ಮೈಸೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 59 ಉಪ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮೈಸೂರಿನ 10 ಕೇಂದ್ರದಲ್ಲಿ ಒಟ್ಟು 3,338 ಅಭ್ಯರ್ಥಿಗಳು (ಪುರುಷ ಮತ್ತು ಮಹಿಳೆ) ಭಾನುವಾರ ಪರೀಕ್ಷೆ ಬರೆದಿದ್ದಾರೆ. ಇಡೀ ರಾಜ್ಯಾದ್ಯಂತ ಅಬಕಾರಿ ಇಲಾಖೆಯಲ್ಲಿ ಖಾಲಿ ಇದ್ದ ಒಟ್ಟು 59 ಉಪ ನಿರೀಕ್ಷಕರ (ಸಬ್ ಇನ್ಸ್‍ಪೆಕ್ಟರ್) ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‍ಸಿ) ವತಿಯಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಮೈಸೂರಿನ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಒಟ್ಟು 5,516 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ ಇಂದು ನಡೆದ ಪರೀಕ್ಷೆಯಲ್ಲಿ 3,338 ಅಭ್ಯರ್ಥಿಗಳು ಹಾಜರಿದ್ದರೆ, 2,178 ಅಭ್ಯರ್ಥಿಗಳು ಗೈರು ಹಾಜರಿದ್ದರು. ರಾಜ್ಯ ಹಲವು ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ನಡೆದಿದೆ. ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಪ್ರೌಢಶಾಲೆ, ಮಹಾಜನ ಪಬ್ಲಿಕ್ ಶಾಲೆ, ಎಸ್‍ಬಿಆರ್‍ಆರ್ ಮಹಾಜನ ಪಿಯು ಕಾಲೇಜು, ಶ್ರೀ ಸತ್ಯಸಾಯಿಬಾಬಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ಅಗ್ರಹಾರದ ಶ್ರೀನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು (ಮಹಾರಾಜ ಕಾಲೇಜು), ಗೋಕುಲಂ 3ನೇ ಹಂತದ ಕೆ.ಪುಟ್ಟಸ್ವಾಮಿ ಸಂಯಕ್ತ ಪಿಯು ಕಾಲೇಜು, ವಿದ್ಯಾವರ್ಧಕ ಪಾಲಿಟೆಕ್ನಿಕ್ ಹಾಗೂ ಕೆಪಿ ಕಾನ್ವೆಂಟ್‍ನ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ಬೆಳಿಗ್ಗೆ 10ರಿಂದ 11.30ರವರೆಗೆ ಪತ್ರಿಕೆ-1ರಲ್ಲಿ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು ಹಾಗೂ ಕನ್ನಡದಿಂದ ಆಂಗ್ಲ ಭಾಷೆಗೆ ಮತ್ತು ಆಂಗ್ಲ ಭಾಷೆ ಯಿಂದ ಕನ್ನಡಕ್ಕೆ ಭಾಷಾಂತರದ ಪರೀಕ್ಷೆ ನಡೆದರೆ, ಮಧ್ಯಾಹ್ನ 2ರಿಂದ 3.30ರವರೆಗೆ ಪತ್ರಿಕೆ-2ರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಓಎಂಆರ್ ವಿಧಾನದ ಮೂಲಕ ಪರೀಕ್ಷೆ ನಡೆಸಲಾಯಿತು. ಈ ಎರಡೂ ಪತ್ರಿಕೆಗಳಿಂದ ಒಟ್ಟು 200 ಅಂಕಗಳನ್ನು ನಿಗದಿಗೊಳಿಸಲಾಗಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಮೈಸೂರಿನ 10 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆಗೆ ಆದೇಶಿ ಸಿದ್ದರು. ಈ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಸಮಸ್ಯೆ ಇಲ್ಲದೆ, ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೈಸೂರು ಮಾತ್ರವಲ್ಲದೆ, ಬೆಂಗಳೂರು, ಬಳ್ಳಾರಿ, ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಮಂಗಳೂರು, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ರಾಯಚೂರು ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ನಡೆಸಲಾಗಿದೆ. ಅರ್ಜಿ ಸಲ್ಲಿಸಲು 2018ರ ನ.23ರಿಂದ ಅವಕಾಶ ನೀಡಲಾಗಿತ್ತು. 2018ರ ಡಿ.22 ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು.