ಅತೃಪ್ತ ಶಾಸಕರ ಹಿಡಿದಿಡಲು ಸಂಪುಟ ಪುನರ್ ರಚನೆ
ಮೈಸೂರು

ಅತೃಪ್ತ ಶಾಸಕರ ಹಿಡಿದಿಡಲು ಸಂಪುಟ ಪುನರ್ ರಚನೆ

July 9, 2019

ಬೆಂಗಳೂರು, ಜು.8(ಕೆಎಂಶಿ)-ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಸಚಿವ ಸಂಪುಟವನ್ನು ಸಂಪೂರ್ಣ ಪುನರ್ ರಚನೆ ಮಾಡು ವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದ ರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೆಲವು ಸದಸ್ಯರಿಗೆ ಸಚಿವರಾಗಬೇಕೆಂಬ ಆಸೆ ಇದೆ ಮತ್ತು ಇತರ ಸಮಸ್ಯೆಗಳಿವೆ. ನಾವು ಅದನ್ನು ಬಗೆಹರಿಸುತ್ತೇವೆ. ಯಾರೂ ಆತುರದ ನಿರ್ಧಾರ ತೆಗೆದುಕೊಂಡು ಬಿಜೆಪಿ ಸೇರಬಾರದು ಎಂದರು.

ಪಕ್ಷೇತರ ಅಭ್ಯರ್ಥಿ ಶಂಕರ್ ಸೇರಿ ಕಾಂಗ್ರೆಸ್ ಪಾಲಿನ 22 ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಂಡರೂ ನಾವು ಬದ್ಧ. ರಾಜೀನಾಮೆ ನೀಡಿರುವ ಸಚಿವರಿಗೆ ಅಭಿನಂದನೆ ಹೇಳುತ್ತೇನೆ. ಬಿಜೆಪಿ ಯವರು ನಮ್ಮ ಶಾಸಕರನ್ನು ಬಲವಂತವಾಗಿ ವಿಶೇಷ ವಿಮಾನದಲ್ಲಿ ಬೆಳಿಗ್ಗೆ ಕರೆದುಕೊಂಡು ಹೋಗಿದ್ದಾರೆ.

ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲ. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಿಜೆಪಿಗೆ ಹಾನಿಯಾಗಲಿದೆ ಎಂದರು. ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ. ಅತೃಪ್ತರ ಪೈಕಿ ಕೆಲವರಿಗೆ ಸಚಿವರಾಗಬೇಕೆಂಬ ಆಸೆ ಇದೆ. ಅವರಿಗೆ ಅವಕಾಶ ಕಲ್ಪಿಸಲಾಗುವುದು. ನಾವು ಅವರ ಸಮಸ್ಯೆಗಳನ್ನು ಆಲಿಸಲು ಸಿದ್ದರಾಗಿದ್ದೇವೆ. ಮುಂಬೈನಿಂದ ವಾಪಸ್ ಬರುವಂತೆ ಮನವಿ ಮಾಡಿದ್ದೇವೆ. ಅತೃಪ್ತರನ್ನು ಕರೆತರಲು ಯಾರೂ ಹೋಗಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿದೆ. ರಾಜೀನಾಮೆ ನೀಡಿರುವ ಸಚಿವರು ನಮಗೆ ಅಧಿಕಾರ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿ ಮುಖ್ಯ ಎಂದು ಹೇಳಿದ್ದಾರೆ ಎಂದರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಜನಾದೇಶ ಸಿಕ್ಕಿಲ್ಲ. ಬಿಜೆಪಿಗೆ ಹೆಚ್ಚಿನ ಮತಗಳು ಮತ್ತು ಹೆಚ್ಚಿನ ಸ್ಥಾನ ಬಂದಿರಬಹುದು. ಸರ್ಕಾರ ರಚಿಸಬೇಕಾದ ಮ್ಯಾಜಿಕ್ ನಂಬರ್‍ನಷ್ಟು ಸಂಖ್ಯಾಬಲ ಇಲ್ಲ. ಕಾಂಗ್ರೆಸ್-ಜೆಡಿಎಸ್ ಜೊತೆಗೂಡಿರುವುದರಿಂದ ಶಾಸಕರ ಸಂಖ್ಯೆ 120 ಆಗಿದ್ದು, ಸರ್ಕಾರ ರಚಿಸುವಷ್ಟು ಬಲ ನಮ್ಮ ಬಳಿ ಇದೆ. ಆದರೆ ಬಹುಮತ ಇಲ್ಲದ ಬಿಜೆಪಿ, ಕೇಂದ್ರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ ಎಂದರು.

ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಬಳಕೆಗೆ ಕಾಂಗ್ರೆಸ್ ಚಿಂತನೆ

ಬೆಂಗಳೂರು,ಜು.8(ಎಸಿಪಿ)-ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿ ಸಲು ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ನಿವೃತ್ತ ಅಡ್ವೋಕೇಟ್ ಜನರಲ್ ಗಳು ಹಾಗೂ ನಿವೃತ್ತ ನ್ಯಾಯಾಧೀಶರ ಸಲಹೆಯನ್ನು ಪಡೆಯಲಾಗಿದೆ ಎಂದು ಹೇಳಲಾಗಿದೆ. ಅತೃಪ್ತರನ್ನು ಸಮಾಧಾನ ಪಡಿಸಲು ಈಗಾಗಲೇ ಸಚಿವರು ಸಾಮ ೂಹಿಕ ರಾಜೀನಾಮೆ ಅಸ್ತ್ರ ಪ್ರಯೋಗಿಸಿ ರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇದು ವಿಫಲವಾದರೆ ಶಾಸಕರನ್ನು ಅನರ್ಹತೆ ಗೊಳಿಸಲು ವಿಧಾನಸಭಾಧ್ಯಕ್ಷರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಸಕರುಗಳು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಒಡೆ ತನದ ಖಾಸಗಿ ವಿಮಾನದಲ್ಲಿ ಪ್ರಯಾಣಿ ಸಿರುವುದನ್ನೇ ಕಾರಣವಾಗಿಟ್ಟುಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ಉರುಳಿಸಲು ಪ್ರಯತ್ನಪಡುತ್ತಿದ್ದಾರೆ
ಎಂದು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬೇಕೆಂದು ದೂರು ನೀಡಲು ಕಾಂಗ್ರೆಸ್ ಮುಖಂಡರು ಸಜ್ಜಾಗಿದ್ದಾರೆ. ಇಂದು ರಾತ್ರಿ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಿಂದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಂದೇ ಕಾರಿನಲ್ಲಿ ತೆರಳಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಏಕಾಂಗಿಯಾಗಿ ಅವರನ್ನು ಹಿಂಬಾಲಿಸಿದ್ದು, ಇವರುಗಳು ನಿವೃತ್ತ ನ್ಯಾಯಾಧೀಶರೊಬ್ಬರ ಜೊತೆ ಚರ್ಚೆ ನಡೆಸುವ ಸಲುವಾಗಿ ಅಜ್ಞಾತ ಸ್ಥಳಕ್ಕೆ ತೆರಳಿದರು ಎಂದು ಮೂಲಗಳು ಹೇಳಿವೆ.

 

Translate »