ಮಹಿಳಾ ನ್ಯಾಯಾಧೀಶರ ವರ್ತನೆಗೆ ಆಕ್ಷೇಪ
ಮೈಸೂರು: ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆಯೊಬ್ಬರು ಕಲಾಪಗಳ ವೇಳೆ ವಕೀಲರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಬುಧವಾರ ಕಲಾಪದಿಂದ ಹೊರಗುಳಿದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆಯವರು ಕಲಾಪದ ಸಮಯದಲ್ಲಿ ವಿನಾಕಾರಣ ವಕೀಲರನ್ನು ಅಪಮಾನಿಸುತ್ತಿದ್ದಾರೆ ಎಂದು ಆರೋಪಿಸಿ 3 ಸಾವಿರಕ್ಕೂ ಹೆಚ್ಚು ವಕೀಲರು ಇಂದು ಕಲಾಪದಿಂದ ಹೊರಗುಳಿದರು.
ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವಕೀಲರ ಸಂಘದ ಕಾರ್ಯದರ್ಶಿ ಬಿ.ಶಿವಣ್ಣ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಯವರು ವಕೀಲರಿಗೆ ವಿನಾಕಾರಣ ಅಪಮಾನ ಮಾಡುತ್ತಿದ್ದಾರೆ. ಈ ಸಂಬಂಧ ಅನೇಕ ವಕೀಲರು ಸಂಘಕ್ಕೆ ದೂರು ಸಲ್ಲಿಸಿದ್ದಾರೆ. ಸದರಿ ನ್ಯಾಯಾಧೀಶೆಯವರ ವರ್ತನೆ ಖಂಡಿಸಿ ಈ ಹಿಂದೆಯೂ ಕಲಾಪ ಬಹಿಷ್ಕರಿ ಸಿದ್ದೆವು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ ಅವರ ಗಮನಕ್ಕೂ ಈ ವಿಚಾರ ತರಲಾಗಿತ್ತು ಎಂದು ತಿಳಿಸಿದರು.
ಎಸ್.ಕೆ.ವಂಟಿಗೋಡಿಯವರು ಸದರಿ ನ್ಯಾಯಾಧೀಶೆಯವರನ್ನು ಕರೆಯಿಸಿ ತಿಳುವಳಿಕೆ ಸಹ ಹೇಳಿದ್ದರು. ಈ ವೇಳೆ ಅವರು ಮತ್ತೆ ಆ ರೀತಿ ವರ್ತಿಸುವು ದಿಲ್ಲವೆಂದು ಒಪ್ಪಿಕೊಂಡಿದ್ದರು. ಆದರೆ ಅದೇ ವರ್ತನೆ ಮುಂದುವರೆಸಿದ ಹಿನ್ನೆಲೆಯಲ್ಲಿ ಇಂದು ಕಲಾಪ ಬಹಿಷ್ಕರಿಸಲಾಗಿದೆ ಎಂದರು.
ದೂರು ಸಲ್ಲಿಕೆ: ಮುಂದುವರೆದು ಮಾತನಾಡಿದ ಸಂಘದ ಕಾರ್ಯದರ್ಶಿ ಬಿ.ಶಿವಣ್ಣ, ಸದರಿ ನ್ಯಾಯಾಧೀಶೆಯವರು ತಮ್ಮ ವರ್ತನೆ ಬದಲಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲ್ಲವೇ ವರ್ಗಾವಣೆ ಮಾಡುವಂತೆ ಸಂಘದ ಅಧ್ಯಕ್ಷ ಆನಂದಕುಮಾರ್ ನೇತೃತ್ವದಲ್ಲಿ ಹೈಕೋರ್ಟ್‍ನ ಮೈಸೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರ ಕಚೇರಿಗೆ ಬುಧವಾರ ಸಂಜೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿದ ಆಡಳಿತಾತ್ಮಕ ನ್ಯಾಯಾಧೀಶ ಎಸ್. ಎನ್.ಸತ್ಯನಾರಾಯಣ, ಇದೇ ಶನಿವಾರ ಮೈಸೂರಿನ ನ್ಯಾಯಾಲಯಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.