ನಾಳೆ ಶ್ರೀ ಚಾಮರಾಜೇಂದ್ರ  ಮೃಗಾಲಯದಲ್ಲಿ ವಿಶ್ವ ಉರಗ ದಿನಾಚರಣೆ
ಮೈಸೂರು

ನಾಳೆ ಶ್ರೀ ಚಾಮರಾಜೇಂದ್ರ  ಮೃಗಾಲಯದಲ್ಲಿ ವಿಶ್ವ ಉರಗ ದಿನಾಚರಣೆ

July 15, 2018

ಮೈಸೂರು:  ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜು.16ರಂದು ವಿಶ್ವ ಉರಗ ದಿನಾಚರಣೆ ಏರ್ಪಡಿಸಲಾಗಿದೆ.

ಉರಗಗಳು ಅದ್ಬುತ ಸೃಷ್ಟಿಯಾಗಿದ್ದು, ನಮ್ಮ ಜಗತ್ತಿನಲ್ಲಿ ಕನಿಷ್ಠ 3 ಸಾವಿರ ವಿವಿಧ ಜಾತಿಯ ಉರಗಗಳು ಭೂಮಂಡಲದಾದ್ಯಂತ ಕಂಡು ಬರುತ್ತವೆ. ಸರೀಸೃಪಗಳ ಸಂರಕ್ಷಣೆಯ ಮಹತ್ವ ಹಾಗೂ ಅಪಾಯದಂಚಿನಲ್ಲಿರುವ ಅವುಗಳ ವಿನಾಶದ ಬಗೆಗಿನ ಕಾರಣಗಳನ್ನು ತಿಳಿದುಕೊಂಡು, ಕಾರ್ಯೋನ್ಮುಖರಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಅಂಟಾರ್ಟಿಕಾ ಹೊರತುಪಡಿಸಿ, ಪ್ರಪಂಚದ ಎಲ್ಲಾ ಭಾಗಗಳಲ್ಲಿ ಗರಿಷ್ಠ 32 ಅಡಿ ಉದ್ದ ದಿಂದ ಹಿಡಿದು ಕನಿಷ್ಠ ಸಣ್ಣ ರೀತಿಯ ಉರಗಗಳು ವಾಸವಾಗಿರುವುದು ಕಂಡು ಬರುತ್ತವೆ. ಇವುಗಳಲ್ಲಿ ಶೇಕಡ ಕಾಲು ಭಾಗದಷ್ಟು ಮಾತ್ರ ವಿಷಪೂರಿತವಾದವುಗಳಾಗಿವೆ.

ಅವುಗಳು ಹೆಚ್ಚಾಗಿ ಮಾನವ ಸಂಪರ್ಕ ಇಲ್ಲದ ಕಡೆ ಜೀವಿಸಲು ಬಯಸುತ್ತವೆ ಹಾಗೂ ಅದೇ ರೀತಿ ಬದುಕುತ್ತವೆ. ಅವುಗಳ ಸ್ವಚ್ಛಂದ ಬದುಕಿನಲ್ಲಿ ಮಾನವನ ಪ್ರವೇಶವಾದಾಗ ಮಾತ್ರ ಹಾಗೂ ಅವುಗಳಿಗೆ ಮಾನವ ಏನಾದರೂ ತೊಂದರೆ ಮಾಡಿದಲ್ಲಿ ಮಾತ್ರ ಹಾವು ಕಡಿತದಂತಹ ಪ್ರಕರಣಗಳು ಸಂಭವಿಸುತ್ತವೆ. ಭಾರತದಲ್ಲಿ ಬಹಳ ಮುಖ್ಯವಾದ 4 ಜಾತಿಯ ವಿಷಪೂರಿತ ಉರಗಗಳು ಕಂಡುಬರು ತ್ತವೆ. ವಿಶ್ವಉರಗ ದಿನದಂದು ಪ್ರಾಣಿತಜ್ಞರು / ಪರಿಸರತಜ್ಞರು, ಪರಿಸರ ಪ್ರೇಮಿಗಳು, ಉರಗಗಳ ಬಗ್ಗೆ ಜನರಲ್ಲಿ ಇರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ಪರಿಸರಕ್ಕೆ ಅವುಗಳ ಅಗತ್ಯತೆ ಬಗ್ಗೆ ಅರಿವು ಮೂಡಿಸುವುದಕ್ಕೆ ಬಳಸಿಕೊಳ್ಳುವುದು ಹೆಚ್ಚು ಸೂಕ್ತವೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವು “ವಿಶ್ವ ಉರಗ ದಿನದ” ಆಚರಣೆ ಅಂಗವಾಗಿ ಮೃಗಾಲಯದ ಸಭಾಂಗಣದಲ್ಲಿ ಖ್ಯಾತ ಉರಗ ತಜ್ಞ ಬಾಲಸುಬ್ರಹ್ಮಣ್ಯಂ (ಸ್ನೇಕ್ ಶಾಂ) ಅವರಿಂದ ಅಪರಾಹ್ನ 4 ಗಂಟೆಗೆ ಉಪನ್ಯಾಸ ಏರ್ಪಡಿಸಿದೆ. ಉಚಿತವಾಗಿ ಭಾಗವಹಿಸಬಹುದಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಜು.16ರಂದು ಅಪರಾಹ್ನ 3.30 ಗಂಟೆಯೊಳಗೆ ಇಮೇಲ್ ಮೂಲಕ ಅಥವಾ ದೂ. ಸಂಖ್ಯೆ: 2520302/2440752 ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಜೊತೆಗೆ, ಮೃಗಾಲಯದ ಪ್ರವೇಶ ದ್ವಾರದ ಬಳಿ ಉರಗಗಳ ಬಗೆಗಿನ ಮಾಹಿತಿ ಫಲಕಗಳನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಪ್ರದರ್ಶಿಸಲಾಗುವುದು. ಮೃಗಾಲಯಕ್ಕೆ ಭೇಟಿ ನೀಡುವ ವೀಕ್ಷಕರುಇದರ ಪ್ರಯೋಜನ ಪಡೆದುಕೊಳ್ಳಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶ್ರೀ ಚಾಮರಾಜೇಂದ್ರ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »