ಆರ್‍ಟಿಐನಡಿ ಮಾಹಿತಿ ನೀಡದ  ಮೈಸೂರು ತಾಲೂಕು ಮಾಜಿ  ತಹಸೀಲ್ದಾರ್‍ಗೆ 10 ಸಾವಿರ ರೂ. ದಂಡ
ಮೈಸೂರು

ಆರ್‍ಟಿಐನಡಿ ಮಾಹಿತಿ ನೀಡದ ಮೈಸೂರು ತಾಲೂಕು ಮಾಜಿ ತಹಸೀಲ್ದಾರ್‍ಗೆ 10 ಸಾವಿರ ರೂ. ದಂಡ

March 12, 2019

ಮೈಸೂರು: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರೊಬ್ಬರು ಕೇಳಿದ್ದ ಮಾಹಿತಿಯನ್ನು ನೀಡದ ಕಾರಣ ಮೈಸೂರು ತಾಲೂಕಿನ ಹಿಂದಿನ ತಹಸೀಲ್ದಾರ್ ರಮೇಶ್‍ಬಾಬು ಅವರಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು ರಮೇಶ್ ಬಾಬು ವೇತನದಲ್ಲಿ ಕಡಿತಗೊಳಿಸಿ ಆರ್‍ಟಿಐ ಕಾಯಿದೆ ಖಾತೆಗೆ ಜಮೆ ಮಾಡಬೇಕೆಂದು ಮೈಸೂರು ವಿಭಾಗಾಧಿಕಾರಿ ಶಿವೇಗೌಡ ಅವರಿಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎಲ್. ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ.

ವಿವರ: ಮೈಸೂರಿನ ರಾಮಕೃಷ್ಣನಗರದ ಜಿ ಬ್ಲಾಕ್ ನಿವಾಸಿ ವಕೀಲ ಎಸ್.ಟಿ. ಸದಾನಂದಗೌಡ ಅವರು, ಮೈಸೂರು ತಾಲೂಕು ತಹಸೀಲ್ದಾರರು, ಜಯಪುರ ಹೋಬಳಿ, ಸಿಂಧುವಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 373/1ರ 1 ಎಕರೆ 24 ಗುಂಟೆ ಆಸ್ತಿಯ ಪೈಕಿ 31 ಗುಂಟೆಯನ್ನು ಸಿಂಧುವಳ್ಳಿ ತಾಯಿ ಮತ್ತು ಸುಧಾ ಎಂಬವರ ಹೆಸರಿಗೆ ಖಾತೆ ಮಾಡಿರುವ ಆದೇಶದ ದೃಢೀಕರಣ ಪ್ರತಿ ಮತ್ತು ಈ ಆದೇಶವನ್ನು ಪಡೆಯಲು ಸಿಂಧುವಳ್ಳಿ ತಾಯಿ ಮತ್ತು ಸುಧಾ ಅವರು ಸಲ್ಲಿಸಿರುವ ದಾಖಲೆಗಳ ದೃಢೀಕರಣ ಪ್ರತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ 2018ರ ಜನವರಿ 17ರಂದು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಅಂದಿನ ತಹಸೀಲ್ದಾರ್ ರಮೇಶ್‍ಬಾಬು ಅವರು ಅರ್ಜಿದಾರರಿಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲ ಸದಾನಂದ ಗೌಡ ಅವರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಮೇಲ್ಮನವಿಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ 2018ರ ಜುಲೈ 6 ರಂದು 2ನೇ ಮೇಲ್ಮನವಿಯನ್ನು ಕರ್ನಾಟಕ ಮಾಹಿತಿ ಆಯೋಗಕ್ಕೆ ಸಲ್ಲಿಸಿದ್ದರು.

ಮಾಹಿತಿ ಆಯೋಗವು 2018ರ ಡಿಸೆಂಬರ್ 20ಕ್ಕೆ ವಿಚಾರಣೆ ದಿನಾಂಕ ಗೊತ್ತು ಪಡಿಸಿ, ತಹಸೀಲ್ದಾರ್ ರಮೇಶ್‍ಬಾಬು ಅವರಿಗೆ ನೋಟೀಸ್ ಜಾರಿಗೊಳಿಸಿತ್ತು. ಆದರೆ, ತಹಸೀಲ್ದಾರರು ಆಯೋಗದ ಮುಂದೆ ಹಾಜರಾಗಲೂ ಇಲ್ಲ. ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿಲ್ಲ. ಅಲ್ಲದೇ, ಅರ್ಜಿದಾರರಿಗೆ ಮಾಹಿತಿಯನ್ನು ನೀಡಲಿಲ್ಲ. ಈ ಕಾರಣಕ್ಕಾಗಿ ತಹಸೀಲ್ದಾರ್ ರಮೇಶ್‍ಬಾಬು ಅವರಿಗೆ 10 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಫೆ. 12ರಂದು ಆದೇಶಿಸಿದೆ.

Translate »