ತಿ.ನರಸೀಪುರಕ್ಕೆ ಡಿಸಿ, ಎಸ್‍ಪಿ ಭೇಟಿ: ಕುಂಭಮೇಳ ಸಿದ್ಧತೆ ಮಾಹಿತಿ ಸಂಗ್ರಹ
ಮೈಸೂರು

ತಿ.ನರಸೀಪುರಕ್ಕೆ ಡಿಸಿ, ಎಸ್‍ಪಿ ಭೇಟಿ: ಕುಂಭಮೇಳ ಸಿದ್ಧತೆ ಮಾಹಿತಿ ಸಂಗ್ರಹ

January 25, 2019

ತಿ.ನರಸೀಪುರ: ಮುಂದಿನ ಫೆ.17ರಿಂದ ನಡೆಯಲಿರುವ ಮೂರು ದಿನಗಳ ಧಾರ್ಮಿಕ ಉತ್ಸವ ಕುಂಭಮೇಳಕ್ಕೆ ಅಗತ್ಯ ತಯಾರಿ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಪಟ್ಟಣದ ತ್ರಿವೇಣಿ ಸಂಗಮಕ್ಕೆ ಗುರುವಾರ ಭೇಟಿ ನೀಡಿದರು.

ಈ ಹಿಂದಿನ ಕುಂಭಮೇಳದಲ್ಲಿ ಭಕ್ತರಿಗೆ ಒದಗಿಸಲಾಗಿದ್ದ ಸೌಲಭ್ಯಗಳನ್ನು ಪ್ರಸಕ್ತ ಕುಂಭಮೇಳದಲ್ಲಿಯೂ ಮಾಡಿಕೊಡುವ ಸಂಬಂಧ ತ್ರಿವೇಣಿ ಸಂಗಮದ ಭಿಕ್ಷೇಶ್ವರ, ಮೂಲಸ್ಥಾನೇಶ್ವರ, ಅಗಸ್ತೇಶ್ವರ ಗುಂಜಾ ನರಸಿಂಹಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು, ಭಕ್ತರಿಗೆ ಸ್ನಾನ ಸೌಲಭ್ಯ ಮತ್ತು ಸುರಕ್ಷತೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳ ಬಗ್ಗೆ ಹಿರಿಯ ಅಧಿಕಾರಿಗಳಿಬ್ಬರೂ ಮಾಹಿತಿ ಪಡೆದರು.

ತಹಶೀಲ್ದಾರ್ ನಾಗಪ್ರಶಾಂತ್, ತಾಪಂ ಇಓ ಡಾ.ನಂಜೇಶ್, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಪುರಸಭೆ ವೃತ್ತ ನಿರೀಕ್ಷಕ ಎಂ.ಆರ್.ಲವ, ಪಿಎಸ್‍ಐ ಅಜರುದ್ದೀನ್ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

ಅಧಿಕಾರಿಗಳಿಗಾಗಿ ಕಾದ ಜನಪ್ರತಿನಿಧಿಗಳು: ಕುಂಭಮೇಳದ ಮಾಹಿತಿ ನೀಡುವ ಸಂಬಂಧ ಹಾಗೂ ಅಗತ್ಯ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಲು ಆದಿಚುಂಚನಗಿರಿ ಭವನದಲ್ಲಿ ಕಾದು ಕುಳಿತಿದ್ದ ಜನಪ್ರತಿನಿಧಿಗಳು, ಮುಖಂಡರಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಲಿಲ್ಲ. ಇದರಿಂದ ಮುಖಂಡರು ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದರು.

Translate »