ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಗೆ’ ಒತ್ತು ಅಗತ್ಯ
ಮೈಸೂರು

ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಗೆ’ ಒತ್ತು ಅಗತ್ಯ

October 17, 2019

ಮೈಸೂರು, ಅ.16(ಆರ್‍ಕೆಬಿ)- ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ ಮತ್ತು ಸಂಸ್ಕರಣೆ’ಗೆ ರೈತರು ಹೆಚ್ಚು ಒತ್ತು ನೀಡ ಬೇಕು ಎಂದು ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಅಯ್ಯಪ್ಪನ್ ಸಲಹೆ ನೀಡಿದರು.

ಮೈಸೂರಿನ ಕರ್ನಾಟಕ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ತಂತ್ರ ಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರಿನ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಏರ್ಪಡಿ ಸಿದ್ದ `ವಿಶ್ವ ಆಹಾರ ದಿನಾಚರಣೆ ಹಾಗೂ ರಾಷ್ಟ್ರೀಯ ಮಹಿಳಾ ರೈತ ದಿನಾಚರಣೆ’ಗೆ ಚಾಲನೆ ನೀಡಿ, ಮಾತನಾಡಿದರು. `ನಮ್ಮ ಕೃತ್ಯ ಗಳೇ ನಮ್ಮ ಭವಿಷ್ಯ- ಹಸಿವು ಮುಕ್ತ ವಿಶ್ವಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿಗಳು; ಇದು ವಿಶ್ವ ಆಹಾರ ದಿನದ ಈ ವರ್ಷದ ವಿಷಯ ವಾಗಿದೆ. ಹೆಚ್ಚು ಆಹಾರ ಉತ್ಪಾದನೆಗೆ ನಾವು ಅಣಿಗೊಳ್ಳಬೇಕಿದ್ದು, ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ ಈ ಕುರಿತ ಸಂಶೋಧನೆಗಳು ಹೆಚ್ಚಬೇಕಿದೆ ಎಂದು ಉತ್ತೇಜನದ ಮಾತನಾಡಿದರು.

ಹವಾಮಾನ ವೈಪರೀತ್ಯ ಇನ್ನಿತರ ಕಾರಣ ಗಳಿಂದ ಇಂದು ಆಹಾರ ಉತ್ಪಾದನೆ ಕುಂಠಿತ ವಾಗಿದೆ. 30,000ಕ್ಕಿಂತ ಹೆಚ್ಚಿನ ರೀತಿಯ ಆಹಾರ ಬೆಳೆಗಳಿದ್ದರೂ 200 ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದೇವೆ. ಅದರಲ್ಲೂ ರಾಗಿ ಮೊದಲಾದ 8 ಬೆಳೆಗಳನ್ನೇ ಹೆಚ್ಚು ಬೆಳೆಯು ತ್ತಿದ್ದೇವೆ. ಕೃಷಿಯಲ್ಲಿ ಹೆಚ್ಚು ಉಪಯುಕ್ತ, ಪ್ರೋಟೀನ್‍ಯುಕ್ತ ಆಹಾರ ಬೆಳೆಗೆ ಒತ್ತು ನೀಡದಿದ್ದರೆ ಮುಂದೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಜಾಗೃತಿ ಮೂಡಿಸಲೆತ್ನಿಸಿದರು. ನಮ್ಮಲ್ಲಿ ಒಂದೆಡೆ ಜೈವಿಕ ವೈವಿಧ್ಯವಿದೆ. ಆದರೆ ಕೃಷಿ ಭೂಮಿಯ ವಿಸ್ತಾರ ಕಡಿಮೆಯಾಗು ತ್ತಿದೆ. ನೈಸರ್ಗಿಕ ಆಪತ್ತು ಇದೆ. ಕೃಷಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಚಿಂತನೆ ಅಗತ್ಯ. ಒಬ್ಬ ರೈತನ ಕುಟುಂಬದ ಪ್ರತಿ ತಿಂಗಳ ಸರಾಸರಿ ಆದಾಯ 8ರಿಂದ 9 ಸಾವಿರ, ಅಂದರೆ ವಾರ್ಷಿಕ 1 ಲಕ್ಷ ರೂ. ಗಳಲ್ಲಿ ಆ ಕುಟುಂಬ ಸಂಸಾರ ತೂಗಿಸು ವುದು ಹೇಗೆ? ಎಂಬ ಪ್ರಶ್ನೆ ಇದೆ. ಅವರ ಆದಾಯ ದ್ವಿಗುಣಗೊಳಿಸುವುದು ಹೇಗೆ? ಎಂಬ ಬಗ್ಗೆಯೂ ಸಂಶೋಧಕರು ಚಿಂತನೆ ನಡೆಸಬೇಕು ಎಂದು ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಮಹಿಳೆ ಹನುಮನಹಳ್ಳಿ ಇಂದಿರಮ್ಮ ನಾಗ ಭೂಷಣಾರಾಧ್ಯ ಅವರು, ರಾಷ್ಟ್ರೀಯ ಮಹಿಳಾ ರೈತ ದಿನಾಚರಣೆ ಕುರಿತು ಮಾತನಾಡಿ ದರು. ಜಂಟಿ ಕೃಷಿ ನಿರ್ದೇಶಕ ಡಾ.ಎಂ. ಮಹಂತೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಯಲಚಹಳ್ಳಿ ತೋಟಗಾರಿಕಾ ಮಹಾವಿದ್ಯಾ ಲಯದ ಡೀನ್ ಡಾ.ಜನಾರ್ದನ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಆರ್. ಕೃಷ್ಣಯ್ಯ, ಸುತ್ತೂರು ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅರುಣ್ ಬಳಮಟ್ಟಿ, ಆತ್ಮಾ ಯೋಜನಾ ನಿರ್ದೇಶಕ ಡಾ.ಡಿ.ಎಸ್.ಸೋಮಶೇಖರ್, ಉಪ ಯೋಜನಾ ನಿರ್ದೇಶಕ ಕೆ.ಆರ್.ರವೀಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »