ಮಾಜಿ ಕಾರ್ಪೊರೇಟರ್ ಪತಿ ಅಣ್ಣಯ್ಯನ ಮೇಲೆ ಲಾಂಗ್‍ನಿಂದ ಹಲ್ಲೆ
ಮೈಸೂರು

ಮಾಜಿ ಕಾರ್ಪೊರೇಟರ್ ಪತಿ ಅಣ್ಣಯ್ಯನ ಮೇಲೆ ಲಾಂಗ್‍ನಿಂದ ಹಲ್ಲೆ

March 7, 2020

ಮೈಸೂರು, ಮಾ.6(ಆರ್‍ಕೆ)-ಗ್ರಾಮ ದೇವತೆ ಹಬ್ಬದ ಸಿದ್ಧತೆ ವೇಳೆ ಉಂಟಾದ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ, ಸಮಾಧಾನಪಡಿಸಲೆತ್ನಿಸಿದ ಮಾಜಿ ಕಾರ್ಪೊರೇಟರ್ ರಜನಿ ಅವರ ಪತಿ ಅಣ್ಣಯ್ಯರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಗಾಯಗೊಳಿಸಿ ರುವ ಘಟನೆ ಮೈಸೂರು ತಾಲೂಕು ಯರಗನ ಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಘಟನೆಯಲ್ಲಿ ತಲೆಗೆ ಗಾಯಗಳಾಗಿರುವ ಸಿದ್ದೇಗೌಡರ ಮಗ ಅಣ್ಣಯ್ಯರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಣ್ಣಯ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಣ್ಣಯ್ಯರ ಮೇಲೆ ಹಲ್ಲೆ ನಡೆಸಿ, ಅವರ ಹತ್ಯೆಗೆತ್ನಿಸಿದ ಮಹದೇವು ಎಂಬುವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿ ಸಿದ್ದು, ತಲೆಮರೆಸಿಕೊಂಡಿರುವ ಚಿದಂಬರನ ಪತ್ತೆಗೆ ಆಲನಹಳ್ಳಿ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗ್ರಾಮದೇವತೆ ಮಾರಮ್ಮನ ಹಬ್ಬದ ಹಿನ್ನೆಲೆಯಲ್ಲಿ ತಮಟೆ ಬಾರಿಸುವ ತಾಲೀಮು ನಡೆಸುವ ಸಂಬಂಧ ಗಲಾಟೆ ಉಂಟಾಗಿದೆ. ಇದು ರಾಜ ಕೀಯ ವೈಷಮ್ಯಕ್ಕೆ ತಿರುಗಿ, ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ (ಮಾ.10) ನಡೆಯಲಿರುವ ಗ್ರಾಮದೇವತೆ ಮಾರಮ್ಮ ಹಬ್ಬದ ತಂಬಿಟ್ಟು ಆರತಿ ಮೆರವಣಿಗೆಗಾಗಿ ಯರಗನಹಳ್ಳಿಯ ಮಾರಮ್ಮನ ದೇವಸ್ಥಾನದೆದುರು ತಮಟೆ ಬಾರಿಸುವ ತಾಲೀಮು ಗುರುವಾರದಿಂದ ಆರಂಭವಾಗಿದೆ. ರಾತ್ರಿ 8ರಿಂದ ರಾತ್ರಿ 9.30 ಗಂಟೆವರೆಗೆ ತಮಟೆ ಬಾರಿಸುತ್ತಿದ್ದ ಸದ್ದಿಗೆ ಕೆಲ ಯುವಕರು ಸ್ಟೆಪ್ ಹಾಕಿ, ಸಂಭ್ರಮಿಸು ತ್ತಿದ್ದರು. ಇನ್ನೇನು ತಮಟೆ ತಾಲೀಮು ಮುಗಿಸಬೇಕೆಂಬ ಸಮಯಕ್ಕೆ ಅಲ್ಲಿಗೆ ಬಂದ ಮಹದೇವ ಮತ್ತು ಚಿದಂಬರ, ನಾವೂ ಸ್ಟೆಪ್ ಹಾಕಬೇಕು, ತಮಟೆ ಬಡಿಯಿರಿ ಎಂದರು. ಒಂದೂವರೆ ಗಂಟೆಯಿಂದ ತಮಟೆ ಬಾರಿಸಿ ದಣಿದಿದ್ದೇವೆ, ನಾಳೆ ಬನ್ನಿ ಎಂದು ತಮಟೆ ಬಾರಿಸುವವರು ಹೇಳಿದ್ದಾರೆ. ಅದರಿಂದ ಕೆರಳಿದ ಮಹದೇವ, ಚಿದಂಬರ ಗಲಾಟೆ ಮಾಡಲಾರಂಭಿಸಿದರು. ವಿಷಯ ತಿಳಿದ ತಕ್ಷಣ ಗ್ರಾಮದ ಮುಖಂಡರಾದ ಅಣ್ಣಯ್ಯ ಹಾಗೂ ಇತರರು ಸ್ಥಳಕ್ಕೆ ತೆರಳಿ ಸಮಾಧಾನಪಡಿಸಲು ಮುಂದಾದರು. ಹಬ್ಬ ಇನ್ನೂ ನಾಲ್ಕು ದಿನ ಇದೆ. ಪ್ರತೀ ದಿನ ರಾತ್ರಿ ತಾಲೀಮು ನಡೆಯುತ್ತದೆ. ನಾಳೆ ಬಂದು ನೀವೂ ಕುಣಿಯುವಿರಂತೆ, ಈಗ ಹೋಗಿ ಎಂದು ಹೇಳಿದ ಅಣ್ಣಯ್ಯರಿಗೆ ತಿರುಗಿ ಬಿದ್ದ ಯುವಕರು, ಅವರೊಂದಿಗೆ ವಾದಕ್ಕಿಳಿದಿದ್ದಾರೆ. ಗಲಾಟೆ ಗುಂಪಿನಲ್ಲಿ ಮಹದೇವು ಅಣ್ಣಯ್ಯರತ್ತ ಲಾಂಗ್ ಬೀಸಿದ್ದಾನೆ. ಅದೃಷ್ಟವಶಾತ್ ಲಾಂಗ್‍ನ ಮೊನಚಾದ ಭಾಗದ ಬದಲು ವಿರುದ್ಧ ಬದಿಯ ಭಾಗ ತಗುಲಿ ಸಣ್ಣಪುಟ್ಟ ಗಾಯಗಳಾಗಿದೆ. ತಕ್ಷಣ ಅಲ್ಲೇ ನೆರೆದಿದ್ದ ಗ್ರಾಮಸ್ಥರು ಮಹದೇವನನ್ನು ಬೆನ್ನತ್ತಿ ಹಿಡಿದರಾದರೂ, ಚಿದಂಬರ ಕತ್ತಲಲ್ಲಿ ಪರಾರಿಯಾದ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಆಲನಹಳ್ಳಿ ಠಾಣೆ ಪೊಲೀಸರು, ಮಹದೇವ ನನ್ನು ವಶಕ್ಕೆ ತೆಗೆದುಕೊಂಡರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಚಿದಂಬರನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Translate »