ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ
ಮೈಸೂರು

ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ

October 7, 2018

ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ತಮಗೆ ಅವಕಾಶ ದೊರೆತಿರುವುದು ತರಗತಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದಷ್ಟು ಸಂತಸವಾಗಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಹಬ್ಬದ ಉದ್ಘಾಟನೆ ಅವಕಾಶ ದೊರೆಯುತ್ತದೆ ಎಂದು ಕನಸಿನಲ್ಲೂ ಕಂಡಿರಲಿಲ್ಲ ಎಂದರು.

ದೇವರ ದಯೆಯಿಂದ ದಸರಾ ಉದ್ಘಾಟನೆ ಭಾಗ್ಯ ದೊರೆತಿದೆ, ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವುದು ಮತ್ತು ದಸರಾ ಉದ್ಘಾಟನೆ ಅವಕಾಶ ಎರಡೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಪ್ರತಿ ರಾಜ್ಯಕ್ಕೆ ತನ್ನದೇ ಆದ ಸಾಂಸ್ಕೃತಿಕ ಹೆಗ್ಗುರುತು ಇರುತ್ತದೆ. ಕರ್ನಾಟಕಕ್ಕೆ ನಾಡಹಬ್ಬ ದಸರಾ ಹೆಗ್ಗುರುತಾಗಿದೆ, ತಮಿಳುನಾಡಿಗೆ ಪೊಂಗಲ್, ಮಹಾರಾಷ್ಟ್ರಕ್ಕೆ ಗಣೇಶ ಉತ್ಸವ, ಕೇರಳಕ್ಕೆ ಓಣಂ ಹೆಗ್ಗುರುತುಗಳಾಗಿವೆ.

ಮೈಸೂರು ನನ್ನ ಪತಿಯ ತವರು. 58 ವರ್ಷಗಳ ಹಿಂದೆ ನನ್ನ ಕುಟುಂಬ ವರ್ಗದ ಜೊತೆಗೂಡಿ, ಅಂದಿನ ಮಹಾರಾಜರು ನಡೆಸಿಕೊಡುತ್ತಿದ್ದ ದಸರಾ ವೀಕ್ಷಣೆ ಮಾಡಿದ್ದೆ. ಇದೀಗ ನಾಡಹಬ್ಬದ ಉದ್ಘಾಟನೆ ಅವಕಾಶ ದೊರೆತಿರುವುದು ಒಂದೆಡೆ ಆಶ್ಚರ್ಯ, ಮತ್ತೊಂದೆಡೆ ಸಂತಸ ತಂದಿದೆ.

ಈ ಹಿಂದೆ ಡಾ. ಚಂದ್ರಶೇಖರ ಕಂಬಾರ್, ಕವಿ ನಿಸಾರ್ ಅಹಮದ್, ಗಾಯಕಿ ಗಂಗೂಬಾಯಿ ಹಾನಗಲ್, ವರನಟ ಡಾ. ರಾಜಕುಮಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಂತಹ ಗಣ್ಯ ವ್ಯಕ್ತಿಗಳು ಉದ್ಘಾಟಿಸಿದ ಉತ್ಸವವನ್ನು ನಾನು ಉದ್ಘಾಟಿಸುವ ಭಾಗ್ಯ ದೊರೆತಿರುವುದು ಹೆಮ್ಮೆ ಎನಿಸಿದೆ. ಅಂದು ಮಹಾರಾಜರು ನಾಡಹಬ್ಬ ಆಚರಿಸಿ ಕನ್ನಡ ಮತ್ತು ರಾಜ್ಯದ ಏಕತೆಯನ್ನು ಉಳಿಸಿದರು. ಇಲ್ಲದಿದ್ದರೆ ಕರ್ನಾಟಕ ಅನ್ಯ ರಾಜ್ಯಗಳಂತೆ ಹೋಳಾಗುತ್ತಿತ್ತು. ಈ ಭಾಗದಲ್ಲಿ ರಾಜರ ಆಳ್ವಿಕೆ ಇದ್ದುದರಿಂದ ಕನ್ನಡ ಮೇರು ಸ್ಥಾನಕ್ಕೆ ಏರಿತು. ಇಲ್ಲದಿದ್ದರೆ ಹೈದರಾಬಾದ್ ಕರ್ನಾಟಕದಲ್ಲಿ ಉರ್ದು, ತೆಲುಗು ಇನ್ನು ಕೆಲವು ಭಾಗಗಳಲ್ಲಿ ಮಳೆಯಾಳಂ ಭಾಷೆಗಳು ಅಧಿಪತ್ಯ ಸಾಧಿಸುತ್ತಿದ್ದವು.

ರಾಜ್ಯದ ಅಭಿವೃದ್ಧಿ ಜೊತೆಗೆ ಕನ್ನಡ ಮತ್ತು ಕರ್ನಾ ಟಕ ಉಳಿಸಿದ ಕೀರ್ತಿ ಮಹಾರಾಜರಿಗೆ ಸಲ್ಲುತ್ತದೆ. ಈ ವಿಷಯದಲ್ಲಿ ವಾದ-ವಿವಾದ ಸಲ್ಲದು. ಕನ್ನಡ ನೆಲ-ಜಲ-ಸಂಸ್ಕೃತಿ ಉಳಿಸುವ ಕೆಲಸ ಆಗಬೇಕು. ನಾನು ಯಾರಿಗೂ ರೋಲ್ ಮಾಡೆಲ್ ಅಲ್ಲ. ದುಡ್ಡಿನ ಹಿಂದೆ ಹೋಗದೆ, ಶ್ರಮಕ್ಕೆ ಬೆಲೆ ಕೊಟ್ಟು ಯಾರು ಕೆಲಸ ಮಾಡುತ್ತಾರೋ ಅಂತಹವರನ್ನು ದುಡ್ಡು ಹುಡುಕಿಕೊಂಡು ಬರುತ್ತದೆ. ಇದನ್ನು ಯುವ ಜನತೆ ಅರಿತರೆ ಎಲ್ಲಾ ಮಾದರಿಯ ಅಭಿವೃದ್ಧಿ ಕಾಣ ಬಹುದು, ನಮ್ಮ ಇನ್ಫೋಸಿಸ್ ಸಂಸ್ಥೆ ಕನ್ನಡೇತರರಿಗೆ ಕೆಲಸ ನೀಡುತ್ತದೆ ಎಂಬುದು ಸರಿಯಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜ್ಞಾನ ಮತ್ತು ಅರಿವು ಹೊಂದಿದ್ದರೆ ಕೆಲಸ ಸಿಕ್ಕೇಸಿಗುತ್ತದೆ. ನಾನು ಶಿಕ್ಷಕರ ಕುಟುಂಬ ದಿಂದ ಬಂದವಳು. ನನ್ನ ತಾಯಿ ಶಾಲಾ ಶಿಕ್ಷಕಿ, ನನ್ನ ತಂದೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ಇಂತಹವರ ಮನೆಯಲ್ಲಿ ಪುಸ್ತಕಗಳು ದೊಡ್ಡ ಪ್ರಮಾಣದಲ್ಲಿ ಇರುತ್ತವೆ. ಚಿಕ್ಕ ವಯಸ್ಸಿನಲ್ಲೇ ಪುಸ್ತಕಗಳನ್ನು ಓದಿ ಸಾಹಿತ್ಯ ಜ್ಞಾನದ ಅರಿವು ಮೂಡಿಸಿಕೊಂಡೆ. ಅದೇ ಇಂದು ನನಗೆ ಸಮಾಜಸೇವೆ, ಸಾಹಿತ್ಯ ಕೃಷಿಗೆ ಸಹಕಾರಿ ಯಾಯಿತು ಎಂದರು.

Translate »