ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು
ಮೈಸೂರು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

October 20, 2018

ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಬೈಲಕುಪ್ಪೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಯನ್ನು ತುಳಿದು ರೈತರೊಬ್ಬರು ಸ್ಥಳ ದಲ್ಲೇ ಮೃತಪಟ್ಟಿರುವ ಘಟನೆ ಮನುಗನ ಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತಪಟ್ಟ ವ್ಯಕ್ತಿ ಮನುಗನಹಳ್ಳಿ ಗ್ರಾಮದ ಮಹಲಿಂಗಪ್ಪಗೌಡ ಅವರ ಮಗ ನಂಜುಂಡೇಗೌಡ(50). ಗ್ರಾಮದ ಗೋವಿಂದೇಗೌಡರಿಗೆ ಸೇರಿದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು, ಅದು ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದೆ ರೈತ ನಂಜುಂಡೇಗೌಡ ತುಳಿದು, ಮೃತಪಟ್ಟಿದ್ದಾರೆ.

ಘಟನೆ ವಿವರ: ಒಂದು ವಾರದ ಹಿಂದೆಯೇ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸಿದ ಗ್ರಾಮದ ರವೀಂದ್ರ, ಸೆಸ್ಕ್ ಸಿಬ್ಬಂದಿ ಭೀಮಸೇನ ಎಂಬುವವರಿಗೆ ಕರೆ ಮಾಡಿ ತಿಳಿಸಿದ್ದರು. ಸಿಬ್ಬಂದಿ ಬಂದು ನೋಡಿ ಸರಿಪಡಿಸುತ್ತೇನೆ ಎಂದು ಹೇಳಿ ಹೋದ ವರು, ಅತ್ತ ಕಡೆ ತಿರುಗಿಯೂ ನೋಡಿರಲಿಲ್ಲ. ಸೆಸ್ಕ್ ನಿರ್ಲಕ್ಷದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಪುಟ್ಟಸ್ವಾಮೇ ಗೌಡ ಎಂಬುವವರು ಆಯುಧಪೂಜೆ ಪ್ರಯುಕ್ತ ತಮ್ಮ ಜಮೀನಿನಲ್ಲಿನ ಬೋರ್‍ವೆಲ್‍ಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದ ಸಂದರ್ಭ ದಲ್ಲಿ ಯಾರೋ ಚೀರಾಡುತ್ತಿದ್ದ ಶಬ್ದ ಕೇಳಿ ಸ್ಥಳಕ್ಕೆ ಹೋಗಿ ನೋಡಿದಾಗ ಅಷ್ಟರಲ್ಲಿ ನಂಜಂಡೇಗೌಡ ಕೊನೆಯುಸಿರೆಳೆದಿದ್ದರೆ ಬಳಿಕ ಪುಟ್ಟಸ್ವಾಮಿಗೌಡರು ಗ್ರಾಮಸ್ಥರಿಗೆ ಸಾರ್ವಜನಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಮಾಹಿತಿ ತಿಳಿದ ಮೈಮುಲ್ ನಿರ್ದೇಶಕ ಪ್ರಸನ್ನ ಹಾಗೂ ಪಿರಿಯಾಪಟ್ಟಣ ಸೆಸ್ಕ್ ಅಧಿಕಾರಿ ಸಂತೋಷ್, ಕಣಗಾಲು ವ್ಯಾಪ್ತಿಯ ಇಂಜಿನಿಯರ್ ಪ್ರತಾಪ್, ವೃತ್ತ ನಿರೀಕ್ಷಕ ಪ್ರದೀಪ್, ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಪಿ.ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಮೈಮುಲ್ ನಿರ್ದೇಶಕ ಪ್ರಸನ್ನ, ಕುಟುಂಬದವರಿಗೆ ಸಾಂತ್ವನ ಹೇಳಿ, ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು. ನಂಜುಂಡೇಗೌಡರ ಪತ್ನಿ ಮೀನಾಕ್ಷಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿಯೂ ಸೆಸ್ಕ್ ಅಧಿಕಾರಿ ತಿಳಿಸಿದರು.

ಕಣಗಾಲು ವ್ಯಾಪ್ತಿಯ ಸೆಸ್ಕ್ ಇಂಜಿನಿ ಯರ್ ಪ್ರತಾಪ್ ಅವರು ವೈಯಕ್ತಿಕ ನೆರವಾಗಿ ಸ್ಥಳದಲ್ಲೇ ಮೃತರ ಪತ್ನಿಗೆ 10 ಸಾವಿರ ನೀಡಿದರು. ಇನ್ನೂ 15 ಸಾವಿರ ರೂ.ಗಳನ್ನು ಎರಡು ದಿನಗಳಲ್ಲಿ ನೀಡುವುದಾಗಿ ತಿಳಿಸಿದರು.

ವೃತ್ತನಿರೀಕ್ಷಕ ಪ್ರಸನ್ನ ಅವರ ಸೂಚನೆ ಮೇರೆಗೆ ಠಾಣಾಧಿಕಾರಿ ಪಿ.ಲೋಕೇಶ್ ಪ್ರಕರಣ ದಾಖಲಿಸಿಕೊಂಡು ಶವವನ್ನು ಪಿರಿಯಾಪಟ್ಟಣದ ಶವಾಗಾರದಲ್ಲಿ ಮರ ಣೋತ್ತರ ಪರೀಕ್ಷೆ ನಂತರ, ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಟ್ರಸ್ಟ್ ಅಧ್ಯಕ್ಷ ಜಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ರುದ್ರಮ್ಮನಾಗಯ್ಯ, ಗ್ರಾಮದ ಯಜಮಾನರಾದ ರವೀಂದ್ರ, ಗ್ರಾಮಸ್ಥರಾದ ವೆಂಕಟೇಶ್ ನೂರಾರು ಜನ ಹಾಜರಿದ್ದರು. ಕುಟುಂಬದ ರೋಧನ ಮುಗಿಲು ಮುಟ್ಟಿತ್ತು.

Translate »