ಕೆಎಸ್‍ಆರ್‍ಟಿಸಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ
ಮೈಸೂರು

ಕೆಎಸ್‍ಆರ್‍ಟಿಸಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ

December 30, 2019
  • ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರಾಗುವುದು ಹಕ್ಕು
  • ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ವೈ ವಿಜಯೇಂದ್ರ

ನಂಜನಗೂಡು, ಡಿ.29(ರವಿ)-ಕೋಟ್ಯಾಂತರ ಜನರಿಗೆ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಇದುವರೆಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸದಿರುವುದು ವಿರ್ಯಾಸ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂಬುದು ನಿಮ್ಮ ಬೇಡಿಕೆಯಾಗಬಾರದು ಅದು ನಿಮ್ಮ ಹಕ್ಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ತಾಲೂಕು ಶ್ರೀಕ್ಷೇತ್ರ ಸುತ್ತೂರಿನ ಶ್ರೀ ಸಿದ್ದನಂಜ ದೇಶೀಕೇಂದ್ರ ಮಂಗಳ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರಾಗದೇ ಅರೆ ಸರ್ಕಾರಿ ನೌಕರರಾಗಿ ಅಡಕತ್ತರಿಯಲ್ಲಿ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಮಾತ್ರ ಕೆಎಸ್‍ಆರ್‍ಟಿಸಿ ನೌಕರರ ಸಮಸ್ಯೆ ಬಗೆಹರಿಯಲು ಸಾಧ್ಯ. ಸವಲತ್ತು ಕೊಡಲು ಕಾನೂನು ಅಡಚಣೆಯಾಗಬಾರದು. ಆದ್ದರಿಂದ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಿ ಮುಖ್ಯಮಂತ್ರಿಗಳ ಗಮನ ಸೆಳೆದು ಸರ್ಕಾರಿ ನೌಕರರ ಸ್ಥಾನಮಾನ ಪರಿಗಣನೆ ಸೇರಿದಂತೆ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರ ಆಡಳಿತ ವೈಖರಿ ನೋಡಿ ವಿಪಕ್ಷದವರು ಗಾಬರಿಯಾಗಿ ಮುಂದಿನ 10 ವರ್ಷಗಳ ಕಾಲ ನಮಗೆ ಅಧಿಕಾರ ಸಿಗುವುದಿಲ್ಲವೆಂದು ಭಾವಿಸಿದ್ದರು. ಆದ್ದರಿಂದಲೇ ಷಡ್ಯಂತ್ರ ನಡೆಸಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ವಿಶ್ವಮಟ್ಟದಲ್ಲಿ ಭಾರತವನ್ನು ಕೊಂಡೊಯ್ದ ಪ್ರಧಾನಿ ಮೋದಿ ಅವರ ಆಡಳಿತ ವೈಖರಿ ಸಹಿಸದ ಕಾಂಗ್ರೆಸ್‍ನವರು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಪಪ್ರಚಾರ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಇದಕ್ಕೆ ಕಿವಿಗೊಡಬಾರದು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವ ತೊಂದರೆಯೂ ಆಗುವುದಿಲ್ಲ ಎಂದು ತಿಳಿಸಿದರು.

ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕೆಎಸ್‍ಆರ್‍ಟಿಸಿ ಚಾಲಕರು ಪ್ರಯಾಣಿಕರನ್ನು ಕ್ಷೇಮವಾಗಿ ತಲುಪಿಸುವಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಖಾಸಗೀ ಸಾರಿಗೆ ಕಂಪನಿಗಳಿಗಿಂತ ಕೆಎಸ್‍ಆರ್‍ಟಿಸಿ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರದ ಪೂರ್ಣವಧಿ ನೌಕರನ್ನಾಗಿ ಪರಿಗಣಿಸಬೇಕು ಎಂದು ಹೇಳಿದರು.

ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ದಿನದ 24 ಗಂಟೆಗಳೂ ಸಹ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಅವರ ಜವಾಬ್ದಾರಿ ಹೆಚ್ಚಿದೆ. ನೌಕರರು ಪ್ರಯಾಣಿಕರ ಜೊತೆ ಸೌಹಾರ್ದಯುತವಾಗಿ ವರ್ತಿಸಬೇಕು. ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದರು.

ಸಮಾರಂಭದಲ್ಲಿ ಬಾಳೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕರಾದ ಅಮರೇಗೌಡ ಬಯ್ಯಾಪುರ, ನಿರಂಜನ್‍ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಮಲ್ಲಿಕಾರ್ಜುನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಉಡುಪಿ ಮಠದ ಶ್ರೀ ಪೇಜಾವರ ಶ್ರೀಗಳಿಗೆ ಮೌನಾರ್ಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಸಮಾರಂಭದಲ್ಲಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥೆ ಡಿ.ಭಾರತಿ, ಜಿಪಂ ಸದಸ್ಯರಾದ ಸದಾನಂದ, ಗುರುಸ್ವಾಮಿ, ಮಾಜಿ ಜಿಪಂ ಸದಸ್ಯ ಎಸ್.ಎಂ.ಕೆಂಪಣ್ಣ, ಮಾಜಿ ಕಾಡಾ ಅಧ್ಯಕ್ಷ ನಂಜಪ್ಪ, ಸಮಿತಿಯ ಚಾಮರಾಜನಗರ ವಿಭಾಗದ ಅಧ್ಯಕ್ಷ ರಾಜೇಂದ್ರಕುಮಾರ್, ರಾಜೇಶ್, ಮಹದೇವಪ್ಪ, ಸೇರಿದಂತೆ ಪ್ರಮುಖರಿದ್ದರು.

Translate »