಿಗಳಲ್ಲಿದ್ದ ವಸ್ತುಗಳನ್ನು ಖಾಲಿ ಮಾಡಿದ್ದರು. ಮುಂಭಾಗದ ಶೆಲ್ಟರ್, ಬಾಗಿಲು, ಕಿಟಕಿ, ಮೇಲ್ಛಾವಣಿ, ಕಲ್ನಾರ್ ಶೀಟ್ ಹಾಗೂ ಇನ್ನಿತರ ಕಬ್ಬಿಣದ ವಸ್ತುಗಳನ್ನು ನೆಲಸಮ ಮಾಡಿ ಬದಿಗೆ ಸರಿಸಲಾಯಿತು. ಚಾಮುಂಡಿ ಬೆಟ್ಟದಲ್ಲಿ ಕಳೆದ ಐದಾರು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ಹಾಗೂ ಗ್ರಾ.ಪಂ ಅಧಿಕಾರಿಗಳು ಮಳಿಗೆಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಹಾಳೆ, ಕವರ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಆದರೂ ಬಹುತೇಕ ಎಲ್ಲಾ ಮಳಿಗೆಗಳಲ್ಲೂ ಪ್ಲಾಸ್ಟಿಕ್ ಕವರ್‍ಗಳ ರಾಶಿಯೇ ಕಂಡು ಬಂದಿತು. ಮಳಿಗೆಯನ್ನು ಧ್ವಂಸ ಮಾಡುತ್ತಿದ್ದಂತೆ ಮಳಿಗೆಯಲ್ಲಿದ್ದ ಪ್ಲಾಸ್ಟಿಕ್ ಹಾಳೆ, ಕವರ್‍ಗಳು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದವು. ಮಳಿಗೆಗಳ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳು ತಡೆಯೊಡ್ಡಬಹುದೆಂಬ ಮುಂದಾಲೋಚನೆಯಿಂದ ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಭದ್ರಕೋಟೆಯನ್ನೇ ನಿರ್ಮಿಸಲಾಗಿತ್ತು. ತೆರವು ಕಾರ್ಯಾ ಚರಣೆ ಸ್ಥಳದ ಬಳಿ ಯಾರೂ ನುಸುಳದಂತೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪ್ರತಿರೋಧ ವ್ಯಕ್ತಪಡಿಸಿದರೆ, ವಶಕ್ಕೆ ಪಡೆಯಲು ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಗೆ ಇಬ್ಬರು ಎಸಿಪಿ, 9 ಇನ್ಸ್‍ಪೆಕ್ಟರ್, 15 ಸಬ್ ಇನ್ಸ್‍ಪೆಕ್ಟರ್, 31 ಎಎಸ್‍ಐ, 185 ಪೊಲೀಸ್ ಸಿಬ್ಬಂದಿ, 4 ಕೆಎಸ್‍ಆರ್‍ಪಿ ತುಕಡಿ, 4 ಸಿಎಆರ್ ತುಕಡಿ ಸೇರಿದಂತೆ 360 ಪೊಲೀಸ್ ಸಿಬ್ಬಂದಿಯನ್ನು ಬಿಗಿಭದ್ರತೆಗೆ ನಿಯೋಜಿಸ ಲಾಗಿತ್ತು. ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್, ಪಿಡಿಒ ಪೂರ್ಣಿಮಾ ಉಪಸ್ಥಿ ತಿಯಲ್ಲಿ ಕಂದಾಯ ಹಾಗೂ ಗ್ರಾ.ಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »