ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ
ಕೊಡಗು, ಮೈಸೂರು

ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ

August 20, 2018

ಮನೆ ಕುಸಿಯಿತು… ಜಮೀನು ಕೊಚ್ಚಿ ಹೋಯಿತು… ಕಾಡು-ಗುಡ್ಡಗಳಲ್ಲಿ ನಡೆದೇ ಬಂದೆವು
ಮೈಸೂರು: ಮಹಾಮಾರಿ ಮಳೆಯಿಂದಾಗಿ ದಕ್ಷಿಣ ಕಾಶ್ಮೀರ ಕೊಡಗಿನ ಚಿತ್ರಣ ಭಾಗಶಃ ಬದಲಾಗಿ ಹೋಗಿದೆ. ನಿಸರ್ಗದ ಮಡಿಲಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ ಜನರ ಬದುಕು ಅಕ್ಷರಶಃ ನೆರೆಯಲ್ಲೇ ಕೊಚ್ಚಿ ಹೋಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ದಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮಂದಿ, ಮಳೆಯ ಆರ್ಭಟದ ನಡುವೆ ಯೇ ಹತ್ತಾರು ಕಿಮೀ ನಡೆದುಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ.

ಹೀಗೆ ಬದುಕುಳಿದ ಕುಟುಂಬಗಳು ಬೇರೆ ಊರುಗಳಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯಲು ಸಾಗಿದ್ದಾರೆ. ಹೀಗೆ ಮೈಸೂರಿನ ಸಂಬಂ ಧಿಕರ ಮನೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು `ಮೈಸೂರು ಮಿತ್ರ’ನೊಂದಿಗೆ ಮಳೆಯ ರೌದ್ರ ನರ್ತನದಿಂದ ಉಂಟಾದ ಭಯಾನಕ ಘಟನೆಗಳನ್ನು ಕಣ್ಣಿಗೆ ಕಟ್ಟಿದ್ದಾರೆ.

ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಶಾಂತೆಯಂಡ ಬಿ.ತಿಮ್ಮಯ್ಯ, ಅವರ ಪತ್ನಿ ಶಾರದಾಮಣಿ, ಮಗ ರಾಜಪ್ಪ, ಸೊಸೆ ರೂಪ ಹಾಗೂ ಮೂವರು ಮೊಮ್ಮಕ್ಕಳು ಸದ್ಯ ಮೈಸೂರಿ ನ ವಿದ್ಯಾಶಂಕರ ಬಡಾ ವಣೆಯಲ್ಲಿರುವ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಅದೇ ಗ್ರಾಮದ ಕಾಳಚಂಡ ನಂಜುಂಡ ಹಾಗೂ ಅವರ ಪತ್ನಿ ರಾಧಾ ಅವರು ಕಲ್ಯಾಣಗಿರಿಯಲ್ಲಿರುವ ಮಗಳ ಮನೆ ಯನ್ನು ಆಶ್ರಯಿಸಿದ್ದಾರೆ. ಕಾಲೂರು ಗ್ರಾಮದ ಚಂಡೀರ ರಾಜ ತಿಮ್ಮಯ್ಯ, ಅವರ ಪತ್ನಿ ಪೊನ್ನಮ್ಮ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿರುವ ಮಕ್ಕಳ ಬಳಿ ತೆರಳಿದ್ದಾರೆ. ಇದೇ ಗ್ರಾಮದ ಸತೀಶ್ ಕುಟುಂಬವೂ ಆಶ್ರಯಕ್ಕಾಗಿ ಬೆಂಗಳೂರಿನ ಸಂಬಂಧಿಕರ ಮನೆಯ ಹಾದಿ ಹಿಡಿದಿದ್ದಾರೆ. ಸದಾ ಸುರಿಯುತ್ತಿದ್ದ ಮಳೆಯ ನಡುವೆಯೇ ನೆಮ್ಮದಿಯಾಗಿದ್ದ ಕೊಡಗಿನ ಜನತೆಗೆ ಆ ಮಳೆಯೇ ಮಾರಿ ರೂಪ ತಾಳಿ ಕಾಡುತ್ತಿದೆ. ಬರೆ ಕುಸಿದು ಮನೆಯ ಮೇಲೆ ಬಿದ್ದರೂ, ಕಣ್ಣ ಮುಂದೆಯೇ ದೊಡ್ಡ ಗುಡ್ಡಗಳು, ಕಾಫಿ ತೋಟ, ರಸ್ತೆಗಳು ಕೊಚ್ಚಿ ಹೋದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಇವರೆಲ್ಲಾ ಬದುಕಿ ಬಂದಿದ್ದಾರೆ. ಜವರಾಯನಿಗೆ ಸೆಡ್ಡು ಹೊಡೆದು ಮರುಹುಟ್ಟು ಪಡೆದಿದ್ದಾರೆ.

ಶಾಂತೆಯಂಡ ತಿಮ್ಮಯ್ಯ ಹೇಳಿದ್ದು: ಒಂದು ವಾರದ ಹಿಂದೆ ಮಳೆ ಜೋರಾಗಿತ್ತು. ಮಳೆ ಮಾಮೂಲಿ ಎಂದು ಸುಮ್ಮನಿದ್ದೆವು. ಇದ್ದಕ್ಕಿದ್ದಂತೆ ಬರೆ ಕುಸಿದು ಮನೆಯ ಒಂದು ಭಾಗಕ್ಕೆ ಬಿತ್ತು. ಇದರಿಂದ ನೀರು ಮನೆಯೊಳಗೆ ನುಗ್ಗಿತ್ತು. ಪಕ್ಕದಲ್ಲಿರುವ ನದಿಗಳ ನೀರಿನ ಪ್ರಮಾಣ ಹೆಚ್ಚಾಯಿತು. ದೊಡ್ಡದಾದ ಮಣ್ಣಿನ ಗುಡ್ಡೆ ಕುಸಿದು ನದಿಗೆ ಬಿದ್ದ ಪರಿಣಾಮ ನೀರಿನ ಹರಿವಿನ ದಿಕ್ಕೆ ಬದಲಾಗಿ, ನಮ್ಮ ಜಮೀನೆಲ್ಲಾ ಕೊಚ್ಚಿ ಹೋಯಿತು. ರಸ್ತೆಯ ಮೇಲೆ ಗುಡ್ಡೆ ಕುಸಿದು ದಾರಿಯೂ ಇಲ್ಲದಂತಾಯಿತು. ದಿಕ್ಕು ತೋಚದಂತೆ ಕಂಗಾಲಾಗಿದ್ದೆವು. ಅಲ್ಲಿ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿದ್ದರೆ ಉಳಿಯುವುದಿಲ್ಲ ಎಂದು ಗ್ರಾಮದ ಜನರೊಂದಿಗೆ ಬೆಟ್ಟ-ಗುಡ್ಡ ಹತ್ತಿ ಇಳಿದು ಹೇಗೋ ಜಿಪಂ ಮಾಜಿ ಸದಸ್ಯ ರಾದ ರವಿ ಕುಶಾಲಪ್ಪ ಅವರ ಮನೆ ತಲುಪಿ ದೆವು. ಅಲ್ಲಿಯೂ ಅಪಾಯದ ಸ್ಥಿತಿಯಿತ್ತು. ಯಾರಾದರೂ ರಕ್ಷಣೆಗೆ ಧಾವಿಸುತ್ತಾ ರೆಂದು ದಿನಕ್ಕೆ ಒಂದೊಂದು ಊಟ ಮಾಡಿಕೊಂಡು ಉಳಿದಿದ್ದೆವು. ಸೇತುವೆ ಮೇಲೆ ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಯಾಗುತ್ತಿದ್ದಂತೆ ಅಲ್ಲಿಂದ ಹೊರಟೆವು. ಶನಿವಾರ ಬೆಳಿಗ್ಗೆ ಹೊರಟು, ಕಾಡು ಗುಡ್ಡದಲ್ಲಿ ಸುಮಾರು 10 ಮೈಲಿ ನಡೆದು ಮಧ್ಯಾಹ್ನ 1 ಗಂಟೆಗೆ ಮಾದಾಪುರ ಪರಿ ಹಾರ ಕೇಂದ್ರಕ್ಕೆ ತಲುಪಿದೆವು. ಮಳೆಯಿಂದ ನಮ್ಮ ಬದುಕೇ ಕೊಚ್ಚಿ ಹೋಯಿತು.

ಕಾಳಚಂಡ ನಂಜುಂಡ ಅವರ ಅಳಲು: ಮುಕ್ಕೋಡ್ಲು ಗ್ರಾಮದ ಕಾಳಚಂಡ ನಂಜುಂಡ ಹಾಗೂ ಪತ್ನಿ ರಾಧಾ ಸುಮಾರು 63 ವರ್ಷ ವಯೋಮಾನ ದವರು. ನೆರೆ ಪ್ರವಾಹದಿಂದ ಪಾರಾಗಿ ಬಂದಿ ರುವ ಬಗ್ಗೆ ನಂಜುಂಡ ಅವರು ಹೇಳಿದ್ದು ಹೀಗೆ. ನಮಗೆ ಮಳೆ ಮಾಮೂಲಿ. ಹಾಗಾಗಿ ನಮ್ಮಲ್ಲಿ ಮಳೆ ಬಗ್ಗೆ ಭೀತಿ ಇರಲಿಲ್ಲ. ಆದರೆ ಪಕ್ಕದಲ್ಲಿದ್ದ ಬರೆ, ಬೆಟ್ಟ ಕುಸಿದಿದ್ದನ್ನು ಕಂಡು ಭಯವಾಯಿತು. ಆದರೂ ಮನೆ ಯಲ್ಲೇ ಇದ್ದೆವು. ಆದರೆ ಬರೆ ಕುಸಿದು ಕೊಟ್ಟಿಗೆ ಮೇಲೆ ಬಿತ್ತು. ನಂತರ ಗ್ರಾಮದ ವರೊಂದಿಗೆ ತೆರಳಲು ನಿರ್ಧರಿಸಿದೆವು. ಆದರೆ ರಸ್ತೆಯೇ ಇರಲಿಲ್ಲ. ಆದರೂ ಎಲ್ಲರೂ ಒಟ್ಟಿಗೆ ಸುಮಾರು 15 ಕಿಮೀ ಬೆಟ್ಟ ಗುಡ್ಡದಲ್ಲೇ ಸಾಗಿದೆವು. ಅರ್ಧ ದಾರಿಯಲ್ಲಿ ರಕ್ಷಣಾ ಸಿಬ್ಬಂದಿ ನೆರವಿಗೆ ಬಂದು, ಮಡಿ ಕೇರಿಗೆ ತಲುಪಿಸಿದರು. ದಾರಿ ಯುದ್ದಕ್ಕೂ ಮಂಡಿವರೆಗೂ ಕಾಲು ಹೂತು, ನಡೆಯು ವುದು ತುಂಬಾ ಕಷ್ಟವಾಯಿತು. ಕಾಲಲ್ಲಿ ಗಾಯವಾದರೂ ಹೇಗಾದರೂ ಸುರಕ್ಷತೆಯ ಸ್ಥಳ ತಲುಪಬೇಕೆಂದು ಹೆಜ್ಜೆ ಹಾಕಿದೆವು. ಮಡಿಕೇರಿಯಲ್ಲಿರುವ ಮಗಳ ಮನೆಗೂ ನೀರು ನುಗ್ಗಿದ್ದರಿಂದ ಎಲ್ಲರೂ ಮೈಸೂರಿನಲ್ಲಿರುವ ಮತ್ತೋರ್ವ ಮಗಳ ಮನೆಗೆ ಬಂದು ಆಶ್ರಯ ಪಡೆದಿದ್ದೇವೆ.

ಕಾಳಚಂಡ ನಂಜುಂಡ ಹಾಗೂ ಪತ್ನಿ ರಾಧಾ

ರಾಜ ತಿಮ್ಮಯ್ಯರ ಕರಾಳ ಅನುಭವ: ಪಾಳು ಮನೆಯಲ್ಲಿ, ಮರದಡಿಯಲ್ಲಿ ಐದಾರು ದಿನ ನರಕ ಜೀವನ ನಡೆಸಿದ ಕಾಲೂರು ಗ್ರಾಮದ ಚಂಡೀರ ರಾಜ ತಿಮ್ಮಯ್ಯ ಅವರು ಅಲ್ಲಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಆ.14ರಂದು ನಮ್ಮ ಮನೆ ಪಕ್ಕದಲ್ಲಿರುವ ಅಣ್ಣನ ಮನೆಗೆ ನೀರು ನುಗ್ಗಿತ್ತು. ನಾನು ಅಲ್ಲಿಗೆ ಹೋಗಿ ಎಲ್ಲರನ್ನೂ ನಮ್ಮ ಮನೆಗೆ ಕರೆತಂದೆ. ಮಳೆ ಮತ್ತಷ್ಟು ಜೋರಾಗಿ ಅಂದು ಮಧ್ಯರಾತ್ರಿ ನಮ್ಮ ಮನೆಗೂ ನೀರು ತುಂಬಿತು. ಎಲ್ಲರೂ ಮನೆಯ ಹಿಂಬಾಗಿಲಿನಿಂದ ಹೊರ ಬಂದೆವು. ಎಲ್ಲಿಯಾದರೂ ಹೋಗೋಣವೆಂದರೆ ದಾರಿಯೂ ಕೊಚ್ಚಿ ಹೋಗಿತ್ತು. ಕಡೆಗೆ ಬೆಟ್ಟದಲ್ಲಿದ್ದ ಒಂದು ಪಾಳು ಮನೆಗೆ ತೆರಳಿದೆವು. ಕೆಲಹೊತ್ತಿನಲ್ಲಿ ಅಲ್ಲಿಯೂ ನೆರೆ ಆವರಿಸಿತು. ಅದು ಕುಸಿಯಬಹು ದೆಂದು ಅಲ್ಲಿಂದ ಹೊರ ಬಂದು, ಐದು ದಿನಗಳ ಕಾಲ ಮರದ ಕೆಳಗಡೆ ಪ್ಲಾಸ್ಟಿಕ್ ಹೊದ್ದುಕೊಂಡು ಬದುಕಿದ್ದೆವು. ನಮ್ಮ ಬದುಕು ಮುಗಿದು ಹೋಯಿತು ಎಂದುಕೊಳ್ಳುವಷ್ಟರಲ್ಲಿ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಬಂದರು. ಅವರೊಂದಿಗೆ ಪೊಲೀಸರು, ಸ್ಥಳೀಯರೂ ಇದ್ದರು. ದಾರಿ ಯುದ್ದಕ್ಕೂ ಅಪಾಯದಲ್ಲಿ ಸಿಲುಕಿದ್ದವ ರನ್ನು ಕರೆದುಕೊಂಡು ಬಂದರು. ವಯಸ್ಸಾದವರನ್ನು ಹೆಗಲ ಮೇಲೆ ಹೊತ್ತು ಬಂದರು. ಸುಮಾರು 15 ಕಿಮೀ ಕಾಡಿನ ಹಾದಿಯಲ್ಲಿ ನಡೆದು ಮಡಿಕೇರಿ ಪುರಸಭೆ ಪರಿಹಾರ ಕೇಂದ್ರಕ್ಕೆ ನಿನ್ನೆಯಷ್ಟೇ ತಲುಪಿದವು. ಅಲ್ಲಿಂದ ಇಂದು ಮೈಸೂರಿ ಗೆ ಬಂದೆವು. ಇಲ್ಲಿನ ಸಹೃದಯರು ಊಟೋಪಚಾರ ಮಾಡಿದರು. ಪಾಪ ಹಸುಗಳನ್ನೂ ಅಲ್ಲಿಯೇ ಬಿಟ್ಟು ಬರಬೇಕಾಯಿತು. ಇಂತಹ ದುಸ್ಥಿತಿ ಯಾರಿಗೂ ಬರಬಾರದು.

ಸಂತ್ರಸ್ತರಿಗೆ ಸ್ಥೈರ್ಯ ತುಂಬಿದ  ಶ್ರೀ ಕಾವೇರಿ ಕೊಡವ ಅಸೋಸಿಯೇಷನ್
ಮೈಸೂರಿನತ್ತ ಪ್ರಯಾಣ ಬೆಳೆಸಿದ ಸಂತ್ರಸ್ತರ ಮಾಹಿತಿ ಪಡೆದ ಇಲ್ಲಿನ ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಪದಾಧಿಕಾರಿಗಳು, ಅವರನ್ನು ಬರಮಾಡಿಕೊಂಡು ಸತ್ಕರಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ. ಚಂಡೀರ ರಾಜ ತಿಮ್ಮಯ್ಯ, ಕಾಳಚಂಡ ನಂಜುಂಡ ಹಾಗೂ ಶಾಂತೆಯಂಡ ಬಿ.ತಿಮ್ಮಯ್ಯ ಕುಟುಂಬದವರನ್ನು ವಿದ್ಯಾಶಂಕರನಗರದಲ್ಲಿರುವ ಕೊಡವ ಮಾಡೆಲ್ ಶಾಲೆ ಆವರಣಕ್ಕೆ ಕರೆದೊಯ್ದು, ಊಟೋಪಚಾರ ಮಾಡಿ, ಅಗತ್ಯ ವಸ್ತುಗಳನ್ನು ನೀಡಿ, ಸ್ವಲ್ಪ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಮಳೆಯ ಅವಾಂತರದಿಂದ ಕಂಗಾಲಾಗಿದ್ದ ಇವರ ಸಂಬಂಧಿಕರನ್ನು ಸಂಪರ್ಕಿಸಿ ವಿಷಯ ತಿಳಿಸಿ, ಅವರೊಂದಿಗೆ ಬೀಳ್ಕೊಟ್ಟಿದ್ದಾರೆ. ಅಸೋಸಿಯೇಷನ್‍ನ ಅಧ್ಯಕ್ಷ ಬಿ.ಎಂ.ದೇವಯ್ಯ, ಉಪಾಧ್ಯಕ್ಷ ಪಿ.ಎಸ್.ದೇವಯ್ಯ, ಕಾರ್ಯದರ್ಶಿ ಕೆ.ಎಂ.ಬೆಳ್ಳಿಯಪ್ಪ, ಪ್ರಧಾನ ಕಾರ್ಯದರ್ಶಿ ಪದ್ಮಾ, ಖಜಾಂಚಿ ಸಿ.ಪಿ.ಚೆಂಗಪ್ಪ, ಪದಾಧಿಕಾರಿ ಪ್ರವೀಣ್ ಚೆಂಗಪ್ಪ ಅವರು ನೆರೆ ಸಂತ್ರಸ್ತರಿಗೆ ಸ್ಥೈರ್ಯ ತುಂಬಿದರು.

Translate »