ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ
ಕೊಡಗು

ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ

July 22, 2018

ಗೋಣಿಕೊಪ್ಪಲು:  ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಇಂದು ನಡೆದ ಜೆಡಿಎಸ್ ಜಿಲ್ಲಾಧ್ಯಕ್ಷರ ಸಭೆಗೆ ತೆರಳಿದ್ದ ಸಂಕೇತ್ ಪೂವಯ್ಯ ಸ್ವಪಕ್ಷದ ಕೆಲವರ ವರ್ತನೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

ಪಕ್ಷದ ಬೆಳವಣಿಗೆಗೆ ಸಹಕರಿಸದ ಕೆಲವರು ಕೊಡಗಿಗೆ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಭೇಟಿ ನೀಡಿದ್ದ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗಿ ತಮಗೆ ಮಾತ್ರವಲ್ಲದೆ, ಮುಖ್ಯಮಂತ್ರಿಗಳಿಗೂ ಮುಜುಗರ ಉಂಟು ಮಾಡಿದ ಬಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ಸತತವಾಗಿ ಕೆಲವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದರೂ, ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಬೇಕು ಎಂಬ ಉದ್ದೇಶದಿಂದ ಪಕ್ಷ ಸಂಘಟನೆಯತ್ತ ತಾವು ತೊಡಗಿಸಿಕೊಂಡಿದ್ದಾಗಿ ಸಂಕೇತ್ ಪೂವಯ್ಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ವಿವರಿಸಿದ್ದಾರೆ.

ಕೊಡಗಿನಲ್ಲಿ ವನ್ಯ ಮೃಗಗಳಿಂದ ಸಾವನ್ನಪ್ಪಿದವರು ಹಾಗೂ ಗಾಯಗೊಂಡವರಿಗೆ ತಾವು ನೆರವು ನೀಡಿರುವುದು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನಡೆಸಿದ ಹೋರಾಟ ಹಾಗೂ ಸಂಘ-ಸಂಸ್ಥೆಗಳ ನೆರವಿಗೆ ತಾವು ನಿಂತಿದ್ದು, ಮುಂತಾದ ಹಲವು ವಿಚಾರಗಳನ್ನು ದೇವೇಗೌಡರಿಗೆ ವಿವರಿಸಿದ ಅವರು, ಪಕ್ಷದ ಕೆಲವರು ಮುಖ್ಯಮಂತ್ರಿಗಳಿಗೆ ಮುಜುಗರ ಉಂಟು ಮಾಡುವುದರಿಂದ ತಾವು ಪಕ್ಷದ ಜಿಲ್ಲಾಧ್ಯಕ್ಷರಾಗಿ ಮುಂದುವರೆಯುವುದು ಅಸಾಧ್ಯವೆಂದು ತಿಳಿಸಿ ರಾಜೀನಾಮೆ ಪತ್ರವನ್ನು ದೇವೇಗೌಡರಿಗೆ ನೀಡಿದರು.

ಸಂಕೇತ್ ಪೂವಯ್ಯ ಅವರು ನೀಡಿದ ವಿವರಣೆಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ದೇವೇಗೌಡರು, ರಾಜೀನಾಮೆ ಪತ್ರವನ್ನು ಸ್ವೀಕರಿಸಿದರಾದರೂ, ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಇದರಿಂದಾಗಿ ಸಂಕೇತ್ ಪೂವಯ್ಯ ಅವರ ರಾಜೀನಾಮೆ ಅಂಗೀಕಾರವಾಗಿದೆಯೇ ಎಂಬುದು ಖಚಿತವಾಗಿಲ್ಲ.

Translate »